ಲಖನೌ: ಉತ್ತರ ಪ್ರದೇಶದ ವಿವಿಧೆಡೆ ಕಳೆದ ಎರಡು ದಿನಗಳ ಅವಧಿಯಲ್ಲಿ 15 ಎನ್‌ಕೌಂಟರ್‌ಗಳು ನಡೆದಿದ್ದು, ಒಬ್ಬ ಗ್ಯಾಂಗ್‌ಸ್ಟರ್‌ನನ್ನು ಹತ್ಯೆ ಮಾಡಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಬೇಕಾಗಿರುವ 24 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ನಗ್ಲಖೆಪಾಡ್‌ನಲ್ಲಿ ವಿಶೇಷ ಕಾರ್ಯಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಗ್ಯಾಂಗ್‌ಸ್ಟರ್‌ನನ್ನು ಇಂದ್ರಪಾಲ್ ಎಂದು ಗುರುತಿಸಲಾಗಿದೆ. ಈತನ ಪತ್ತೆಗೆ ಪೊಲೀಸ್ ಇಲಾಖೆ ₹ 25,000 ಇನಾಮು ಘೋಷಿಸಿತ್ತು. ಇಂದ್ರಪಾಲ್ ಸುಮಾರು 30ರಷ್ಟು ಪ‍್ರಕರಣಗಳಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರಿಗೆ ಬೇಕಾಗಿದ್ದ ಎಂದು ವಿಶೇಷ ಕಾರ್ಯಪಡೆಯ ಪೊಲೀಸ್ ಅಧೀಕ್ಷಕ ರಾಜೀವ್ ನಾರಾಯಣನ್ ತಿಳಿಸಿದ್ದಾರೆ.

ರಾಜ್ಯದ 10 ಜಿಲ್ಲೆಗಳಲ್ಲಿ 48 ಗಂಟೆಗಳ ಅವಧಿಯಲ್ಲಿ ನಡೆದ 15 ಎನ್‌ಕೌಂಟರ್‌ಗಳಲ್ಲಿ ಒಬ್ಬ ಗ್ಯಾಂಗ್‌ಸ್ಟರ್‌ನನ್ನು ಹತ್ಯೆ ಮಾಡಲಾಗಿದ್ದು, ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ 24 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಶುಕ್ರವಾರ ಗೋರಖಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಶಂಕಿತ ಅಪರಾಧಿಗಳು ಗಾಯಗೊಂಡಿದ್ದಾರೆ.

ಕೃಪೆ: ಪ್ರಜಾವಾಣಿ

Leave a Reply