ರಮಝಾನ್ ತಿಂಗಳಲ್ಲಿ ಮುಸ್ಲಿಮರು ಸಂಪೂರ್ಣವಾಗಿ ಹಗಲಿನ ವೇಳೆ ಆಹಾರ ಪಾನೀಯ ದೇಹೇಚ್ಛೆಗಳನ್ನು ತೊರೆಯಬೇಕಾಗಿದೆ. ಮಾತ್ರವಲ್ಲ ಕೆಟ್ಟ ಯೋಚನೆಗಳನ್ನು, ಕೆಟ್ಟ ಕೆಲಸಗಳನ್ನು ತೊರೆಯಬೇಕಾಗಿದೆ. ಹಾಗಿದ್ದರೆ ಮಾತ್ರ ಉಪವಾಸ ಪೂರ್ತಿಯಾಗುವುದು. ಪ್ರೀತಿ, ಪ್ರಾಮಾಣಿಕತೆ, ಅರ್ಪಣೆ, ತ್ಯಾಗಸನ್ನದ್ಧತೆ ಎಂಬ ಗುಣಗಳನ್ನು ಇದರ ಮೂಲಕ ಅವರು ಗಳಿಸುತ್ತಾರೆ. ಜೊತೆಗೆ ಸಾಮೂಹಿಕ ಪ್ರಜ್ಞೆ, ಸಹನೆ, ನಿಸ್ವಾರ್ಥ, ಇಚ್ಛಾ ಶಕ್ತಿ ಮುಂತಾದ ಗುಣಗಳು ಬೆಳೆಯಲು ಇದು ಸಹಾಯಕವಾಗಿದೆ.
ಇಂತಹ ಒಂದು ಪ್ರಯತ್ನದ ಅಂಗವಾಗಿ ಮಂಗಳೂರಿನ ಬ್ಯಾರಿ ಝುಲ್ಫಿ “Free Ifthar point” ಎಂಬ ಹೊಸ ಪರಿಕಲ್ಪನೆಯನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಅವರೊಂದಿಗೆ ನಮ್ಮ ಪ್ರತಿನಿಧಿಯವರು ಮಾಡಿದ ಸಂದರ್ಶನ..
- ಈ “Free Ifthar point” ಆಯೋಜಿಸಲು ನಿಮಗೆ ಪ್ರೇರಣೆ ಏನು?
ರಮಝಾನ್ ಹಿಂದಿನ ವಾರದ ಜುಮಾ ನಮಾಝ್ ನಲ್ಲಿ ಉಪಾವಾಸ ಮತ್ತು ಇಫ್ತಾರ್ ಪುಣ್ಯದ ಬಗ್ಗೆ ಖುತ್ಬಾದಲ್ಲಿ ಜ.ರಫೀಯುದ್ದೀನ್ ರವರು ವಿವರಿಸಿದ್ದರು. ಆಗ ಈ ನಿಟ್ಟಿನಲ್ಲಿ ಏನಾದರೂ ವಿಶೇಷವಾಗಿ ಮಾಡಬೇಕು ಎಂದು ಮನಸ್ಸು ಬಯಸಿತು. ನಂತರ ಗೂಗಲ್ ನಲ್ಲಿ ವಿವಿಧ ಇಫ್ತಾರ್ ಬಗ್ಗೆ ನಾನು ಹುಡುಕಾಡಿದೆ. ಹೇಗೆಲ್ಲಾ, ಯಾವ ವಿಧಾನದಲ್ಲೆಲ್ಲಾ ಇಫ್ತಾರ್ ಮಾಡುತ್ತಾರೆ ಎಂಬುದು ಅದರಲ್ಲಿ ಇತ್ತು. ಮಾತ್ರವಲ್ಲ, ಇಫ್ತಾರ್ ಗಾಗಿ ಜನರು, ಅದರಲ್ಲೂ ಬಡ ದುಡಿಯುವ ಮಧ್ಯಮ ವರ್ಗದವರು ಸಮಯವನ್ನು ನಿಗದಿ ಪಡಿಸಿ ಮಸೀದಿಗೋ ಮನೆಗೋ ಹೋಗುತ್ತಾರೆ. ವಿಶೇಷವಾಗಿ ಹೈವೇ ಹೆದ್ದಾರಿಗಳಲ್ಲಿ ಅತಿವೇಗದಲ್ಲಿ ಹೋಗುತ್ತಾರೆ. ಯಾತ್ರಾರ್ಥಿಗಳು , ಮಹಿಳೆಯರನ್ನು ಹೊತ್ತುಕೊಂಡ ಕಾರುಗಳು ಇರುತ್ತವೆ. ಇಂತಹ ಪ್ರದೇಶದಲ್ಲಿ ಮಸೀದಿಯೂ ಕೆಲವೊಮ್ಮೆ ಅವರಿಗೆ ತಿಳಿದಿರುವುದಿಲ್ಲ. ಮಹಿಳೆಯರಿಗೆ ಇಫ್ತಾರ್ ಸೌಲಭ್ಯ ಇರುವುದಿಲ್ಲ. ಈ ನಿಟ್ಟಿನಲ್ಲಿ ಒಂದು ಹೊಸ ಆಲೋಚನೆ ಹೊಳೆಯಿತು. ನನ್ನ ಪತ್ನಿ ತಫ್ಸಿ ಕೂಡ ಧೈರ್ಯ ತುಂಬಿದಳು. ಕೆಲವು ಸ್ನೇಹಿತರು ಧೈರ್ಯ ತುಂಬಿದರು. ಅಲ್ಲಾಹನು ಸಹಾಯ ಮಾಡುವನು ಎಂಬ ಭರವಸೆ ಇತ್ತು. ಹಾಗೆಯೇ ಆಯಿತು. ಎಲ್ಲವೂ ಸುಲಭದಲ್ಲಿ ನೆರವೇರಿತು. ಅಲ್ಹಮ್ದುಲಿಲ್ಲಾಹ್…
- ಹತ್ತು ದಿನದಲ್ಲಿ ನಿಮಗೆ ಹೇಗೆ ಪ್ರತಿಕ್ರಿಯೆ ಸಿಕ್ಕಿದೆ?
ಅಲ್ಹಮ್ದುಲಿಲ್ಲಾಹ್ ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಒಂದು ವ್ಯಾಪಾರ ಅಲ್ಲ. ಆದ್ದರಿಂದ ಹತ್ತಿಪ್ಪತ್ತು ಜನ ಬರಬಹುದು ಎಂದು ನಿರೀಕ್ಷಿಸಿದ್ದೆ. ಒಬ್ಬರೂ ಬರಲಿಕ್ಕಿಲ್ಲ ಎಂಬ ಮುಜುಗರ ಕೂಡ ಇತ್ತು. ಆದರೆ ಮೊದಲ ದಿನವೇ 60-65 ಜನ ಬಂದಿದ್ದರು. ಈಗ ಕೆಲವೊಮ್ಮೆ ನಾರಾರು ಜನ ಇರುತ್ತಾರೆ. ಇಂದು ನೀವೇ ನೋಡಿದ್ದೀರಿ ಎಷ್ಟು ಮಂದಿ ಬಂದಿದ್ದರು ಎಂದು. ಈಗ ಸರಿಸುಮಾರು 150 ಮಂದಿ ಇರುತ್ತಾರೆ. ನಿಜವಾಗಿ ಜನರ ಸಂಖ್ಯೆ ಮುಖ್ಯ ಅಲ್ಲ. ಒಬ್ಬರಾದರೂ ಬಂದು ಇಫ್ತಾರ್ ಮಾಡಿದರೆ ನಮ್ಮ ಉದ್ದೇಶ ಸಾರ್ಥಕ. ದೇವನು ಸಂಖ್ಯೆ ನೋಡುವುದಿಲ್ಲ, ಅದು ಮುಖ್ಯವೂ ಅಲ್ಲ. ಅಲ್ಲಾಹನು ನಮ್ಮ ಮನಸ್ಸನ್ನು ನೋಡುತ್ತಾನೆ…ಅಷ್ಟೇ ನಮಗೆ ಸಾಕು…
ಮಾತ್ರವಲ್ಲ, ಬೈಕ್, ರಿಕ್ಷಾ, ಕಾರಿನಲ್ಲಿ ಜನ ಬಂದು ಇಫ್ತಾರ್ ನಲ್ಲಿ ಸೇರುತ್ತಾರೆ. ಅದರಲ್ಲಿ ಹಿಂದೂ ಡ್ರೈವರ್ ಗಳೂ ನಮ್ಮ ಜೊತೆ ಸೇರಿ ಇಫ್ತಾರ್ ನಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರು ಬಸ್ಸಿನಲ್ಲಿ ತಲಪಾಡಿ, ಕೇರಳ ಹೋಗುವವರೂ ಕೈ ತೋರಿಸಿ ಫಲಾಹಾರಗಳನ್ನು ಕೇಳಿ ಪಡೆಯುತ್ತಾರೆ. ಆಗ ಕಂಡಕ್ಟರ್ ಡ್ರೈವರ್ ಗಳಿಗೂ ನಾವು ಫಲಾಹಾರ ನೀಡುತ್ತೇವೆ. ಈಗ ಸ್ವತಃ ಡ್ರೈವರ್ ಗಳು ನಮ್ಮ ಇಫ್ತಾರ್ ಪಾಯಿಂಟ್ ಬಳಿ ಸ್ಟಾಪ್ ಕೊಡುತ್ತಾರೆ.ಅವರ ಕಣ್ಣಿನಲ್ಲಿ ಧನ್ಯತೆ ಸೌಹಾರ್ದತೆ ಪ್ರೀತಿ ಎದ್ದು ಕಾಣುತ್ತದೆ. ನಿಜವಾಗಿ ಮನಸ್ಸಿಗೆ ತುಂಬಾ ಸಂತೋಷ ಆಗಿದೆ.
- ಪ್ರತಿ ದಿನಾ ಎಷ್ಟು ಮಂದಿ ಇಫ್ತಾರ್ ನಲ್ಲಿ ಪಾಲ್ಗೊಳ್ಳುತ್ತಾರೆ? ಅವರ ಅಭಿಪ್ರಾಯ ಏನು?
ಮೊದಲ ದಿನ 60-65 ಮಂದಿಯಿಂದ ಪ್ರಾರಂಭಿಸಿದೆವು. ಮೊದಲು ಜನರಿಗೆ Free Ifthar Point ಬಗ್ಗೆ ಮಾಹಿತಿ ಇರಲಿಲ್ಲ. ಈಗ ಅವರಿಗೆ ಗೊತ್ತಾಗಿದೆ. ಆದ್ದರಿಂದ ಸರಿಸುಮಾರು 150-200 ವರೆಗೂ ಈಗ ಜನ ಬಂದು ಇಫ್ತಾರ್ ನಲ್ಲಿ ಭಾಗವಹಿಸುತ್ತಾರೆ.
ಅಲ್ಲಿ ಬಂದ ಜನರಲ್ಲಿ ಈ ಬಗ್ಗೆ ನೀವೇ ಅಭಿಪ್ರಾಯ ಕೇಳಬಹುದು. ನಾನು ಯಾರ ಅಭಿಪ್ರಾಯ ಕೇಳಲು ಈ ಕೆಲಸಕ್ಕೆ ಇಳಿದದ್ದಲ್ಲ. ಈ ಕೆಲಸವನ್ನು ಮೆಚ್ಚಿ ಮಂಗಳೂರಿನ ಸ್ನೇಹಿತರು, ಗಲ್ಫ್ ನಲ್ಲಿರುವ ಸ್ನೇಹಿತರು ಈ ಪುಣ್ಯ ಕಾರ್ಯಕ್ಕಾಗಿ ಆರ್ಥಿಕವಾಗಿ ಸ್ವಲ್ಪ ಸ್ವಲ್ಪ ಸಾದ್ಯಂತ ಸಹಾಯ ಮಾಡುತ್ತಿದ್ದಾರೆ. ಕೆಲವರು ಇಫ್ತಾರ್ ಪಾಯಿಂಟ್ ಗೆ ಫಲಾಹಾರಗಳನ್ನು ತಂದು ನಮ್ಮ ಜೊತೆ ಸೇರುತ್ತಾರೆ.
- ಫ್ರೀ ಇಫ್ತಾರ್ ಪಾಯಿಂಟ್ ಎಂಬ ಹೆಸರು ಏಕೆ ಇಟ್ಟದ್ದು, ಹಣ ನೀಡಿ ಯಾರಾದರೂ ಇಫ್ತಾರ್ ಮಾಡಿಸುತ್ತಾರೆಯೇ?
ನೀವು ಹೇಳುತ್ತಿರುವುದು ಸರಿ. ಆದರೆ ನಮ್ಮ ಈ ಇಫ್ತಾರ್ ಪಾಯಿಂಟ್ ನಂತೆ ಕಾಣುವ ಕೆಲವು ಹಣ್ಣು ಹಂಪಲುಗಳ ವ್ಯಾಪಾರಿ ಅಂಗಡಿಗಳೂ ಇರುತ್ತವೆ. ಆದ್ದರಿಂದ ಜನರಿಗೆ ಕನ್ಫ್ಯೂಷನ್ ಆಗುವುದು ಬೇಡ ಎಂದು ಈ ಹೆಸರು ಇಟ್ಡಿದ್ದೇನೆ. ಮಾತ್ರವಲ್ಲ , ಕೆಲವು ಮುಗ್ಧರು ಇಫ್ತಾರ್ ಮಾಡಿ ಹಣ ನೀಡಲು ಮುಂದಾಗುತ್ತಾರೆ.
- Pirsa Foundation ಇದರ ಸ್ಥಾಪಕಾಧ್ಯಕ್ಷರಾಗಿದ್ದೀರಿ ಅದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿ?
Pirsa Foundation ಎಂಬುದು ಬ್ಯಾರಿ ಹೆಸರು. ಅರ್ಥ ಪ್ರೀತಿ ಫೌಂಡೇಶನ್ ಎಂದಾಗುತ್ತದೆ. ನಾನು ನಿಜವಾಗಿ ಬ್ಯಾರಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟವನು. ಬ್ಯಾರಿ, ಹಾಡು, ವಿಡಿಯೋ, ಇಂಟರ್ ವ್ಯೂ ಮುಂತಾದವು ಕಾರ್ಯಕ್ರಮ ಮಾಡುತ್ತಾ ಇರುತ್ತೇನೆ.
ಅದರ ಜೊತೆಗೆ ಸಮಾಜ ಸೇವೆ ಎಂಬುದು ಕೂಡ ನನ್ನ ಆಸಕ್ತಿಯ ಕ್ಷೇತ್ರ. ಅದನ್ನು ಬಹಳಷ್ಟು ಮಂದಿ ಮಾಡುತ್ತಾರೆ. ಹಣ ಡೊನೇಶನ್ ಪಡೆದು ಮಾಡುತ್ತಾರೆ. ಆದರೆ ನಮ್ಮ ಫೌಂಡೇಶನ್ ಕೇವಲ ಡೊನೇಶನ್ ಹಣದಿಂದ ಕೆಲಸ ಮಾಡಲು ಬಯಸುವುದಿಲ್ಲ. ಸಮಾಜದಲ್ಲಿ ಹಣ ಖರ್ಚು ಮಾಡದೆ ಬಹಳಷ್ಟು ಸೇವೆ ಮಾಡಬಹುದು. ಕಳೆದ ರಮಝಾನ್ ನಲ್ಲಿ ನಾವು ಇಫ್ತಾರ್ ನಂತರ ಉಳಿದ ಫಲಾಹಾರಗಳನ್ನು ಮನೆಮನೆಗೆ ಹೋಗಿ ಸಂಗ್ರಹಿಸಿ ಅದನ್ನು ರೈಲ್ವೆ ಸ್ಟೇಷನ್, ಮಾರ್ಗದ ಬದಿ ಮಲಗುವ ಬಡವರಿಗೆ ಹಂಚುತ್ತಿದ್ದೆವು. ಆಗ ನಮಗೆ ಜನರು ಉಳಿದ ಫಲಾಹಾರ ನೀಡುವುದಕ್ಕಿಂತ ಫ್ರೆಶ್ ಆಹಾರವನ್ನೂ ನೀಡುತ್ತಿದ್ದರು. ಆ ಆಹಾರ ಹಂಚಿಕೆ ಅದೊಂದು ಅದ್ಭುತ ಅನುಭವ. ಹಾಗೆಯೇ ಈ ಬಾರಿ ಫ್ರೀ ಇಫ್ತಾರ್ ಪಾಯಿಂಟ್. ಆದರೂ ಪಿರ್ಸ ಫೌಂಡೇಶನ್ ಔಪಚಾರಿಕವಾಗಿ ಪ್ರಾರಂಭವಾಗಿಲ್ಲ. ಈಗ ಅದರ ಕೆಲವು ಎಕ್ಪರಿಮೆಂಟ್ ಗಳನ್ನು ಮಾಡುತ್ತಿದ್ದೇವೆ.
- ಸಮಾಜಕ್ಕೆ ತಮ್ಮ ಸಂದೇಶ ಏನು?
ಸಮಾಜಕ್ಕೆ ಸಂದೇಶ ಕೊಡುವಷ್ಟು ದೊಡ್ಡ ಮಟ್ಟಕ್ಕೆ ನಾನು ಬೆಳೆದಿಲ್ಲ. ಸಮಾಜವೇ ನನಗೆ ಕಲಿಸುತ್ತಿದೆ. ನಾನು ಬಹಳಷ್ಟು ಸಮಾಜದಿಂದ ಕಲಿಯುತ್ತಿದ್ದೇನೆ.
ಹಾಗೆಯೇ ಸಮಾಜ ಸೇವೆ ಮಾಡುವವರಿಗೆ ಕೆಲವರು ದೂರ ಕೂತು ಏನೆಲ್ಲಾ ಠೀಕೆ ಮಾಡುತ್ತಾರೆ. ಅದು ಸಹಜ. ಕೆಲವೊಮ್ಮೆ ಬೇಸರ ಆಗುತ್ತದೆ. ಆದರೆ ಅದಕ್ಕಾಗಿ ನಾವು ತಲೆ ಕೆಡಿಸಬಾರದು. ನಾವು ಕೆಲಸ ಮಾಡುವುದನ್ನು ನಿಲ್ಲಿಸಬಾರದು.
ಹಾಗೆಯೇ, ಸಮಾಜ ಸೇವೆ ಮಾಡಲು ಬಹಳಷ್ಟು ಯುವಕರಿಗೆ ಮನಸ್ಸು, ಇರಾದೆ ಇರುತ್ತದೆ. ಸಲಹೆ ಕೊಡುತ್ತಾರೆ, ನನಗೆ ಅವರಲ್ಲಿ ಹೇಳಲಿಕ್ಕಿರುವುದು, ಯಾವುದೇ ಕೆಲಸ ಮಾಡಲು ಮನಸ್ಸಿದ್ದರೆ ಅವರು ಬರಲಿ, ಇವರು ಬರಲಿ ಎಂದು ಕಾಯಬಾರದು. ಆ ಕೆಲಸವನ್ನು ನಾವೇ ಮುಂದೆ ಹೋಗಿ ಮಾಡಬೇಕು. ಇಲ್ಲದಿದ್ದರೆ ಆ ಕೆಲಸ ಆಗುವುದೇ ಇಲ್ಲ.
ಸಮಾಜ ಸೇವೆ ಮಾಡಲು ಹಣ ಬೇಕು ಎಂಬುದು ತಪ್ಪು, ಮನಸ್ಸಿದ್ದರೆ ಸಾಕು. ನಂತರ ಅಲ್ಲಾಹನು ದಾರಿ ಸುಗಮಗೊಳಿಸುತ್ತಾನೆ. ನನಗೆ ಅದರ ಅನುಭವ ಆಗಿದೆ. ಇಂತಹ ಇಫ್ತಾರ್ ಪಾಯಿಂಟ್ ಎಲ್ಲರೂ ಸ್ವಯಂ ಮುಂದೆ ಬಂದು ದೇಶದಾದ್ಯಂತ ಮಾಡಬೇಕು. ಕೆಲವರು ಫೋನ್ ಮಾಡಿ ಕೆಲವು ಕಡೆ ಮಾಡುತ್ತಾರೆ ಎಂದಿದ್ದಾರೆ. ಹಾಗಾದರೆ ನಮ್ಮ concept success ಎನ್ನಬಹುದು.