ಒಕೆ ಅವರು ಬಡಿದು ಕೊಂದರು,ಇರಲಿ. ಇವಾಗ ನಿನ್ನ ಮೊಟ್ಟೆ ಬ್ರೆಡ್ ಎಲ್ಲಾ ಒಬ್ಬ ಹಸಿದವ ಕದಿಯುತ್ತಾನೆ. ಅವ ಕೈಗೆ ಸಿಕ್ಕಿದ್ದಾನೆ ಅಂದುಕೋ, ನೀನ್ ಏನ್ ರಿಯಾಕ್ಟ್ ಮಾಡ್ತೀಯಾ ಹೇಳು ? ನಿನ್ನ ಅತೀವ ಕೋಪಕ್ಕೆ ಮುಸುಡಿಗೊಂದು ಗುದ್ದುವುದು? ಇಲ್ಲಾ ಕಿವಿ ಹಿಂಡುವುದು? ಇಲ್ಲಾ ಸಣ್ಣ ಕೋಲೊಂದು ತಗೊಂಡು ಕಾಲಿಗೆರಡು ಬಾರಿಸುವುದು ಇಲ್ಲಾ ಪೊಲೀಸರಿಗೆ ಕೊಟ್ಟು ನಾಲಕ್ಕು ಒದೆ ಬೀಳಿಸುವುದು? ಏನು ಏನು ಮಾಡಬಹುದು ನೀನು ? ಬುದ್ಧನಾಗಿ “ಮೌನಂ” ಶರಣಂ ಗಚ್ಛಾಮಿ ಅಂದು ಬಿಟ್ಟು ನಡೆಯಬಹುದೇ ? ಬೇಡ ಸಾಯ್ಲಿ ನಾಲಕ್ಕು ಬೈದು ಅವನ ಕೈಯಿಂದ ಅದನ್ನು ಅಧಿಕಾರಯುತವಾಗಿ ಕಿತ್ತುಕೊಂಡು ಮನೆಯ ಕಡೆ ನಡೆಯಬಹುದೇ ? ಕನಿಷ್ಠ ಕಟ್ಟ ಕಡೆಯ ಮನುಷ್ಯತ್ವವಾದರೂ ಹೊತ್ತವನಂತೆ ? ಅಲ್ಲಿಗೆ ನ್ಯಾಯ ಮುಗಿಯಿತಾ ?

ಯಾರು ಕಳ್ಳ ?!! ಆ ಬಾಚಣಿಗೆ ಕಾಣದ ಕೂದಲಿನ ಹುಡುಗನೇ ? ಅಯ್ಯೋ ಬಾರಪ್ಪಾ ಕೆಳಗಿರುವ ಫೋಟೋ ಒಮ್ಮೆ ನೋಡಿಕೊಂಡು ಬಾ ಅವನ ಎದೆಗೂಡಿನಲ್ಲಿ ಒಂದಿಷ್ಟು ಕಳ್ಳನ ಚಹರೆ ಇದ್ದರೆ ಹುಡುಕಿ ತಂದು ನಿನ್ನ ನೀಟಾದ ಬೆರಳಿನಲ್ಲಿ ನಿನ್ನ ಶುಭ್ರ ಮಂಚದಲ್ಲಿ ಕೂತು ಒಮ್ಮೆ ಕಳ್ಳ ಅಂತ ಬರೆಯುವಿಯಂತೆ. ಒಬ್ಬ ಮಾನವಜೀವಕ್ಕೆ ಒಂದು ತುತ್ತು ಉಣಿಸಲೂ ಎಣಿಸದವರು, ಪೆಡಿಗ್ರೀ ಹಾಕಿ ನಾಯಿಗಳನ್ನು ಸಾಕುವ ಶೋಕಿಯವರ ನಡುವೆ ಹೀಗೆಲ್ಲ ಬರೆಯಬಾರದು ನಿಜ. ಆದರೆ ನಿಜವಾದ ಕಳ್ಳರು ಯಾರು ಎಂದು ಹೇಳದೇ ಹೋದರೆ ಇನ್ನಷ್ಟು ಕೊಲೆಗಳನ್ನು ನೋಡುವ ಪಾಪ ಮಾಡುವುದಾದರೂ ಹೇಗೆ ಮನುಷ್ಯನಾಗಿ ? ಕಳ್ಳರನ್ನು ತೋರಿಸಿಕೊಡಬೇಕು ತಾನೆ ನಿನಗೆ ? ಇರು.

ನೋಡು ನಿನ್ನ ಬಲಿಷ್ಠ ರಟ್ಟೆಗಳು ಸಾಮರ್ಥ್ಯವನ್ನು ಕದ್ದಿದೆ, ನಿನ್ನ ನುನುಪಾದ ಮಂಚ ಐಷಾರಾಮವನ್ನು ಕದ್ದಿದೆ, ನಿನ್ನ ಡೊಳ್ಳಾದ ಹೊಟ್ಟೆ ಅನಿಯಮಿತ ಆಹಾರವನ್ನು ಕದ್ದಿದೆ. ಅಂದವಿದ್ದರೂ ಮತ್ತೊಂದಿಷ್ಟು ಲಿಪ್ಸ್ಟಿಕ್ ಹಚ್ಚಿಕೊಂಡ ನಿನ್ನ ತುಟಿಗಳು ಆಹ್ಲಾದಗಳನ್ನು ಕದ್ದಿದೆ. ನಿನ್ನ ಸುದೃಢ ಮನೆ ಭಧ್ರತೆಯನ್ನ ಕದ್ದಿದೆ. ಮತ್ತೆ ಆ ಹಾಡಿಯಲ್ಲಿ ಬಿದಿರುಮನೆಯಲ್ಲಿ ಇಲ್ಲಾ ಮಣ್ಣಿನ ಗೋಡೆಗೆ ಕರಿ ಹಚ್ಚಿ ಬದುಕುವ ಹುಡುಗನನ್ನು ನಿನ್ನ ದಬ್ಬಾಳಿಕೆಯ ಲುಂಗಿಯಿಂದ ಕಟ್ಟಿ ಸೆಲ್ಫಿ ತೆಗೆದೆ ನೋಡು. ಆ ಫೋನ್ ಕೂಡ ತಂತ್ರಜ್ಞಾನವನ್ನು ಕದ್ದಿದೆ. ಕಳ್ಳ ಯಾರು ? ಯಾರು ? ಮತ್ತೊಮ್ಮೆ ಧೀರ್ಘವಾಗಿ ಕೇಳಿಕೋ ಯಾರು ಕಳ್ಳರು ? ಅವನಾ ? ನೀನಾ ? ನಾಚಿಕೆಯಾಗುತ್ತದೆ ಒಪ್ಪಿಕೊಳ್ಳಲಿಕ್ಕೆ. ಯಾಕೆಂದರೆ ನಿನ್ನಲ್ಲಿ ಅತೀವ ಬುದ್ಧಿವಂತಿಕೆಯಿದೆ. ಆ ಬುದ್ಧಿವಂತಿಕೆಗೆ ದೊರೆತ ಕೂಲಿಗೆ ನೀನು ಖರೀದಿಸಿದ್ದು ಅದೆಲ್ಲವೂ ಅದು ನಿನ್ನ ಹಕ್ಕು ಅಂತ ವಾದಿಸಲೂ ಉಪಯೋಗಿಸಬಹುದಾದ ಬುದ್ಧಿವಂತಿಕೆಯಿದೆ ನಿನ್ನಲ್ಲಿ. ನೀನು ವಾದಿಸುತ್ತೀಯಾ. ನಾನು ತೆರಿಗೆ ಕಟ್ಟಿ ಆ ಮೂಲಕ ರೇಷನ್ ಅಂಗಡಿಯಲ್ಲಿ ಪಡಿತರ ವಿತರಿಸುತ್ತೇನೆ. ಕದಿಯಂಗಿಲ್ಲ. ಹೌದು ಹೌದೌದು. ಆದರೆ ಎಲ್ಲಿಯವರೆಗೆ ನೀನು ಸ್ಥಾಪಿಸಿದ ಸರಕಾರ ಅದನ್ನು ಪೂರ್ಣಪ್ರಮಾಣದಲದಲ್ಲಿ ಮಾಡುತ್ತಿಲ್ಲ ಎಂಬುವುದನ್ನು ನೀನು ಒಪ್ಪಿಕೊಳ್ಳುತ್ತೀಯೋ ಅಲ್ಲಿಯವರೆಗೂ ಒಂದು ಮನುಷ್ಯಜೀವ ಹಸಿದು ಉಳಿದದ್ದರ ಜವಾಬ್ದಾರಿ ನಿನಗೂ ಇದೆ. ನೀನು ಯಾವ ಬುದ್ಧಿವಂತಿಕೆಯ ವಾದ ಹೂಡಿದರೂ. ಮನುಷ್ಯ ಜೀವವೇ ಏಕೆ ?

ಒಂದು ನಾಯಿಯೇ ಹಸಿದಿದ್ದರೂ ಒಂದು ಕಾಗೆಯೇ ಬಾಯರಿದರೂ ನಿನಗೆ ಜವಾಬ್ದಾರಿಯಿದೆ. ಯಾಕೆಂದರೆ ಇಲ್ಲಿ ಈ ಭೂಮಿಯಲ್ಲಿ ಬೀಳುವ ಮಳೆಗೆ ಆಮಳೆಯಿಂದ ಚಿಗುರುವ ಹಸಿರು ತೆನೆಯ ಮೇಲೆಲ್ಲಾ ಪ್ರತಿಯೊಂದು ಜೀವಜಾಲಕ್ಕೂ ಹಕ್ಕಿದೆ. ನೀನು ಬುದ್ಧಿವಂತನೂ ಮತ್ತೋರ್ವ ಆದಿವಾಸಿಯೋ ಆದ ತಕ್ಷಣ ಆ ಹಕ್ಕುಗಳ ನಿರಾಕರಣೆ ಆಗುವುದೇ ಇಲ್ಲ. ನಿನ್ನ ಬುದ್ಧಿವಂತಿಕೆಯ ಪಾಲನ್ನು ಪಡೆದು ಅದನ್ನು ಹಂಚುವುದೂ ನಿನ್ನದೇ ಜವಾಬ್ದಾರಿಯಿದೆ. ನೀನು ಮಂಚಗಳನ್ನ ಹಂಚಬೇಡ, ಸೂರಿನ ಮಾತಂತೂ ಬಿಡು, ಕಡೆಯ ಪಕ್ಷ ಒಂದು ತುತ್ತು ಅನ್ನ ಹಂಚಲು ಅಸಾಧ್ಯವೆಂದು ವಾದಿಸಿದರೆ ?? ಇಲ್ಲಾ ನೀನು ಸುಳ್ಳು ಹೇಳಬಹುದಷ್ಟೇ. ಸುಳ್ಳನ್ನು ಬಹಳವೇ ನೆಚ್ಚಿಕೊಳ್ಳುವ ನೀನು ಇನ್ನೂ ತೀವ್ರವಾಗಿ ನನ್ನಲ್ಲೂ ವಾದ ಹೂಡಬಹುದು. ನೀನು “ನನ್ನ ಮಗಳು ಫಾತಿಮಾ ಕದ್ದರೂ ನಾನವಳ ಕೈಕಡಿಯುತ್ತಿದ್ದೆ ಎಂದ ಧರ್ಮದ ಅನುಯಾಯಿಯಲ್ಲವೇ ? ನೀನು ಹೇಗೆ ಆ ಕಳ್ಳನನ್ನು ಸಮರ್ಥಿಸಬಲ್ಲೆ ಎಂದೂ ವಾದ ಹೂಡಬಹುದು . ಹೌದು ಅಲ್ಲಿ ಕದ್ದವರ ಕೈಕಡಿಯುದರ ಜೊತೆಗೆ ಕೊಂದವರ ತಲೆ ಕಡಿಯುವ ವಾದವೂ ಇದೆ. ಅದಕ್ಕಿಂತಲೂ ಮುಂಚೆ ಅಲ್ಲಿ ಹಸಿದವರನ್ನು ಉಪೇಕ್ಷಿಸುವವನು, ದೂರ ತಳ್ಳುವವನು ಆ ವಾದದೊಂದಿಗೆ ಯಾವ ಸಂಬಂಧವನ್ನೂ ಹೊಂದಿರುವುದಿಲ್ಲ ಎಂಬ ಸ್ಪಷ್ಟ ಧಿಕ್ಕಾರವಿದೆ. ಎಲ್ಲಾ ಸಮಾನತೆಯವಾದಗಳ ಬೋಂಗುಗಳನ್ನು ಮೀರಿ ಕಡ್ಡಾಯ ದಾನ ಮಾಡದವನೊಂದಿಗೆ ಯುದ್ಧ ಹೂಡುವ ನಿಷ್ಟುರತೆಯಿದೆ. ಹಾಗಾಗಿಯೇ ಆದಿವಾಸಿ ಹುಡುಗನೊಬ್ಬನ ಕೊಲೆಗೆ ಸಂತಾಪ ಸೂಚಿಸಿದವರೊಂದಿಗಾದರೂ ಒಂದಿಷ್ಟು ನಿಷ್ಟುರವಾಗಿ ಮಾತನಾಡಬೇಕು ಅಂದುಕೊಳ್ಳುತ್ತೇನೆ ನಾನು. ಏನು ? ನೀನು ಏನು ಮಾಡಬಲ್ಲೆ ಹೇಳು ? ಇರಲಿ ನೀನು ತೀರಾ ಬಡವನೇ ಇರಲಿ, ಕಡೆಯಪಕ್ಷ ನಿನ್ನ ಮಗು ಒಂದು ರುಪಾಯಿಯ ಚಾಕಲೇಟು ತಿನ್ನುವಾಗ ಮತ್ತೊಂದು ಚಾಕಲೇಟ್ ಕೈಗಿಟ್ಟು ಪಕ್ಕದ ಬರಿಗಾಲ ಮಗುವಿಗೆ ಕೊಡು ಎಂದು ಕಳಿಸುವ ಬದಲಾವಣೆಯಾದರೂ ನಿನ್ನಲ್ಲಿ ಆಗಬಹುದೇ ? ಹಾಗೇನಾದರೂ ಆದರೆ ಹೌದು ನೀನು ಆ ಆದಿವಾಸಿ ಹುಡುಗನಿಗೆ ನಿನ್ನ ಹೃದಯದಲ್ಲಿ ಗೋರಿ ತೋಡಿ ಕೊಟ್ಟು ಗೌರವ ಅರ್ಪಿಸಬಲ್ಲೆ. ಜಗತ್ತಿನ ಮುವತ್ತೇಳು ಶತಮಾನ ಸಂಪತ್ತು ಒಂದು ಪರ್ಸಂಟ್ ಜನರ ಕೈಯಲ್ಲಿ ಬಂಧಿಯಾಗಿರುವ ಈ ಕಾಲದಲ್ಲಿ ಹಸಿವಿನ ಮಾತನಾಡುವ ನಮಗೆ ನನ್ನ ಮತ್ತು ನಿನ್ನ ಮಗನ ಮೂಲಕವಾದರೂ ನಮ್ಮ ಮೇಲಿನ ಕಪ್ಪು ಚುಕ್ಕೆಯನ್ನು ನೀಗಿಸುವ ಕಟ್ಟ ಕಡೆಯ ಅವಕಾಶವನ್ನಾದರೂ ಇವತ್ತಿನಿಂದಲೇ ಮಾಡಬಹುದು ಯೋಚಿಸಿನೋಡು.

Juzt shafi

Leave a Reply