ದುಬೈ: ಭಾರತದ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಅವರು ಕ್ರಿಕೆಟ್ ಆಟವನ್ನು ಧರ್ಮದಂತೆ ಪ್ರೀತಿಸುವ ದೇಶ ಭಾರತದಲ್ಲಿ ಬ್ಯಾಟಿಂಗ್ ಮಾಂತ್ರಿಕರಾದ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿನನ್ನು ಹೆಸರಿಸಿದ್ದಾರೆ.

ಗಾವಸ್ಕರ ಪ್ರಕಾರ ಟೀಮ್ ಇಂಡಿಯಾಗೆ ಎರಡು ವಿಶ್ವ ಕಪ್ ಗೆದ್ದುಕೊಟ್ಟಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ವೀಕ್ಷಕ ವಿವರಣೆಗಾಗಿ ಸದ್ಯ ಯುಎಇಯಲ್ಲಿರುವ ಗಾವಸ್ಕರ್‌, ಧೋನಿ ಬಗ್ಗೆ ಮಾತನಾಡಿದ್ದಾರೆ.

ಧೋನಿ ಅವರು ಕ್ರಿಕೆಟ್ ಸಂಸ್ಕೃತಿ ಅಷ್ಟೇನೂ ಇಲ್ಲದ ರಾಂಚಿಯಿಂದ ಬಂದವರು. ಆದರೆ ಇಡೀ ದೇಶವೇ ಅವರನ್ನು ಪ್ರೀತಿಸುತ್ತದೆ. ತೆಂಡೂಲ್ಕರ್ ಅವರು ಮುಂಬೈ ಮತ್ತು ಕೊಲ್ಕತದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಕೊಹ್ಲಿ ಅವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ, ಧೋನಿ ಅವರು ಭಾರತದ ಎಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಗಾವಸ್ಕರ್ ವಿವರಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ 13ನೇ ಆವೃತ್ತಿಯಲ್ಲಿ 436 ದಿನಗಳ ಬಳಿಕ ಕ್ರಿಕೆಟ್ ಮೈದಾನಕ್ಕೆ ಮರಳಿರುವ 39 ವರ್ಷದ ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನೊಂದಿಗೆ ಭರ್ಜರಿ ಪುನರಾಗಮನ ಸಾರಿದ್ದಾರೆ. ಪಂದ್ಯದಲ್ಲಿ ಧೋನಿ ತೆಗೆದುಕೊಂಡ ಕೆಲ ಅಚ್ಚರಿಯ ನಿರ್ಧಾರಗಳು ಅನುಭವದ ಮಹತ್ವವನ್ನು ಸಾರಿದ್ದು, ಅಭಿಮಾನಿಗಳ ಮನವನ್ನೂ ಗೆದ್ದಿದ್ದಾರೆ. ಐಪಿಎಲ್ ಮುನ್ನ ಕಳೆದ ಆಗಸ್ಟ್ 15ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

Leave a Reply