ಅಬ್ದುಲ್ ಜಬ್ಬಾರ್ ಪೊನ್ನುಡಿಯವರ ವ್ಯಕ್ತಿತ್ವ, ಆತ್ಮೀಯತೆ, ಧೈರ್ಯ, ಆತ್ಮಸ್ಥೈರ್ಯ ಎಲ್ಲವನ್ನೂ ಹತ್ತಿರದಿಂದ ನೋಡಿದವನು. ಅವರನ್ನು ನೋಡಿದ, ಅವರೊಂದಿಗೆ ಒಡನಾಡಿದ ಯಾರೇ ಆಗಲಿ ಅವರಿಂದ ಪ್ರಭಾವಿತರಾಗದೇ ಇರಲಾರರು.

ಕವನ, ಬರಹ, ಚುಟುಕುಗಳನ್ನು ಬರೆಯುತ್ತಿದ್ದ ಅವರ ಫೇಸ್‌ಬುಕ್‌ ಸ್ಟೇಟಸ್ ಗೆ ಲೈಕ್ ಕೊಡುತ್ತಿದ್ದೆ ಮತ್ತು ಅವರೂ ನನ್ನ ಕೆಲವು ಲೇಖನಗಳಿಗೆ ಲೈಕ್ ಕಮೆಂಟ್ ಕೊಡುತ್ತಿದ್ದರು. ಆದರೆ ಪರಸ್ಪರ ಮುಖತಃ ಭೇಟಿ ಆಗಿರಲಿಲ್ಲ.

  • ಮೊದಲ ಭೇಟಿ – ಆತ್ಮೀಯ ಒಡನಾಡಿ

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ಹಾಜಬ್ಬರವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೊದಲು ನಾವು ಪರಸ್ಪರ ಭೇಟಿಯಾಗಿದ್ದೆವು. ಅವರು ದ್ವಿಚಕ್ರ ವಾಹನ ಆಕ್ಟಿವಾದಲ್ಲಿ ಒಬ್ಬರೇ ಬಂದಿದ್ದರು. ನನಗೆ ಬಹಳ ಆಶ್ಚರ್ಯ ಆಗಿತ್ತು. ಅವರ ಸೊಂಟದ ಕೆಳಗೆ ಅಷ್ಟೊಂದು ಬಲ ಇರಲಿಲ್ಲ. ಆದರೂ ಧೈರ್ಯವಾಗಿ ಅವರು ಆಕ್ಟಿವಾ ಚಲಾಯಿಸಿ ಬಿಸಿ ರೋಡಿನಿಂದ ಮಂಗಳೂರಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಸ್ನೇಹಿತರ ಯಾವುದೇ ಅವಶ್ಯಕತೆ ಇದ್ದರೂ ಸದಾ ಸಿದ್ಧರಾಗುತ್ತಿದ್ದರು ಈ ಅಬ್ದುಲ್ ಜಬ್ಬಾರ್ ಪೊನ್ನುಡಿ.

  • ಅಪ್ಪಟ ಸಮಾಜ ಸೇವಕ

ಅಬ್ದುಲ್ ಜಬ್ಬಾರ್ ಪೊನ್ನುಡಿ ಅಪಾರ ಕಳಕಳಿ, ಬಡ ದುರ್ಬಲರ ಮೇಲೆ ಕಾಳಜಿ ವಹಿಸಿದವರಾಗಿದ್ದರು. ಒಮ್ಮೆ ನಾನು ಒಬ್ಬರ ವಿಷಯ ಪ್ರಸ್ತಾಪ ಮಾಡಿದಾಗ ಮೊದಲು ನನಗೆ ಹಣ ಕಳುಹಿಸಿಕೊಟ್ಟವರು ಇದೇ ಜಬ್ಬಾರ್. ಇಂತಹ ನೂರಾರು ಉದಾಹರಣೆ ಕಾಣಬಹುದು. ತನ್ನ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಯಾರೆಲ್ಲಾ ನನಗೆ ಗೌಪ್ಯವಾಗಿ ಸಹಾಯ ಮಾಡುತ್ತಿದ್ದರು ಎಂದು ನನ್ನಲ್ಲಿ ಹೇಳುತ್ತಿದ್ದರು. ಅವರಿಗಾಗಿ ಸದಾ ದುಆ ಮಾಡುತ್ತಿದ್ದರು.
ಸ್ನೇಹಿತರಲ್ಲಿ ಯಾರಾದರೂ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದರೆ ಅವರಿಗೆ ಕೂಡಲೇ ನೆರವಾಗುತ್ತಿದ್ದರು. ಯಾರಿಗೂ ತಿಳಿಯದಂತೆ ಸಹಾಯ ಮಾಡುವ ದೊಡ್ಡ ಗುಣ ಅವರಲ್ಲಿತ್ತು.


ಮಾತ್ರವಲ್ಲ ಸಕ್ರಿಯ ಸಮಾಜ ಸೇವಾ ಸಂಘವಾದ ಕೆಕೆಎಂಎ ಇದರ ಕರ್ನಾಟಕ ಬ್ರಾಂಚ್ ಕಾರ್ಯದರ್ಶಿಯಾಗಿ ನೇಮಕಗೊಂಡರು. ಸ್ವತಃ ರೋಗ ಪೀಡಿತರಾಗಿದ್ದು, ಆರ್ಥಿಕವಾಗಿ ಅಂತಹ ಹೇಳುವಂತಹ ಆದಾಯವಿಲ್ಲದಿದ್ದರೂ ಕೆಕೆಎಂಎ ಇದರ ಸರ್ವೆಗಾಗಿ ಖುದ್ದು ಜಬ್ಬಾರ್ ಪೊನ್ನುಡಿ ಹೋಗಿದ್ದರು. ಅದರ ವರದಿಯನ್ನು ನೀಡುತ್ತಿದ್ದರು. ಬಡವರ ಬಗ್ಗೆ ವಿಶೇಷ ಕಾಳಜಿ ಅವರಿಗಿತ್ತು. ಹಲವಾರು ಸಮಾಜ ಸೇವಾ ಪ್ರೊಜೆಕ್ಟ್ ಗಳನ್ನು ಮಾಡಿ ಮುಗಿಸಬೇಕು ಎಂದು ಸದಾ ಹೇಳುತ್ತಿದ್ದರು. ಇದಲ್ಲದೆ ಊರಿನಲ್ಲಿ ನಡೆಯುವ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

  • ಕನ್ನಡ ಗ್ಯಾಜೆಟ್ಸ್ ಮತ್ತು ಮಾಧ್ಯಮ ರಂಗದಲ್ಲಿ

ಜಬ್ಬಾರ್ ಪೊನ್ನುಡಿ ಇತ್ತೀಚೆಗೆ ಕನ್ನಡ ಯೂಟ್ಯೂಬ್ ಚಾನೆಲ್ ಮೂಲಕ ಹೆಚ್ಚು ಚಿರಪರಿಚಿತರಾದವರು. ಮೊಬೈಲ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅದರಲ್ಲಿ ನೀಡುತ್ತಿದ್ದರು. ಒಮ್ಮೆ ನಾವು ನಾಲ್ಕೈದು ಗೆಳೆಯರು ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಕೂತು ಮಾತನಾಡುತ್ತಾ, ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಇದ್ದಾಗ ಅವರು ತನ್ನ ಹಲವು ವರ್ಷದ ಕನಸನ್ನು ಬಿಚ್ಚಿದರು. ನನಗೆ ಇಂತಹ ವಿಡಿಯೋ ಮಾಡಬೇಕು. ಅದೇ ಅನೌಪಚಾರಿಕ ಸಭೆಯಲ್ಲಿ ಅವರ ಕನಸನ್ನು ಈಡೇರಿಸುವ ಬಗ್ಗೆ ತೀರ್ಮಾನ ಕೈಗೊಂಡೆವು ಮತ್ತು ಅದಕ್ಕೆ ಜನರಿಂದ ಅವರಿಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಇತ್ತೀಚೆಗೆ ಅವರು ಮಾಲ್ ನಲ್ಲಿ ತನ್ನ ಪತ್ನಿಯ ಜತೆ ಹೋಗುತ್ತಿದ್ದಾಗ ಓರ್ವ ಮಹಿಳೆ ಬಂದು ಹೇಳಿದರಂತೆ ನೀವು ಆ ವಿಡಿಯೋದಲ್ಲಿ ಬರುವವರಲ್ವೇ? – ಈ ಮಾತನ್ನು ಅವರು ಹೆಮ್ಮೆಯಿಂದ ಖುಷಿಯಿಂದ ಹೇಳಿದರು. ಜೊತೆಗೆ ಯಾರೇ ಯಾವ ಸಮಯದಲ್ಲಿ ಕರೆ ಮಾಡಿ ಮೊಬೈಲ್ ಅ್ಯಾಪ್, ಸಾಮಾಜಿಕ ಜಾಲತಾಣಗಳ ಟೆಕ್ನಿಕಾಲಿಟಿ ಬಗ್ಗೆ ಕೇಳಿದರೆ ಅವರ ಸಮಸ್ಯೆಯನ್ನು ತಕ್ಷಣ ಪರಿಹಾರ ಮಾಡಿಕೊಳ್ಳುತ್ತಿದ್ದರು. ಅದರ ಬಗ್ಗೆ ಅವರಿಗೆ ಕಿರಿಕಿರಿಯಾಗಲೀ ಯಾವುದೇ ಅಂತಹ ಲಕ್ಷಣ ಅವರ ಮಾತಿನಲ್ಲಿ ಗೊತ್ತಾಗುತ್ತಿರಲಿಲ್ಲ.

ಮಾತ್ರವಲ್ಲ ಮುಸ್ಲಿಮರು ಮಾಧ್ಯಮ ರಂಗದಲ್ಲಿ ಬಹಳ ಕಡಿಮೆ. ಆದರೂ ಸಾಮಾಜಿಕ ಜಾಲತಾಣಗಳು ಬಂದ ನಂತರ ಎಲ್ಲರೂ ಬರಹಗಾರರೇ. ಇದೇ ಸಂದರ್ಭದಲ್ಲಿ ವಿಕೆ ನ್ಯೂಸ್, ಇದು ನಮ್ಮ ಊರು, ನ್ಯೂಸ್ ಕನ್ನಡ ಎಂಬ ಕನ್ನಡ ನ್ಯೂಸ್ ವೆಬ್ಸೈಟ್ ಗಳು ಪ್ರಾರಂಭಗೊಂಡಾಗ ಅವರ ಸರ್ವ ಸಹಕಾರ, ಸಲಹೆ ಬರಹಗಳನ್ನು ನೀಡುತ್ತಿದ್ದವರು ಇದೇ ಜಬ್ಬಾರ್ ಪೊನ್ನುಡಿ. ಅದರ ಹಿಂದೆ ಯಾವುದೇ ಬೇಡಿಕೆಯಾಗಲೀ, ಸ್ವಾರ್ಥವಾಗಲೀ ಅವರಲ್ಲಿ ಇಲ್ಲ. ಇತರರು ಬೆಳೆಯುವುದನ್ನು ಕಂಡು ಸಂತೋಷ ಪಡುವವರಲ್ಲಿ ಜಬ್ಬಾರ್ ಒಬ್ಬರು.

  • ಪುಸ್ತಕ ಪ್ರೇಮಿ

ಜಬ್ಬಾರ್ ಭಾಯ್ ಆಸ್ಪತ್ರೆಗೆ ಬರುವಾಗ ಏನು ತರಲಿ ಎಂದಾಗ “ನನಗೆ ಪುಸ್ತಕಗಳು ಎಂದರೆ ಪಂಚಪ್ರಾಣ. ಪುಸ್ತಕಗಳು ನನ್ನ ನೆಚ್ಚಿನ ಸಹಪಾಠಿಗಳು” ಎನ್ನುತ್ತಿದ್ದರು. ಆದ್ದರಿಂದ ಅವರನ್ನು ಭೇಟಿಯಾಗಲು ಹೋಗುವಾಗ ಕೆಲವು ಪುಸ್ತಕಗಳನ್ನು ಕೊಂಡು ಹೋಗುತ್ತಿದ್ದೆ. ಅದರಲ್ಲಿ ವಿಶೇಷವಾಗಿ ಲಾಸ್ಟ್ ಲೆಕ್ಚರ್ ಎಂಬ ಕೃತಿ ಅವರಿಗೆ ಬಹಳ ಇಷ್ಟವಾಗಿತ್ತು. ಅದು ಕ್ಯಾನ್ಸರ್ ಪೀಡಿತ ವಿಜ್ಞಾನಿಯ ಜೀವನಾನುಭವದ ಅದ್ಭುತ ಮಾತುಗಳಾಗಿದ್ದವು. ಅದಲ್ಲದೇ ಇತರ ಕತೆ,ಕಾದಂಬರಿ, ಧಾರ್ಮಿಕ ಕೃತಿಗಳನ್ನು ಅವರಿಗೆ ನೀಡುತ್ತಿದ್ದೆ. ಅವರಲ್ಲಿ ಅಪ್ರತಿಮ ಓದುವ ಹವ್ಯಾಸ ಇತ್ತು. ಅದರ ಫಲವೇ ಅವರ ಜೊತೆ ಗಂಟೆಗಟ್ಟಲೆ ಸಮಯ ಕಳೆದರೂ ಸಮಯ ಹೋಗುವುದೇ ಗೊತ್ತಾಗುತ್ತಿರಲಿಲ್ಲ.


ನನ್ನ ಬಗ್ಗೆ ಇಸ್ಮತ್ ಪಜೀರ್ ಪುಸ್ತಕ ಬರೆಯಲಿದ್ದಾರೆ ಎಂದು ಹೇಳಿದ್ದರು. ಆಗ ನಿಜಕ್ಕೂ ಇದೊಂದು ಕೃತಿಯಲ್ಲಿ ಅನಾವರಣಗೊಳ್ಳಬೇಕಾದ ವ್ಯಕ್ತಿತ್ವ ಎನಿಸಿತ್ತು.

  • ಕ್ಯಾನ್ಸರನ್ನು ಗೆದ್ದ ಧೈರ್ಯಶಾಲಿ

ಮನುಷ್ಯ ಇಂತಹ ಖಾಯಿಲೆಗೆ ತುತ್ತಾದ ಕೂಡಲೇ ಸಂಪೂರ್ಣ ಅರ್ಧ ಜೀವ ಬಿಡುತ್ತಾರೆ. ಆದರೆ ಇಷ್ಟೊಂದು ಮಾರಕ ರೋಗ, ಅದರ ಜೊತೆಗೆ ಭಯಂಕರ ನೋವು ಆದರೆ ಒಮ್ಮೆಯೂ ಅವರು ದೇವರನ್ನು ಶಪಿಸಿದ್ದೋ, ದೇವರು ಯಾಕೆ ನನಗೆ ಇಂತಹ ರೋಗ ಕೊಟ್ಟ ಎಂಬ ಪರಿತಾಪವಾಗಲೀ ಅವರ ಬಾಯಲ್ಲಿ ಅಥವಾ ಕೃತಿಯಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ.
ಒಮ್ಮೆ ಅವರೊಬ್ಬ ಕ್ಯಾನ್ಸರ್ ಸ್ಪೆಷಲಿಸ್ಟ್ ಬಳಿ ಹೋದರು. ಅವರು ಅಷ್ಟು ಸುಲಭದಲ್ಲಿ ಯಾರಿಗೂ ಸಿಗುವುದಿಲ್ಲ. ಜಬ್ಬಾರ್ ರವರಿಗೆ ಕೇವಲ ಮೂರು ನಿಮಿಷ ಮಾತನಾಡಲು ಅವಕಾಶ ಅವರು ಕೊಟ್ಟರು. ಜಬ್ಬಾರ್ ರೋಗಿ ಎಂದು ಆ ಡಾಕ್ಟರ್ ರಿಗೆ ತಿಳಿದಿರಲಿಲ್ಲ. ಮೊದಲಿಗೆ ಯಾರದೋ ಬಗ್ಗೆ ಮಾತನಾಡಲು ಬಂದಿರಬಹುದು ಎಂದು ಭಾವಿಸಿದ್ದರು. ಆದರೆ ಜಬ್ಬಾರ್ ಪೊನ್ನುಡಿಯ ವ್ಯಕ್ತಿತ್ವವೇ ಹಾಗೆ. ಡಾಕ್ಟರ್ ಅವರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಮಾತನಾಡಿದರು. ನಂತರ ಹೇಳಿದರು, ನೀವು ಇಷ್ಟು ವರ್ಷ ಬದುಕಿದ್ದು ಹೇಗೆ?..ಅಂದರೆ 12 ವರ್ಷಗಳು ಅವರು ಸಾಗಿದ ಸಹನಾ ಜೀವನ ಅದನ್ನು ಬರಹದ ಮೂಲಕ ಹೇಳಲು ಸಾಧ್ಯವಿಲ್ಲ. ಸದಾ ನಗುಮುಖದಲ್ಲಿದ್ದ ಜಬ್ಬಾರ್ ಜೀವನದ ಇನ್ನೊಂದು ಯಾರಿಗೂ ಕಾಣದ ವರ್ಷನ್ ಅದಾಗಿತ್ತು. ಅವರ ತಂದೆಯವರೂ ಅವರ ಶುಶ್ರೂಷೆಗೆ ಸದಾ ಓರ್ವ ಸ್ನೇಹಿತನಂತೆ ಜೊತೆ ಇರುತ್ತಿದ್ದರು. ನನ್ನ ತಂದೆಯೇ ನನಗೆ ಹೀರೋ ಎಂದು ಹೇಳುತ್ತಿದ್ದರು.
ಜಬ್ಬಾರ್ ಪೊನ್ನುಡಿ ಬಹಳ ಸ್ವಾಭಿಮಾನಿ ವ್ಯಕ್ತಿತ್ವ. ನಾನೊಬ್ಬ ರೋಗಿ ಎಂಬ ಅನುಕಂಪವನ್ನು ಅವರು ಎಂದೂ ಬಯಸುತ್ತಿರಲಿಲ್ಲ. ಎಷ್ಟೋ ಮಂದಿಗೆ ಅವರಿಗೆ ಇಂತಹ ಮಾರಕ ರೋಗ ಇದೆಯೆಂದು ಬಹಳ ಕಾಲದ ವರೆಗೆ ತಿಳಿದಿರಲಿಲ್ಲ. ಆದರೂ ತನ್ನ ಸ್ವಾಭಿಮಾನವನ್ನು ಬದಿಗೊತ್ತಿ ಯೋಗಿಶ್ ಮಾಸ್ಟರ್ ನಿರ್ದೇಶನದ ಹಂಸಲೇಖ ಎಂಬ ಕ್ಯಾನ್ಸರ್ ಜಾಗೃತಿ ಸಿನೆಮಾದಲ್ಲಿ ನಟಿಸಿದರು. ನನ್ನಿಂದಾಗಿ ಇತರರಿಗೆ ಉಪಕಾರ ಆಗುವುದಾದರೆ ನನ್ನ ಸ್ವಾಭಿಮಾನವನ್ನು ಇಟ್ಟು ನಾನೇನು ಮಾಡಲಿ ಎಂದು ಹೇಳಿದ್ದರು.

ಜಬ್ಬಾರ್ ಪೊನ್ನುಡಿಯವರ ಬಗ್ಗೆ ಬರೆಯಲು ಹೊರಟರೆ ಪುಟಗಳು ಸಾಲದು. ಲೇಖನ ಬರಹಗಳಿಂದ ಅವರ ವ್ಯಕ್ತಿತ್ವವನ್ನು ನಿರೂಪಿಸುವುದು ಅಸಾಧ್ಯ. ಜಬ್ಬಾರ್ ಹೆಚ್ಚು ನನ್ನೊಂದಿಗೆ ಆತ್ಮೀಯ ಎಂದು ಅವರನ್ನು ಭೇಟಿಯಾಗುವ ಪ್ರತಿಯೊಬ್ಬರೂ ಭಾವಿಸುತ್ತಿದ್ದರು. ನನಗೂ ಅದೇ ಭಾವನೆ ಇದೆ. ಸಾಮಾನ್ಯ ವ್ಯಕ್ತಿಯಂತೆ ಬಾಳಿದ ಜಬ್ಬಾರ್ ಯಾರೂ ಕಾಣದ ಅಸಾಮಾನ್ಯ ವ್ಯಕ್ತಿತ್ವವಾಗಿದ್ದರು.

ಎಲ್ಲರೂ ಜಬ್ಬಾರ್ ನನಗೆ ಆತ್ಮೀಯ ಎಂದು ಭಾವಿಸುತ್ತಿದ್ದಂತೆಯೇ ಅಲ್ಲಾಹ್ ಜಬ್ಬಾರ್ ರನ್ನು ತನ್ನ ಬಳಿಗೆ ಕರೆದನು.

ಲೇಖಕರು: ಅಬೂಕುತುಬ್. ಮಂಗಳೂರು

Leave a Reply