ಕ್ರಿಸ್ಮಸ್ ಮತ್ತು ಹೊಸವರ್ಷ ಆಚರಣೆ ಮುಗಿಯಿತು. ಶಾಲಾ ವಾರ್ಷಿಕೋತ್ಸವಗಳಿಗೆಲ್ಲಾ ತೆರೆಬಿದ್ದವು. ಉರಿಯುವ ಬಿರುಬಿಸಿಲಿನ ಮಧ್ಯೆ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಪರೀಕ್ಷಾ ಭಯ ಎನ್ನುವ ಹರಡುವ ರೋಗ ವೇಗವಾಗಿ ಹರಡುವ ದಿನಗಳಿವು. ಇಂದು ಮಕ್ಕಳಿಗಿಂತ ಹೆಚ್ಚಾಗಿ ಹೆತ್ತವರಿಗೆ ಈ `ಪರೀಕ್ಷಾ ಭಯ’ ಕಾಡುವುದು ಕಂಡುಬರು ತ್ತದೆ. ಅವರು ಹೆಚ್ಚಾಗಿ ಬೆವರುತ್ತಾರೆ, ನಡುಗುತ್ತಾರೆ. ಅನೇಕರು ತಮ್ಮ ಉದ್ಯೋಗಕ್ಕೆ ರಜೆ ಘೋಷಿಸಿ `ಚಿಕುನ್ ಗುನ್ಯಾ’ ಪೀಡಿತರಂತೆ ಸುರುಟಿ ಮಲಗುತ್ತಾರೆ. ಟಿವಿಗೆ ಬೀಗ ಜಡಿಯಲಾಗುತ್ತದೆ. ದಿನಪೂರ್ತಿ “ಓದು ಓದು” ಎಂಬ ಮಂತ್ರವನ್ನು ಜಪಿಸುತ್ತಾ ಮಕ್ಕಳ ಹಿಂದೆ ಮುಂದೆ ನಡೆದಾಡುತ್ತಾರೆ. ಇದರಿಂದ ಪರೀಕ್ಷಾ ಜ್ವರ ಹೆಚ್ಚುವುದಲ್ಲದೆ ಕಡಿಮೆಯಾಗಲಾರದು.

ಹತ್ತನೆ ತರಗತಿಯಲ್ಲಿ ಕಲಿಯುವ ಮಕ್ಕಳ ಹೆತ್ತವರು ಹೊಸ ವರ್ಷದ ಆರಂಭದಲ್ಲೇ ಮಕ್ಕಳಿಗೆ `ಕಲಿಕಾ ದಿನಚರಿಯನ್ನು’ ನಿಗದಿ ಪಡಿಸುತ್ತಾರೆ. ಅಪ್ಪ ಎಷ್ಟು ದಿನ ರಜೆ ಮಾಡಬೇಕು? ಅಮ್ಮ ಎಷ್ಟು ದಿನ ಕೆಲಸಕ್ಕೆ ರಜೆ ಹಾಕಬೇಕು? ಯಾರು ಯಾವ ವಿಷಯವನ್ನು ಮಕ್ಕಳಿಗೆ ಕಲಿಸುವ ಜವಾ ಬ್ದಾರಿ ಹೊತ್ತುಕೊಳ್ಳುವುದು ಎಂಬಿತ್ಯಾದಿ ಚರ್ಚೆಗಳು ನಿರಂತರ ನಡೆಯತ್ತಿರುತ್ತವೆ. ಇಷ್ಟೆಲ್ಲಾ ನಡೆಯುತ್ತಿರುವುದನ್ನು ನೋಡುವ ಮಕ್ಕಳು ತನ್ನ ಮೇಲೆ ಏನೋ ಮಹಾ ವಿಪತ್ತು ಸಂಭವಿಸಲಿಕ್ಕಿದೆ ಎಂಬುದಾಗಿ ಭಾವಿಸುವಂತಾಗುತ್ತದೆ.

ಪರೀಕ್ಷೆಗೆ ಇಷ್ಟು ಭಯ ಪಡಬೇಕಾದ ಅಗತ್ಯವಿದೆಯೇ? ಹಾಗೆ ಭಯವಿಡುವುದೇಕೆ? ಮಕ್ಕಳನ್ನು ಮಾನಸಿಕವಾಗಿಯೂ ದೈಹಿಕವಾಗಿ ಭೀತಿಗೊಳಪಡಿಸುವ `ಈ ಪರೀಕ್ಷಾ ಭಯ’ ದಿಂದ ಹೊರಬರುವ ಉಪಾಯ ಯಾವುದು?

ಪ್ರಥಮವಾಗಿ ನಾವು ಗಮನಿಸಬೇಕಾದ ವಿಷಯವೇನೆಂದರೆ ಮಾರ್ಕುಗಳು ಮತ್ತು ಗ್ರೇಡುಗಳು ಮಾತ್ರ ಕಲಿಕೆಯ ಮಾನದಂಡ ವಾದಾಗ, ಪರೀಕ್ಷಾ ಭಯ ಸಹಜವಾಗಿಯೇ ಉಂಟಾಗುತ್ತದೆ. ಹಾಗಾದಾಗ ಪರೀಕ್ಷೆಯ ಫಲಿತಾಂಶದ ಹೆಚ್ಚು ಮಾರ್ಕು ಕಡಿಮೆ ಮಾರ್ಕುಗಳೇ ಜೀವನದ ಸೋಲು ಗೆಲುವಿನ ಮಾನದಂಡವೆಂಬಂತೆ ಹೆತ್ತವರು, ಮಕ್ಕಳು ಪರಿಗಣಿಸುತ್ತಾರೆ. ವಾಸ್ತವ ದಲ್ಲಿ ಕಲಿಸುವ ಜ್ಞಾನವನ್ನು ನೀಡುವ ಸ್ಥಳಗಳು ಶಾಲಾ ಕಾಲೇಜುಗಳು, ಪರೀಕ್ಷೆಗಳೆಂದರೆ ಕಲಿತದ್ದು ಎಷ್ಟರ ಮಟ್ಟಿಗೆ ಅರ್ಥ ವಾಗಿದೆ ಎಂಬುದನ್ನು ಕಂಡು ಹಿಡಿಯುವ ಮಾಪಕ ಮಾತ್ರ. ಅದುವೇ ಸಂಪೂರ್ಣ ವ್ಯಕ್ತಿತ್ವವನ್ನು ಅಳೆಯುವ ಮಾನದಂಡವಲ್ಲ. ಜೀವನದ ಯಶಸ್ಸಿನ ಮಾನ ದಂಡವೂ ಅದಲ್ಲ. ಇದನ್ನು ಮೊತ್ತ ಮೊದಲು ಅರ್ಥ ಮಾಡಿಕೊಳ್ಳಬೇಕು.

ಹಾಗಂದ ಮಾತ್ರಕ್ಕೆ ಪರೀಕ್ಷೆಗೆ ಯಾವ ರೀತಿಯಲ್ಲೂ ಸಿದ್ಧತೆ ಮಾಡಬೇಕೆಂದಿಲ್ಲ ಎಂಬುದು ನನ್ನ ಮಾತಿನ ಉದ್ದೇಶವಲ್ಲ. ಪರೀಕ್ಷೆಯೇ ಅಂತಿಮ. ಅದರ ಸೋಲು ಗೆಲುವೇ ನಿರ್ಣಾಯಕ ಎಂಬಂತಹ ಅತಿ ಭೀತಿಯ ಅಶುಭ ಚಿಂತೆಯ ಅಗತ್ಯ ಖಂಡಿತ ಇಲ್ಲ. ಇನ್ನು ಪರೀಕ್ಷೆಗೆ ಸರಿಯಾಗಿ ಸಿದ್ಧತೆಯನ್ನು ನಡೆಸುವ ರೀತಿ ಏನು ಎಂಬು ದನ್ನು ನೋಡುವ. ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿವೆ. ಹೆಚ್ಚಿನ ವಿಷಯ ಗಳು ಈಗಾಗಲೇ ಕಲಿತು ಮುಗಿದಿದೆ. ಕೆಲವು ವಿಷಯಗಳನ್ನು ಹೊಸದಾಗಿ ಕಲಿಯಬೇಕಿದೆ. ಮತ್ತಷ್ಟು ಪುನಃ ಪುನರಾವರ್ತನೆ ಮಾಡಿಕೊಳ್ಳಬೇಕಾಗಿದೆ. ಆದುದರಿಂದ ಒಂದು ಉತ್ತಮ ದಿನಚರಿ (ಟೈಮ್ ಟೇಬಲ್) ತಯಾರಿಸಿದರೆ ಮಾತ್ರ ಇನ್ನುಳಿದ ದಿನಗಳನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಿ ಹೆಚ್ಚು ಉತ್ತಮವಾಗಿ ಪರೀಕ್ಷೆ ಬರೆಯಬಹುದು.

ಇನ್ನು ಎಷ್ಟು ಸಮಯ ಬಾಕಿಯಿದೆ?

ಇನ್ನು ಕೂಡಾ ಸಮಯ ಇದೆಯಲ್ಲಾ ಎಂಬುದು ಹೆಚ್ಚಿನವರ ಉತ್ತರವಾಗಿರುತ್ತದೆ. ಹೆಚ್ಚಿನ ಶಾಲೆಗಳಲ್ಲಿ ಪುನರಾವರ್ತನೆ ತರ ಗತಿಗಳು ನಡೆಯುವುದರಿಂದ ತರಗತಿಯನ್ನು ತಪ್ಪಿಸುವಂತಿಲ್ಲ. ಆದುದರಿಂದ 6-7 ಗಂಟೆಗಳಷ್ಟು ಸಮಯವನ್ನು ಶಾಲೆಯಲ್ಲೇ ಕಳೆಯಬೇಕಾಗುತ್ತದೆ. ಪ್ರಯಾಣ, ಇತರ ಕೆಲಸಗಳು, ತಯಾರಿ, ಆಹಾರ ಸೇವನೆ ಇತ್ಯಾದಿಗಳಿಗೆ  3-4 ಗಂಟೆಗಳು ಬೇಕಾಗುತ್ತದೆ. ಏಳು ಗಂಟೆಗಳ ನಿದ್ದೆ ಮನುಷ್ಯನಿಗೆ ಅತೀ ಅಗತ್ಯ. ಹೀಗೆ 24 ಗಂಟೆ ಗಳಲ್ಲಿ 18 ಗಂಟೆಗಳು ಮುಗಿಯು ತ್ತವೆ. ಉಳಿದ ಆರು ಗಂಟೆಗಳಲ್ಲಿ ಎರಡು ಗಂಟೆಗಳನ್ನು ಮಕ್ಕಳು ಆಟ ವಿನೋದ ವಿಶ್ರಾಂತಿಯಲ್ಲಿ ಕಳೆಯ ಬಯಸುತ್ತಾರೆ. ಉಳಿಯು ವುದು ನಾಲ್ಕು ಗಂಟೆಗಳು. ಆದುದರಿಂದ ಇನ್ನು ಪರೀಕ್ಷೆಗೆ ಮೂವತ್ತು ದಿನಗಳು ಉಳಿದಿದ್ದರೆ ಕಲಿಯಲು ಅಭ್ಯಾಸ ಮಾಡಲು ಸಿಗುವ ಸಮಯ 120 ಗಂಟೆಗಳು ಅಂದರೆ 5 ಪೂರ್ಣ ದಿನಗಳು ಮಾತ್ರ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಸರಿಯಾಗಿ ದಿನಚರಿಯನ್ನು ಕ್ರಮೀಕರಿಸಿ

ಶಾಲೆಯಲ್ಲಿ ಪುನರಾವರ್ತನೆ (ರಿವಿಜನ್) ನಡೆಯುತ್ತಿರುವುದರಿಂದ ಮನೆಗೆ ಬಂದ ಮೇಲೆ ಪುನಃ ಅದನ್ನೇ ವಿಸ್ತಾರವಾಗಿ ಕಲಿಯುವ ಪ್ರಯತ್ನ ಮಾಡಬೇಕು. ಪ್ರತಿದಿನ ಕೇವಲ ಒಂದು ವಿಷಯವನ್ನು ಮಾತ್ರ ಕಲಿಯಬಾರದು. ಯಾವ ವಿಷಯ ಸರಳ ಮತ್ತು ಕಠಿಣ ಎಂಬುದನ್ನು ನೋಡಿಕೊಂಡು ಕಾಂಬಿನೇಷನ್ ಮಾಡಿಕೊಳ್ಳಬೇಕು. ಹಿಂದಿಯ ಜೊತೆ ಭೌತಶಾಸ್ತ್ರ, ಕನ್ನಡದ ಜೊತೆ ರಸಾಯನಶಾಸ್ತ್ರ, ಇಂಗ್ಲಿಷಿನ ಜೊತೆ ಜೀವಶಾಸ್ತ್ರ ಹೀಗೆ. ಆಗ ನಾವು ಕಠಿಣ ವಿಷಯಗಳಿಗೆ ಹೆಚ್ಚು ಸಮಯ ನೀಡಬಹುದು. ಮೂರು ಗಂಟೆ ಕಠಿಣ ವಿಷಯಕ್ಕೆ ನೀಡಿದರೆ, ಒಂದು ಗಂಟೆ ಸರಳ ವಿಷಯಕ್ಕೆ ನೀಡಬಹುದು. ಈ ರೀತಿ ಕ್ರಮ ಬದ್ಧಗೊಳಿಸಿ ಕಲಿಯಿರಿ.

ಪ್ಲಾನಿನ ಪ್ರಕಾರ ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬುದು ಮನ ವರಿಕೆಯಾದಾಗ ಪುನಃ ರೀ ಪ್ಲಾನ್ ಮಾಡಿರಿ. ಓದು ನಿಲ್ಲಿಸಬೇಡಿರಿ. ಯಾವುದಾದರೂ ಪಾಠವನ್ನು ಬಿಟ್ಟು ಮುಂದೆ ಹೋಗಬೇಡಿರಿ. ಅನಗತ್ಯ ಕೆಲಸಗಳಿಗೆ ಗಮನ ಕೊಡಬೇಡಿ. ಉದಾಹರಣೆಗೆ ಮನೆಯಲ್ಲಿ ಯಾರೋ ಟಿವಿ ವೀಕ್ಷಿಸುತ್ತಿದ್ದಾರೆಂದು ನೀವು ಹೋಗಿ ಕುಳಿತಿರಬೇಡಿ. ಶಾಪಿಂಗ್ ಎಂದು ಸಮಯ ದುರುಪಯೋಗ ಮಾಡಬೇಡಿರಿ.

ಕಲಿಕೆಗೆ ಸರಿಯಾದ ಆಹಾರ ಅಗತ್ಯ. ಏಕೆಂದರೆ ಅಷ್ಟೇ ಶಕ್ತಿ ಬೇಕಾಗುತ್ತದೆ. ಸರಿಯಾದ ನಿದ್ದೆಯೂ ಸಕಾರಾತ್ಮಕವಾದ ಚಿಂತನೆಯನ್ನು ಬೆಳೆಸಲು ಸಹಕರಿಸುತ್ತದೆ. ಇದನ್ನು ನಿರ್ಲಕ್ಷಿಸಿದರೆ ಅದು ಕಲಿಕೆಯ ಮೇಲೆ ನೇರ ಪ್ರಭಾವ ಬೀಳುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ ತೋರಿ ದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಏಕಾಗ್ರತೆ ಕಡಿಮೆಯಾಗುತ್ತದೆ.

ಕಲಿಕೆಯ ಮಧ್ಯೆ ಸ್ವಲ್ಪ ವಿರಾಮ ತೆಗೆದುಕೊಳ್ಳುವುದನ್ನು ಮರೆಯಬಾರದು. ವಿರಾಮದ ವೇಳೆ ಟಿ.ವಿ., ಕಂಪ್ಯೂಟರ್, ಮೊಬೈಲ್ ಬಳಸಬಾರದು. ಐದು ನಿಮಿಷದ ನಡಿಗೆ, ಒಂದು ಸ್ನಾನ, ಚಹಾ ಅಥವಾ ಲಿಂಬೆ ಶರಬತ್ತು ಕುಡಿಯುವುದು, ವ್ಯಾಯಾಮ. ಹೀಗೆ ಏನನ್ನಾದರೂ ಮಾಡ ಬಹುದು. ಅನಗತ್ಯ ಮಾತುಕತೆ ಕೂಡಾ ಮಾಡದಿರುವುದು ಉತ್ತಮ.

ಹೆತ್ತವರ ಗಮನಕ್ಕೆ

ಮಕ್ಕಳು ಪರೀಕ್ಷೆಯನ್ನು ಚೆನ್ನಾಗಿ ಬರೆದು ಉತ್ತಮ ಅಂಕಗಳನ್ನು ಗಳಿಸಬೇಕಾದರೆ ಮಕ್ಕಳಂತೆ ಹೆತ್ತವರೂ ಕೆಲವು ವಿಷಯಗಳನ್ನು ಗಮನಿಸಬೇಕು.

* ಅಮಿತ ಉತ್ಸಾಹ ಬೇಡ. ಮಕ್ಕಳ ಹಿಂದೆ ಮುಂದೆ “ಓದು ಓದು” ಎನ್ನುತ್ತಾ ನಡೆದಾಡುವುದನ್ನು ಬಿಟ್ಟು ಬಿಡಿ.

* ನೀವು ಮನೆಯಲ್ಲೇ ಇರಿ. ಅವರಿಗೆ ಅಗತ್ಯವಿರುವ ಸಂಶಯ ನಿವಾರಣೆಗೆ ನಿಮ್ಮ ಬಳಿಗೆ ಬರುತ್ತಾರೆ. ಅವರಿಗೆ ಮಾನಸಿಕ ಧೈರ್ಯ ತುಂಬಲು ನಿಮ್ಮ ಮಾತುಗಳ ಅಗತ್ಯವಿದೆ.

* ಮಕ್ಕಳು ಸರಿಯಾಗಿ ಊಟ ಮಾಡುತ್ತಿದ್ದಾರೆಯೇ! ನೀರು ಕುಡಿಯುತ್ತಿ ದ್ದಾರೆಯೇ? ಎಂಬುದನ್ನು ನೋಡಿಕೊಳ್ಳಿ.

* ಅವರ ಏಕಾಗ್ರತೆಯನ್ನು ಕಡಿಮೆ ಮಾಡುವ ಯಾವ ಕೆಲಸವನ್ನು ಮಾಡ ಬೇಡಿ. ಟಿವಿ ನೋಡುವುದು, ಅವರ ಮುಂದೆಯೇ ಮೊಬೈಲ್ ವೀಕ್ಷಿಸುವುದು, ಮನೆಯಲ್ಲಿ ಅತಿಥಿಗಳು, ಮನೆ ರಿಪೇರಿ ಇತ್ಯಾದಿಗಳನ್ನು ಮಾಡಬೇಡಿರಿ.

* ಕಲಿಕೆಯ ಮಧ್ಯೆ ಸ್ವಲ್ಪ ವಿರಾಮ ತೆಗೆದುಕೊಳ್ಳಲಿ. ಅದು ನಿಮ್ಮ ಜೊತೆ ಮಾತನಾಡಬೇಕಾದ ಸಮಯ ಎಂದು ನೀವು ಭಾವಿಸಬೇಡಿ.

ಅಧ್ಯಾಪಕರ ಗಮನಕ್ಕೆ:

ಪರೀಕ್ಷಾ ಸಮಯವಾಗುವಾಗ ಮಕ್ಕಳ ಮಾನಸಿಕ ಒತ್ತಡ ಹೆಚ್ಚಲು ಒಂದು ರೀತಿಯಲ್ಲಿ ಅಧ್ಯಾಪಕರೂ ಕಾರಣಕರ್ತರಾಗುತ್ತಾರೆ. ಮಕ್ಕಳ ಮಾನಸಿಕ ಸ್ಥೆರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುವ ರೀತಿಯಲ್ಲಿ ಮಕ್ಕಳನ್ನು ಪೆÇ್ರೀತ್ಸಾಹಿಸುವ ಮಾತುಗಳು ಸದಾ ಅಧ್ಯಾಪಕರಿಂದ ಬರುತ್ತಿರಬೇಕು.

* ವಿದ್ಯಾರ್ಥಿಗಳಿಗೆ ಸರಿಯಾದ ಮಾನಸಿಕ ಧೈರ್ಯ ನೀಡಿರಿ. ಅದೇ ರೀತಿ ಮಾತನಾಡಿರಿ. “ಪರೀಕ್ಷೆ ಬಂತು ಬೇಗ ಬೇಗ” ಎಂದು ಅವಸರಿಸಬೇಡಿರಿ.

* ಮಕ್ಕಳ ಸಂಶಯ ನಿವಾರಣೆಗೆ ಸದಾ ನೀವು ಅವರಿಗೆ ಲಭ್ಯ ವಾಗುವಂತಿರಿ.

* ಮಕ್ಕಳು ನಿಮ್ಮನ್ನು ಯಾವುದೇ ಹೆದರಿಕೆ ಮತ್ತು ಮುಜುಗುರವಿಲ್ಲದೆ ಸಮೀಪಿಸಲು ಸಾಧ್ಯವಾಗುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಅವರ ಧೈರ್ಯಗುಂದಿಸುವ ಕೆಲಸ ಮಾಡಬೇಡಿ. “ನಿನಗೆ ಗೊತ್ತಿಲ್ಲ, ಅರ್ಥ ಆಗುವುದಿಲ್ಲ” ಎಂದು ಹೇಳಿದರೆ ಅದು ಅವರಲ್ಲಿ ಭಯವನ್ನು ಮೂಡಿಸುತ್ತದೆ.

* ಒಟ್ಟಿನಲ್ಲಿ ಪರೀಕ್ಷೆ ಎಂದರೆ ಜೀವನದೆಡೆಗೆ ಅಥವಾ ಜೀವನ್ಮರಣ ಹೋರಾಟವೋ ಅಲ್ಲ. ಅದು ಎಲ್ಲರೂ ಎದುರಿಸಬೇಕಾದ ಒಂದು ಘಟ್ಟ ಅಷ್ಟೆ.

ವಿದ್ಯಾರ್ಥಿಗಳು ಕಲಿಯಲು ಕುಳಿತುಕೊಳ್ಳುವಾಗ ಗಮನಿಸಿ:

* ಹೆಚ್ಚು ಲವಲವಿಕೆಯಿಂದಿರುವಾಗ, ಹೆಚ್ಚು ಏಕಾಗ್ರತೆಯಿರುವಾಗ ಕಲಿಯಲು ಕುಳಿತುಕೊಳ್ಳಿ.

* ಪ್ರತಿಯೊಂದು ವಿಷಯವನ್ನು ಒಂದು ಪ್ರಶ್ನೆಯನ್ನು ಕೇಳಿ ಅದಕ್ಕೆ ಉತ್ತರದ ರೂಪದಲ್ಲಿ ವಿವರಿಸುವುದು ಮತ್ತು ಅದನ್ನು ಬರೆದಿಟ್ಟುಕೊಳ್ಳುವುದು ಮಾಡಿ.

* ಚಿತ್ರಗಳನ್ನು ಬಿಡಿಸಿ ಕಲಿಯಿರಿ. ಟಿಪ್ಪಣಿ ಬರೆಯಿರಿ, ಪುನರಾವರ್ತನೆ ಉಪಯೋಗಕ್ಕೆ ಬರುತ್ತದೆ.

* ನೆನಪು ಶಕ್ತಿಯನ್ನು ಪರೀಕ್ಷಿಸಿಕೊಳ್ಳಿ. ಉದಾಹರಣೆ ಸ್ನಾನ ಮಾಡುತ್ತಿರುವಾಗ, ಪ್ರಯಾಣ ಮಾಡುತ್ತಿರುವಾಗ ಕಲಿತದ್ದು ನೆನಪಿದೆಯಾ ಎಂಬುದನ್ನು ಮನಸ್ಸಿಗೆ ತಂದುಕೊಂಡು ನೋಡಿರಿ.

* ಸಂಶಯ ನಿವಾರಣೆಗೆ ಅಧ್ಯಾಪಕ ರನ್ನೇ ಸಂಪರ್ಕಿಸಿ. ನಿಮ್ಮದೇ ವಯಸ್ಸಿನ ಮಕ್ಕಳೊಂದಿಗೆ ಕೇಳಿದರೆ ಬೇರೆ ವಿಷಯಗಳನ್ನು ಮಾತನಾಡಿ ಸಮಯ ಹಾಳಾಗಬಹುದು.

* ಸದಾ ಉತ್ತಮ ಬೆಳಕಿರುವ ಸ್ಥಳದಲ್ಲಿ ಕುಳಿತುಕೊಳ್ಳಿ.

* ಕುರ್ಚಿ ಮೇಜನ್ನು ಬಳಸಿರಿ. ಮೇಜನ್ನು ಶುಚಿಯಾಗಿಟ್ಟುಕೊಳ್ಳಿ. ಅದರ ಮೇಲೆ ಅನಗತ್ಯವಾದ ಯಾವ ವಸ್ತು ಗಳನ್ನೂ ಇಡಬೇಡಿರಿ. ಉದಾಹರಣೆಗೆ ಯಾವುದಾರೂ ಮ್ಯಾಗಝೀನ್, ಆಟಿಕೆ ಇದ್ದರೆ ಅದರ ಹಿಂದೆ ಸುಮ್ಮನೆ ಸಮಯ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ.

* ನಿಮಗೆ ಕೇಳುವ ರೀತಿಯಲ್ಲಿ ಓದಿರಿ.

* ಸರಿಯಾದ ಸಮಯಕ್ಕೆ ನಿರ್ಧರಿಸಿ ದಷ್ಟು ಓದಿ ಮುಗಿದರೆ ನಿಮಗೆ ನೀವು ಪುರಸ್ಕಾರ ನೀಡಿ. ಉದಾಹರಣೆಗೆ- ನಿಮಗಿಷ್ಟವಾದುದನ್ನು ತಿನ್ನುವುದು.

* ಸಾಧ್ಯವಾದರೆ ದಿನಾಲೂ ಒಂದೇ ಸ್ಥಳದಲ್ಲಿ ಕುಳಿತು ಒಂದೇ ಸಮಯದಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

* ಕಲಿಕೆಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಿ. ಕ್ರಮಬದ್ಧವಾದ ಕಲಿಕೆಯು ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

* ಕಲಿತಾದುದನ್ನು ಮನಸ್ಸಿನಲ್ಲೇ ಕ್ರಮಬದ್ಧಗೊಳಿಸಿ.

* ಓದಿರಿ. ಪುನರಾವರ್ತಿಸಿ, ನೆನಪಿಸಿ.

* ಯಾವುದನ್ನೂ ಬಿಟ್ಟು ಬಿಡದೆ ಓದಿರಿ.

* ನಿದ್ರೆಗೆ ಮುನ್ನ ಕಠಿಣ ವಿಷಯ ಗಳನ್ನು ಪುನಃ ಒಮ್ಮೆ ಓದಿಕೊಳ್ಳಿ.

* ಕೆಲವು ವಿಷಯಗಳನ್ನು ಸೂತ್ರ ಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆದು ನೀವು ಹೆಚ್ಚಾಗಿರುವ ಸಮಯ ಕಳೆಯುವ ಸ್ಥಳದಲ್ಲಿ ಗೋಡೆಗೆ ಅಂಟಿಸಿಕೊಳ್ಳಿ.

* ಕೆಲವು ವಿಷಯಗಳ ಆಡಿಯೋ ತಯಾರಿಸಿ. ಅದನ್ನು ಪುನಃ ಪುನಃ ಕೇಳುತ್ತಿರಿ.

ಲೇಖಕರು: ಲಿಯಾನ ಮೂಳೂರು

Leave a Reply