ತುಮಕೂರು: ಜನರು ಕಲಿತು ಡಾಕ್ಟರ್ ಇಂಜಿನಿಯರ್ ಆಗಿ ಒಳ್ಳೆಯ ಸಂಪಾದನೆ ಮಾಡಿದ ಬಳಿಕ ತಮ್ಮ ಕಷ್ಟದ ದಿನಗಳ ಬಗ್ಗೆ ಮೆಲುಕು ಹಾಕುತ್ತಾರೆ. ನಂತರ ಜೀವನವನ್ನು ಎಷ್ಟು ಎಂಜಾಯ್ ಮಾಡಬೇಕೋ ಅಷ್ಟು ಎಂಜಾಯ್ ಮಾಡಿ ತಮ್ಮ ನಂತರದ ಪೀಳಿಗೆಗೂ ಕೂಡಿಡುತ್ತಾರೆ.

ತುಮಕೂರಿನ ಡಾ.ಪ್ರಭಾಕರ್ ರೆಡ್ಡಿ ಯವರ ಬಾಲ್ಯ ಜೀವನ ಬಹಳ ಕಷ್ಟಗಳದ ಕೂಡಿತ್ತು. ಬಾಲ್ಯದಲ್ಲಿ ಹೆತ್ತವರನ್ನು ಕಳಕೊಂಡ ಇವರು ಡಾಕ್ಟರ್ ಆಗುವ ಛಲ ಹೊಂದಿದ್ದರು. 1965 ರಲ್ಲಿ ಎಂಬಿಬಿಎಸ್ ಸೀಟು ಸಿಕ್ಕರೂ 240 ರೂಪಾಯಿ ಶುಲ್ಕ ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಹಣ ಸಂಗ್ರಹಿಸಲು ಅವರು ಸಾರ್ವಜನಿಕವಾಗಿ ಬೇಡಿದ್ದೂ ಉಂಟು.

ಡಾಕ್ಟರ್ ಆಗಿ ರಾಜ್ಯದಲ್ಲಿ ಕೆಲಕಾಲ ಸೇವೆ ಸಲ್ಲಿಸಿ ನಂತರ ಲಂಡನ್ ನಲ್ಲಿ ನೆಲೆಸಿದ್ದರು. ಈಗ 80 ವರ್ಷ ಪ್ರಾಯದ ಡಾ. ಪ್ರಭಾಕರ್ ರೆಡ್ಡಿ ನಿವೃತ್ತಿ ಹೊಂದಿ ತನ್ನ ಸಂಪತ್ತನ್ನೆಲ್ಲಾ ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಧಾರೆಯೆರೆಯುತ್ತಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗ್ರಾಮದವರರಾದ ಇವರು ತಮ್ಮ ಹೆಸರಿನಲ್ಲಿ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಶಾಲಾ ಕಾಲೇಜ್‍ಗಳಿಗೆ ಕುಡಿಯುವ ನೀರು, ಬೆಂಚು, ಕ್ರೀಡಾಪಟುಗಳಿಗೆ ಸಮವಸ್ತ್ರವನ್ನು ನೀಡುತ್ತಿದ್ದಾರೆ.

ತನ್ನ ಲಂಡನ್ ನಲ್ಲಿರುವ ಮನೆ ಮತ್ತು ಬೆಂಗಳೂರಿನಲ್ಲಿದ್ದ 3.5 ಕೋಟಿ ಮೌಲ್ಯದ ಮನೆಯನ್ನು ಮಾರಿ, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರು
ಪಾವಗಡದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಿ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ಅತಿ ಕಡಿಮೆ ಬಾಡಿಗೆಗೆ ನೀಡಿದ್ದು, ಜೊತೆಗೆ ಸಮಾಜ ಸೇವೆ, ಉಪನ್ಯಾಸ, ಸ್ವಚ್ಚತಾ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಜನಮನ ಗೆದ್ದಿದ್ದಾರೆ.

ಒಂದು ಕಾಲದಲ್ಲಿ ವ್ಯಾಸಾಂಗಕ್ಕಾಗಿ ಭಿಕ್ಷೆ ಬೇಡಿದ ವ್ಯಕ್ತಿ, ಇಂದು ಕೊಡುಗೈ ದಾನಿಯಾಗಿರುವುದು ಎಲ್ಲರಿಗೂ ಆದರ್ಶ ಮತ್ತು ಸ್ಪೂರ್ತಿಯಾಗಿದ್ದಾರೆ.

Photo courtesy -Public tv

Leave a Reply