ತಮಾಷೆ ಇರಬೇಕು, ಆದರೆ ಅದಕ್ಕೊಂದು ಮಿತಿ ಇರಬೇಕು. ಆ ಮಿತಿ ತಪ್ಪಿದರೆ ಅಪಾಯ ತಪ್ಪಿದಲ್ಲ.‌ ಅದು ಯಾವ ವಿಷಯದಲ್ಲಾದರೂ ಸರಿ. ಆದರೆ ಇಲ್ಲೊಂದು ತಮಾಷೆ ಅತಿಯಾಗಿ ಮದುಮಗಳೊಬ್ಬಳ ಪ್ರಾಣವನ್ನೇ ಬಲಿ ಪಡೆದಿದೆ.

ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಸ್ಟೀಲ್ ಅಂಗಡಿ ಇಟ್ಟುಕೊಂಡಿರುವ ಸಲೀಂ ಹಾಜಿ ಎಂಬವರು ತನ್ನ ಪ್ರೀತಿಯ ಮಗಳಾದ ನಸ್ರಿನ್‌ಗೆ ಬಹಳ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ.‌ ಮದುವೆಯ ಭೋಜನ ಸವಿದು ನವದಂಪತಿಗಳಿಗೆ ಶುಭ ಹಾರೈಸಿ ಹೋದ ಬಂಧು ಮಿತ್ರರಿಗೆ ಮರುದಿನ ಸಿಕ್ಕ ಕಹಿ ಸುದ್ದಿಯೆಂದರೆ ಸಾವಿರಾರು ಹೊಂಗನಸನ್ನು ಕಾಣುತ್ತಿದ್ದ ಮದುಮಗಳ ಸಾವು!

ಇದು ಆಕಸ್ಮಿಕ ಸಾವಲ್ಲ ನವದಂಪತಿಗಳ‌ ಕೆಲ ಬಂಧುಮಿತ್ರರು ಸೇರಿ ನಡೆಸಿದ ಕೊಲೆ ಎನ್ನಬೇಕಾಷ್ಟೆ. ಯಾಕೆಂದರೆ ಅವರು ಮಾಡಿದ ಕುಚೇಷ್ಟೆಗೆ ಮಲ್ಲಿಗೆಯ ಸುವಾಸನೆ ಆರುವ ಮುನ್ನವೇ ಮದುಮಗಳು ಸಾವನ್ನಪ್ಪಬೇಕಾಯಿತು.

ಮದುವೆಯ ದಿನದಂದೇ ಮೊದಲು ರಾತ್ರಿಗೆ ಏರ್ಪಾಡು ಮಾಡೋದು ಮುಸ್ಲಿಮರ ಸಂಪ್ರದಾಯ. ಆ ದಿನ ರಾತ್ರಿ ದೂರದ ಸಂಬಂಧಿಕರೆಲ್ಲ ಹೋದ ಬಳಿಕ ಒಂದಿಷ್ಟು ಬಂಧು ಮಿತ್ರರ ಸಮ್ಮುಖದಲ್ಲಿ ಹರಟೆ ಹೊಡೆಯುತ್ತಾ ಮದುಮಗ,‌ ತನ್ನ ಕನಸಿನ ರಾಣಿಯನ್ನು ಭೇಟಿಯಾಗಲು ಮದುಮಂಚಕ್ಕೆ ತೆರಳಿದ ಒಂದರ್ಧ ತಾಸಿನೊಳಗೆ ನವದಂಪತಿಗಳ ಕೋಣೆ ಪೂರ್ತಿ ನೀರಿನಿಂದ ತುಂಬಿ‌ ತುಳುಕಿತ್ತು.‌

ದಂಪತಿಗಳು ಕೆಳಗೆ ನೋಡುತ್ತಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮದುಮಗಳು ಕುಸಿದು ಬಿದ್ದಳು. ಮದುಮಗನ ಅರಚಾಟ ಕೇಳಿ ಎದ್ದು ಬಂದ ಸಲೀಂ ಹಾಜಿ ಎದುರಿಗೆ ಕಾಣ ಸಿಕ್ಕಿದ್ದು ತನ್ನ ಪ್ರೀತಿಯ ಕರುಳ ಕುಡಿಯ ಶವ. ಜನ್ಮ ನೀಡಿದ ತಂದೆಗೆ ಹೇಗೆ ಅನಿಸಬೇಡ ಊಹಿಸಿ!!

ಮಾಡಿದ್ದೇನು?

ಆ ದಿನ ರಾತ್ರಿ ನವದಂಪತಿಗಳು ಕೋಣೆಗೆ ಪ್ರವೇಶಿಸುವ ಮುನ್ನವೇ ಕೆಲ ಸ್ನೇಹಿತ-ಬಂಧು ಮಿತ್ರರ ತಂಡ ಮಂಚದ ಅಡಿಗೆ ಮೋಟರ್ ಪಂಪ್ ಮೂಲಕ ಪೈಪ್ ಫಿಕ್ಸ್ ಮಾಡಿದ್ದರು. ನವದಂಪತಿಗಳು ಕೋಣೆ ಪ್ರವೇಶ ಮಾಡುತ್ತಿದ್ದಂತೆ ಪಂಪ್ ಸ್ವಿಚ್ ಆನ್ ಮಾಡಿ ವಿಕೃತ ಆನಂದವನ್ನು ಸವಿದಿದ್ದಾರೆ. ಆದರೆ ಪರಿಣಾಮ ಬದುಕಿ ಬಾಳಬೇಕಾಗಿದ್ದ ಮದುಮಗಳು ಸ್ಮಶಾನ ಸೇರಬೇಕಾಯಿತು.

ಫತ್ವಗಳಿಲ್ಲ ಯಾಕೆ?

ಇಸ್ಲಾಂ ಶರೀಆ ಕಾನೂನು ವಿರುದ್ಧವಾಗಿ ಯಾವುದೇ ಚಟುವಟಿಕೆಗಳು ನಡೆದರೂ ಅದರ ವಿರುದ್ಧ ಆಯಾ ಊರಿನ ಮಸೀದಿಯ ಪಂಡಿತತರು ಫತ್ವ ನೀಡುತ್ತಾರೆ. ಇತ್ತಿಚೆಗೆ ಮದುವೆ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ ಎನ್ನಲಾಗಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

Leave a Reply