ಭಾರತ ಡಿಜಿಟಲ್ ಗೊಳ್ಳುತ್ತಿದ್ದರೂ ಹಳ್ಳಿಗಳಲ್ಲಿ ಜನರಿಗೆ ಸರಿಯಾದ ನೆಟ್ವರ್ಕ್ ಸಿಗುತ್ತಿಲ್ಲ. ಇದೀಗ ಎಲ್ಲವೂ ಆನ್ಲೈನ್ ಆದ್ದರಿಂದ ಪ್ರತಿಯೊಂದಕ್ಕೂ ಅದನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬುರೋಡ್ ತಹಸಿಲ್‌ನ ಘಟನೆಯೊಂದು ಬೆಳಕಿಗೆ ಬಂದಿದೆ. ನೆಟ್ವರ್ಕ್ ಸಮಸ್ಯೆಯಿಂದ 75 ವರ್ಷದ ವೃದ್ಧೆಯೋರ್ವರು ಕಷ್ಟ ಪಟ್ಟು ಕೊನೆಗೆ ಹಳ್ಳಿಯ ಜನರ ಸಹಾಯದಿಂದ ಪಡಿತರ ಮತ್ತು ಪಿಂಚಣಿ ಪಡೆದು ಕೊಂಡಿದ್ದಾರೆ. ವೃದ್ದೆ ಮಹಿಳೆಯನ್ನು ಸುಮಾರು 3 ಕಿಮೀ ಎತ್ತಿ ಎತ್ತರಕ್ಕೆ ಕೊಂಡು ಹೋದ ಬಳಿಕ ಅವರಿಗೆ ನೆಟ್ವರ್ಕ್ ಸಿಕ್ಕಿದೆ.
ಈ ಮಹಿಳೆಯ ಹೆಸರು ಮೋತ್ರಿ ಗರಸಿಯ. ಆಧಾರ್ ಅಂತರ್ನಿರ್ಮಿತ ಯಂತ್ರದೊಂದಿಗೆ ಪೋಸ್ಟ್ ಮ್ಯಾನ್ ಪಿಂಚಣಿ ಪಾವತಿಸಲು ಬಂದಿದ್ದರು. ಆದರೆ ಗ್ರಾಮದಲ್ಲಿ ನೆಟ್ವರ್ಕ್ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ ಅವರ ಕುಟುಂಬದ ಸದಸ್ಯರು ಅವರನ್ನು ಎತ್ತಿಕೊಂಡು ಬೆಟ್ಟ ಪ್ರದೇಶಕ್ಕೆ ಕರೆದು ಕೊಂಡು ಹೋದರು. ಮಾತ್ರವಲ್ಲ ಪೋಸ್ಟ್ ಮ್ಯಾನ್ ಕೂಡ ಅವರ ಜೊತೆಗೆ ಹಿಂಬಾಲಿಸಿಕೊಂಡು ಹೋಗಿದ್ದರು. ಜೊತೆಗೆ ಎಲ್ಲಿ ನೆಟ್ವರ್ಕ್ ಸಿಗುತ್ತದೆ ಎಂದು ಪರಿಶೀಲನೆ ನಡೆಸುತ್ತಾ ಇದ್ದರು.

ಸುಮಾರು ಮೂರು ಕಿಲೋ ಮೀಟರ್ ನಂತರ ಅವರಿಗೆ ನೆಟ್ವರ್ಕ್ ಸಿಕ್ಕಿದೆ. ಪೋಸ್ಟ್‌ಮ್ಯಾನ್ ಮಹಿಳೆಯ ಹೆಬ್ಬೆರಳನ್ನು ಜೋಡಿಸಿ ಪಿಂಚಣಿ ಪಾವತಿಸಿದರು. ದೈನಿಕ್ ಭಾಸ್ಕರ್ ವರದಿಯಲ್ಲಿ ಸುತ್ತಮುತ್ತಲಿನ 24 ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಎಂದು ವರದಿಯಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಈ ಬಗ್ಗೆ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.