ಇಂದೋರ್ : ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದ ದುರಂತ ಘಟನೆ ವರದಿಯಾಗಿದೆ. ಈ ಮಕ್ಕಳು ಒಡಹುಟ್ಟಿದವರಾಗಿದ್ದು, ಮೃತ ಮಕ್ಕಳನ್ನು ಪೂನಮ್ (06), ಬುಲ್ಬುಲ್ (04) ಮತ್ತು ಪ್ರತೀಕ್ (03) ಎಂದು ಗುರುತಿಸಲಾಗಿದೆ ಎಂದು ಸಾನ್ವಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಿಗ್ಗೆ ಮನೆಯಿಂದ ಆಟವಾಡಲು ಹೊರಗೆ ಬಂದ ಈ ಮಕ್ಕಳು ಕೆಟ್ಟು ನಿಲ್ಲಿಸಿದ್ದ ಕಾರಿನೊಳಗೆ ಹೊಕ್ಕು, ಕೊನೆಗೆ ಕಾರಿನ ಡೋರ್ ತೆರೆಯಲು ಸಾಧ್ಯವಾಗದೆ, ಸುಮಾರು ಮೂರು ಗಂಟೆಗಳ ಬಳಿಕ ಉಸಿರುಗಟ್ಟಿ ಸಾವನ್ನಪ್ಪಿದರು. ಕಾರು ತುಂಬಾ ಹಳೆಯದಾಗಿದ್ದು, ಹಲವು ಕಾಲಗಳಿಂದ ಅದು ಅಲ್ಲೇ ದಪ್ಪದ ಪದರದ ಧೂಳಿನಿಂದ ಆವೃತ್ತವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ವ್ಯಕ್ತಿಯ ಕಣ್ಣಿಗೆ ಈ ಮಕ್ಕಳು ಬಿದ್ದಿದ್ದು, ಕೂಡಲೇ ಅವರು ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ಮಕ್ಕಳು ಸಾವನ್ನಪ್ಪಿದ್ದಾಗಿ ವೈದ್ಯರು ದೃಡೀಕರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply