ಮೊನ್ನೆ ಬೈಕ್ ನ ಆರೋಗ್ಯ ಕೆಟ್ಟಿತ್ತು. ಗ್ಯಾರೇಜ್ ಗೆ ಹೋದೆ. ದೀಪಕ್ ಕಾಣಿಸಲಿಲ್ಲ. ವಿಚಾರಿಸಿದೆ.

“ದೀಪಕ್ ರ ವೃದ್ಧ ತಾಯಿ ಬಿದ್ದು ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ, ಮಲ- ಮೂತ್ರ ಸಹಿತ ಪ್ರತಿಯೊಂದಕ್ಕೂ ಇತರರನ್ನು ಆಶ್ರಯಿಸಬೇಕಾದ ಸ್ಥಿತಿಯಲ್ಲಿದ್ದಾರೆ, ತಾಯಿಯನ್ನು ಆರೈಕೆ ಮಾಡಲು ಮನೆಯಲ್ಲಿ ಬೇರೆ ಯಾರೂ ಇಲ್ಲ, ಕಳೆದ ಮೂರು ತಿಂಗಳಿನಿಂದ ಮನೆಯಲ್ಲೇ ಇದ್ದುಕೊಂಡು ದೀಪಕ್ ತಾಯಿಯ ಸೇವೆ ಮಾಡುತ್ತಿದ್ದಾರೆ..” ಎಂದು ಹೇಳಿದ ಮುಖ್ಯ ಮೆಕಾನಿಕ್ ಸತೀಶ್ ತುಸು ಹೊತ್ತು ಸುಮ್ಮನಾದರು. ಖರ್ಚಿಗೆ ಏನು ದಾರಿ ಇದೆ ಎಂದು ಕೇಳಿದೆ. ದೀಪಕ್ ರ ತಾಯಿ ನಿವೃತ್ತ ಶಿಕ್ಷಕಿ. ಆ ಪಿಂಚಣಿ ಹಣ ಮತ್ತು ಉದ್ಯೋಗದಲ್ಲಿರುವ ಅವರ ಪತ್ನಿಯ ವೇತನ- ಇವೆರಡೇ ಆದಾಯ ಮೂಲ ಎಂದು ಹೇಳಿದರು. ನಾನು ಮೌನವಾದೆ. ಆಯಿಲ್ ಮೆತ್ತಿದ ಪ್ಯಾಂಟು, ಶರ್ಟು ತೊಟ್ಟು ಬೈಕ್ ರಿಪೇರಿಯಲ್ಲಿ ತನ್ನ ಪಾಡಿಗೆ ತಾನಿರುತ್ತಿದ್ದ ನನ್ನದೇ ಪ್ರಾಯದ ದೀಪಕ್ ನನ್ನೆದುರು ಬೆಳೆಯುತ್ತಾ ಹೋದರು. ಅವರನ್ನು ಆಲಿಂಗಿಸಿಕೊಳ್ಳಬೇಕು ಎಂದು ಅನಿಸಿತು. ವೃದ್ಧರ ಸೇವೆ ಎಂಬುದು ಬರೆದಷ್ಟು ಸುಲಭ ಅಲ್ಲ. ಅದೊಂದು ಸವಾಲು. ಮಕ್ಕಳ ಪಾಲಿನ ಬಹುದೊಡ್ಡ ಪರೀಕ್ಷೆ. ಅನೇಕರು ಈ ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ.
ದೀಪಕ್ ನಂಥವರ ಸಂಖ್ಯೆ ಅಸಂಖ್ಯವಾಗಲಿ. ಆತ ನಿಜವಾದ ಧರ್ಮಾನುಯಾಯಿ. ನನ್ನ ಪ್ರವಾದಿಯ ಮಾತಿನಲ್ಲಿ ಹೇಳುವುದಾದರೆ, ಸ್ವರ್ಗದ ಹಕ್ಕುದಾರ.

ಏ. ಕೆ. ಕುಕ್ಕಿಲ
A K Kukkila Akk

Leave a Reply