ಕಾಶ್ಮೀರ:ಭಾರತೀಯ ಸೇನೆಯ ಹುತಾತ್ಮ ಯೋಧ ಔರಂಗಜೇಬ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಸ್ಥರಾಗಿರುವ ಕಾಶ್ಮೀರಿ ಯುವಕರು ತಮ್ಮ ತಮ್ಮ ಉದ್ಯೋಗ ತೊರೆದು ಭಾರತೀಯ ಸೇನೆಗೆ ಸೇರಲಿದ್ದಾರೆ ಎಂದು ವರದಿಯಾಗಿದೆ.

ಖಾಸಗಿ ವಾಹಿನಿಯೊಂದರ ವರದಿಯಂತೆ ಗಲ್ಫ್ ರಾಷ್ಟ್ರಗಳಲ್ಲಿ ವಿವಿಧ ಉದ್ಯೋಗಳಲ್ಲಿರುವ ಮಂದಾರ್ ಗ್ರಾಮದ ಯೋಧ ಔರಂಗಜೇಬ್ ಆಪ್ತ ಸ್ನೇಹಿತರು ಎಂದು ಹೇಳಲಾಗುತ್ತಿರುವ ಕಿರಾಮತ್, ಮಹಮದ್ ತಾಜ್ ಸೇರಿದಂತೆ ಸುಮಾರು 50 ಮಂದಿ ಯುವಕರು ತಮ್ಮ ಉದ್ಯೋಗಗಳಿಗೆ ಶಾಶ್ವತವಾಗಿ ಗುಡ್ ಬೈ ಹೇಳುತ್ತಿದ್ದು, ಸ್ವಗ್ರಾಮಕ್ಕೆ ಮರಳಿ ಭಾರತೀಯ ಸೇನೆ ಸೇರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಔರಂಗಜೇಬ್ ಅಂತ್ಯಕ್ರಿಯೆಯಂದೇ ಶಪಥ ಮಾಡಿದ್ದ ಸ್ನೇಹಿತರು ಇನ್ನು ವರದಿಯಲ್ಲಿರುವಂತೆ ಜೂನ್ 14 ರಂದು ಔರಂಗಜೇಬ್ ಹತ್ಯೆ ವಿಚಾರ ತಿಳಿದ ಕೂಡಲೇ ಸ್ನೇಹಿತರು ಕಾಶ್ಮೀರಕ್ಕೆ ಮರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಸಂದರ್ಭದಲ್ಲೇ ತಮ್ಮ ಸ್ನೇಹಿತ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶಪಥ ಮಾಡಿದ್ದರಂತೆ.

ಈ ಬಗ್ಗೆ ಮಾತನಾಡಿರುವ ಔರಂಗಜೇಬ್ ಸ್ನೇಹಿತರಲ್ಲಿ ಒಬ್ಬರಾಗಿರುವ ಮಹಮದ್ ಕಿರಾಮತ್ ಅವರು, ನಮ್ಮ ಸ್ನೇಹಿತ ಕೊಲೆಯಾದ ವಿಚಾರ ಕೇಳಿ ನಿಜಕ್ಕೂ ನಾವು ಆಘಾತಕ್ಕೊಳಗಾದೆವು. ಕೂಡಲೇ ಸ್ವಗ್ರಾಮಕ್ಕೆ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆವು. ಅಂದೇ ನಾವು ಭಾರತೀಯ ಸೇನೆ ಸೇರಲು ನಿರ್ಧರಿಸಿದೆವು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಗಲ್ಫ್ ಉದ್ಯೋಗದಿಂದ ಬಿಡುವು ದೊರೆಯಲಿಲ್ಲ. ಇದೀಗ ನಮ್ಮ ಎಲ್ಲ ಕೆಲಸಗಳನ್ನೂ ಪೂರ್ಣ ಮಾಡಿದ್ದು. ಶಾಶ್ವತವಾಗಿ ಕಾಶ್ಮೀರದಲ್ಲೇ ನೆಲೆಸಲು ಸಿದ್ಧವಾಗಿದ್ದೇವೆ. ನಾವೂ ಕೂಡ ಔರಂಗಜೇಬ್ ನಂತೆ ಸೇನೆ ಸೇರುತ್ತಿದ್ದೇವೆ. ನಮ್ಮಂತೆ ಸುಮಾರು 50 ಮಂದಿ ಯುವಕರು ಒಟ್ಟುಗೂಡಿದ್ದು, ಎಲ್ಲರೂ ಸೇನೆ ಸೇರುತ್ತಿದ್ದೇವೆ. ನಮ್ಮ ಗುರಿಯೊಂದೇ ಅದು ಔರಂಗಜೇಬ್ ಹಂತಕರನ್ನು ಬೇಟೆಯಾಡುವುದು. ಖಂಡಿತಾ ಉಗ್ರರರನ್ನು ಹುಡುಕಿ ಸೆದೆ ಬಡಿಯುತ್ತೇವೆ” ಎಂದು ಹೇಳಿದ್ದಾರೆ.

ನಮ್ಮ ಸ್ನೇಹಿತ ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.ಆತ ದೇಶದ್ರೋಹಿಗಳ ವಿರುದ್ಧ ಹೋರಾಡುತ್ತಿದ್ದ. ಅದನ್ನೇ ತಪ್ಪು ಎಂದು ಆತನನ್ನು ಕೊಂದು ಹಾಕಿದ್ದಾರೆ. ಇದೀಗ ಆತನನ್ನೇ ನಾವು ಹಿಂಬಾಲಿಸಿದ್ದೇವೆ. ಧೈರ್ಯವಿದ್ದರೆ ನಮ್ಮ ಬಳಿ ಉಗ್ರರು ಬರಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

Leave a Reply