ಮಂಡಿ: ಎಂಟು ಸ್ಪೂನ್‌, 2 ಸ್ಕ್ರೂ ಡ್ರೈವರ್‌, ಎರಡು ಟೂತ್‌ ಬ್ರಷ್‌, ಕಿಚನ್‌ ಚಾಕು ಮತ್ತು ಚಿಲಕವನ್ನು ವೈದ್ಯರು ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಹೊರತೆಗೆದಿರುವ ಅಪರೂಪದ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಘಟಿಸಿದೆ. 35 ವರ್ಷದ ಮಾನಸಿಕ ಅಸ್ವಸ್ಥ ಕರ್ಣ ಸೇನ್‌ ಎಂಬಾತ ಹೊಟ್ಟೆ ಸಮಸ್ಯೆಯಿಂದಾಗಿ ಶ್ರೀ ಲಾಲ್‌ ಬಹದ್ದೂರ್‌ ಶಾಸ್ತ್ರಿ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ದಾಖಲಾಗಿದ್ದ. ಹೊಟ್ಟೆಯ ಮೇಲೆ ಗುಳ್ಳೆಗಳು ಏಳುತ್ತಿದ್ದರಿಂದಾಗಿ ಸುಂದೇರ್‌ನಗರ ಪಟ್ಟಣದ ಕ್ಲಿನಿಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುವ ವೇಳೆ ಹೊಟ್ಟೆಯಲ್ಲಿ ಚಾಕು ಇದ್ದದ್ದು ಪತ್ತೆಯಾದ ಬಳಿಕ ಆತನನ್ನು ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿತ್ತು. ನಂತರ ಪರಿಶೀಲಿಸಿ ಶಸ್ತ್ರ ಚಿಕಿತ್ಸೆ ನಡೆಸಿದಾಗ ವೈದ್ಯರಿಗೆ ಅಚ್ಚರಿ ಕಾದಿತ್ತು!
ಎಕ್ಸ್‌ರೇಯಲ್ಲಿ ಹೊಟ್ಟೆಯಲ್ಲಿ ಚಾಕುವೊಂದೇ ಅಲ್ಲದೆ ಇನ್ನು ಹಲವಾರು ವಸ್ತುಗಳು ಇರುವುದು ತಿಳಿದುಬಂದಿದೆ. ಮೂವರು ತಜ್ಞ ವೈದ್ಯರ ತಂಡ ಸತತ ನಾಲ್ಕು ಗಂಟೆಗಳ ಆಪರೇಷನ್‌ ಬಳಿಕ ಹೊಟ್ಟೆಯಲ್ಲಿನ ಚಾಕು ಮತ್ತು ಇತರೆ ವಸ್ತುಗಳನ್ನು ಹೊರ ತೆಗೆದಿದ್ದಾರೆ.

ಇದೊಂದು ಅಪರೂಪದ ಪ್ರಕರಣವಾಗಿದೆ. ಪರೀಕ್ಷೆಯ ಬಳಿಕ ಹೊಟ್ಟೆಯಲ್ಲಿ ಇತರೆ ಲೋಹದ ವಸ್ತುಗಳಿರುವುದು ತಿಳಿಯಿತು. ನಮ್ಮ ತಂಡವು ಕೂಡಲೇ ಆಪರೇಷನ್‌ ಮಾಡಿತು. ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಸಾಮಾನ್ಯ ವ್ಯಕ್ತಿಗಳು ಇವುಗಳನ್ನು ಸೇವಿಸಲು ಸಾಧ್ಯವಿಲ್ಲ ಎಂದು ವೈದ್ಯ ನಿಖಿಲ್‌ ತಿಳಿಸಿದ್ದಾರೆ.
ಸದ್ಯ ರೋಗಿಯು ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ.‌ಆದರೆ ಈ ವಸ್ತುಗಳೆಲ್ಲ ಆತನ ಹೊಟ್ಟೆ ಹೇಗೆ ಸೇರಿತು ಎಂಬುದು ಮಾತ್ರ ನಿಗೂಢವಾಗಿದೆ.

Leave a Reply