ಬಾಬರ್ ಅಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿ. ಬಡವರೇ ತುಂಬಿರುವ ಪಶ್ಚಿಮ ಬಂಗಾಳದ ಮುಜಾಫರ್ ಜಿಲ್ಲೆಯ ಒಂದು ಕುಗ್ರಾಮ ಉತ್ತರ್ಪುರದ ನಿವಾಸಿ.

ಪ್ರತಿದಿನ ಹತ್ತು ಕಿಲೋಮೀಟರ್ ದೂರದ ಬೆಹ್ರಾಂಪುರದ ರಾಜ ಗೋವಿಂದ ಸರ್ಕಾರಿ ಶಾಲೆಗೆ ಹೋಗಿ ಬರಬೇಕು. ಒಂದು ದಿನ ಮಧ್ಯಾಹ್ನ ಮೂರು ಗಂಟೆಗೆ ಶಾಲೆಯಿಂದ ತನ್ನ ಹಳ್ಳಿಗೆ ಮರಳುವಾಗ ಅವನಿಗೊಂದು ಆಲೋಚನೆ ಬಂತು.

ತನ್ನ ಹಳ್ಳಿಯಲ್ಲಿ ಶಾಲೆಯಿಲ್ಲದೆ, ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಮೀನು ಹಿಡಿಯುವುದು, ಗ್ಯಾರೇಜಿನಲ್ಲಿ ಕೆಲಸ ಮಾಡುವುದು, ಕೂಲಿ ಕೆಲಸ ಮಾಡುವುದು, ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇವರೆಲ್ಲರಿಗೆ ತಾನು ಏಕೆ ಬಿಡುವಿನ ವೇಳೆಯಲ್ಲಿ ಪಾಠ ಮಾಡಬಾರದು ಎಂದು ಆತ ಚಿಂತಿಸತೊಡಗಿದ.

ತನ್ನ ಸಮಾನ ಮನಸ್ಕ ಗೆಳೆಯರಲ್ಲಿ ಈ ಬಗ್ಗೆ ಚರ್ಚಿಸಿದಾಗ ಅವರೂ ಸಹಕರಿಸುವುದಾಗಿ ತಿಳಿಸಿದರು. ತನ್ನ ಮನೆಯ ಅಂಗಳದಲ್ಲಿಯೇ 2005 ರಲ್ಲಿ ‘ಆನಂದ್ ಶಿಕ್ಷಾನಿಕೇತನ’ ಎಂಬ ಹೆಸರಿನ ಶಾಲೆಯನ್ನು ಪ್ರಾರಂಭಿಸಿಯೇ ಬಿಟ್ಟ.

ಪ್ರತಿ ದಿನ ಮಧ್ಯಾಹ್ನ ಮೂರರಿಂದ ಏಳರವರೆಗೆ ನಡೆಯುವ ಈ ಶಾಲೆಯಲ್ಲಿ ಬೆತ್ತದ ಬದಲು ಪ್ರೀತಿ, ಆಟದ ಜೊತೆ ಪಾಠ. ಅತ್ಯಲ್ಪ ಶುಲ್ಕ – ಪೋಷಕರಿಗೆ ಹೊರೆಯೆನಿಸುವುದಿಲ್ಲ. ಮೂಶಿ ಎಂಬ ಮೀನು ಮಾರಿ ಜೀವಿಸುವ ಮಹಿಳೆ ಇಲ್ಲಿ ಶಾಲೆಯ ಆಯಾ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ.

ಕಲಿಯಲು ಬಂದವರಿಗೆ ಉಚಿತ ಊಟವೂ ಉಂಟು. ಹೀಗೆ ಪ್ರಾರಂಭವಾದ ಶಾಲೆ ಅದೆಷ್ಟು ಜನಪ್ರಿಯವಾಗಿದೆಯೆಂದರೆ ಇದೀಗ ಇಲ್ಲಿ ಒಂಬೈನೂರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಪ್ರಕೃತಿಯ ಮಡಿಲಲ್ಲಿ, ನಡೆಯುವ ಈ ಶಾಲೆಗೆ ಅನೇಕ ಅಧಿಕಾರಿಗಳು, ಸೇವಾ ಸಂಸ್ಥೆಗಳು ತಮ್ಮ ಕೈಲಾದ ನೆರವು ನೀಡುತ್ತಿವೆ.

ಸರ್ಕಾರ ಈ ಶಾಲೆಗೆ ಮಾನ್ಯತೆ ನೀಡಿರುವುದಲ್ಲದೆ, ಮಧ್ಯಾಹ್ನದ ಊಟಕ್ಕೆ ಏರ್ಪಾಡು ಮಾಡಿದೆ. ಇಲ್ಲಿ ಅವಕಾಶ ವಂಚಿತ ಮಕ್ಕಳು ಉತ್ಸಾಹದಿಂದ ಕಲಿಯುತ್ತಿದ್ದರೆ, ಪೋಷಕರಿಗೂ ಸಹ ತಮ್ಮ ಮಕ್ಕಳು ಮನೆಬಾಗಿಲಿನಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿರುವುದು ಸಮಾಧಾನ ತಂದಿದೆ. ಇದರಿಂದ ಇಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚುತ್ತಿದೆ.

ಹತ್ತು ಜನ ಸ್ವಯಂಸೇವಕರು ಇಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲಾ ವಿದ್ಯಾರ್ಥಿಗಳೇ.ತಾವು ಶಾಲೆಯಲ್ಲಿ ಕಲಿತ ವಿದ್ಯೆಯನ್ನೇ ಇಲ್ಲಿ ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಇಂತಹ ಶಾಲೆಗೆ ಬಾಬರ್ ಅಲಿ ಮುಖ್ಯಸ್ಥ. ಈತನನ್ನು ಬಿಬಿಸಿ 2009ರಲ್ಲಿ ವಿಶ್ವದ ಅತಿಚಿಕ್ಕ ವಯಸ್ಸಿನ ಮುಖ್ಯ ಶಿಕ್ಷಕ ಎಂದು ಗುರುತಿಸಿ ಅಭಿನಂದಿಸಿದೆ.

ಅದೇರೀತಿ ಸಿಎನ್ಎನ್/ಐಬಿಎನ್ ಇಂಗ್ಲಿಷ್ ಸುದ್ದಿವಾಹಿನಿಯು ಸಹ ಬಾಬರ್ಗೆ ರಿಯಲ್ ಹೀರೋಸ್ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂದು ನಮ್ಮ ವಿದ್ಯಾರ್ಥಿಗಳಿಗೆ ಬಾಬರ್ ಅಲಿ ಆದರ್ಶಪ್ರಾಯನಾಗಿದ್ದಾನೆ. ಎಲ್ಲ ವಿದ್ಯಾರ್ಥಿಗಳೂ ತಮ್ಮ ಸುತ್ತಮುತ್ತ ಇರುವ ಒಂದೆರಡು ಅನಕ್ಷರಸ್ಥರಿಗೆ ಬಿಡುವಿನ ವೇಳೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ, ಅನಕ್ಷರತೆಯ ಸಮಸ್ಯೆ ಬಗೆಹರಿಯುವುದಿಲ್ಲವೆ?

ಕೃಪೆ: ಅಬಿ ಕುಮಾರಸ್ವಾಮಿ

Leave a Reply