ಮಗಳಿಗೆ ಕೃತಕ ಕಾಲುಗಳನ್ನು ತಯಾರಿಸಿದ ಅಪ್ಪ: ಹೀಗೊಂದು ಸಿರಿಯದ ಅಪ್ಪ ಮಗಳ ಮನ ಮಿಡಿಯುವ ಕಥೆ

ದೊಡ್ಡವರ ಜಗಳದಲ್ಲಿ ಸಿಲುಕಿ ನರಳುತ್ತಿರುವ ಸಿರಿಯದ ನಿಷ್ಪಾಪಿ ಮಕ್ಕಳ ಬಗ್ಗೆ ಮೊದಲ ಬಾರಿ ಜಗತ್ತಿನ ಗಮನ ಸೆಳೆದವನು ಆಯ್ಲಾನ್ ಕುರ್ದಿ ಎಂಬ ಮುದ್ದು ಮಗ. ಟರ್ಕಿಯ ಕಡಲ ಕಿನಾರೆಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಆತನ ಶವ ದೊರಕಿದಾಗ ಜಗತ್ತು ಕಣ್ಣೀರು ಹಾಕಿತ್ತು. ಕೆಂಪು ಟೀ ಶರ್ಟು, ನೀಲಿ ಪ್ಯಾಂಟು, ಶೂ ಧರಿಸಿದ ಸ್ಥಿತಿಯಲ್ಲಿ ಆ ಮಗು ಕಡಲ ಕಿನಾರೆಯಲ್ಲಿ ದೊರಕಿತ್ತು. ಈ ಜಗತ್ತಿನ ದೊಡ್ಡವರ ಕ್ರೌರ್ಯವನ್ನು ನೋಡಲು ಅಸಹ್ಯವೆನಿಸುತ್ತಿದೆ ಎಂದು ಸಾರಿ ಹೇಳುವಂತೆ ಅದು ಕವುಚಿ ಮಲಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಮಾಯಾ ಮುಹಮ್ಮದ್ ಅಲಿ ಮೆಹ್ರಿ ಎಂಬ ಎಂಟು ವರ್ಷದ ಮಗು ಜಗತ್ತಿನ ಗಮನವನ್ನು ಸೆಳೆದಿದ್ದಾಳೆ.

ಹುಟ್ಟುವಾಗಲೇ ಎರಡೂ ಕಾಲುಗಳನ್ನು ಕಳಕೊಂಡಿರುವ ಈಕೆ, ಇದೀಗ ಸಿರಿಯಾದ ಇದ್ಲಿಬ್ ನಲ್ಲಿರುವ ನಿರಾಶ್ರಿತ ಶಿಬಿರದಲ್ಲಿದ್ದಾಳೆ. ಆಕೆಯಂತೆಯೇ ಆಕೆಯ ತಂದೆಯೂ ಹುಟ್ಟುವಾಗಲೇ ವಿಶೇಷ ಚೇತನರು. ಅವರಿಗೂ ಕಾಲುಗಳಿಲ್ಲ. ಮಗಳಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಕೃತಕ ಕಾಲುಗಳನ್ನು ಒದಗಿಸುವ ಆಸೆ ಆ ಅಪ್ಪನದು. ಆದರೆ, ಸಿರಿಯದಲ್ಲಿ ಅಂಥದ್ದೊಂದು ಸಾಧ್ಯತೆಯೇ ಈಗ ಕಮರಿ ಹೋಗಿದೆ. ಕೃತಕ ಕಾಲಿಗಿಂತ ಜೀವ ಉಳಿಸಿಕೊಳ್ಳುವುದೇ ಮುಖ್ಯ ಅನಿಸಿಬಿಟ್ಟಿದೆ.

ಆದರೂ ಮಗು ನಡೆಯಬೇಕೆಂಬ ಆಸೆ ಅವರಿಗೆ. ಆದ್ದರಿಂದ ಮಗುವಿನ ಕಾಲಿಗೆ ಹೊಂದುವ ತಗಡಿನ ಎರಡು ಕ್ಯಾನ್ ಗಳನ್ನು ಸಂಗ್ರಹಿಸಿದ ಅವರು ಅದಕ್ಕೆ ಬಟ್ಟೆಯ ಚೂರುಗಳನ್ನು ತುಂಬಿಸಿ ಮಗುವಿನ ಕಾಲಿಗೆ ಜೋಡಿಸಿದ್ದಾರೆ. ತಂದೆ ಸಂಶೋಧಿಸಿದ ಈ ಹೊಸ ಕೃತಕ ಕಾಲಿನಿಂದ ಆ ಮಗು ನಡೆಯುತ್ತಿರುವ ಫೋಟೋ ವೈರಲ್ ಆಗಿದ್ದು ಸಿರಿಯದ ಬಗ್ಗೆ ಜಗತ್ತಿನ ಗಮನವನ್ನು ಮತ್ತೊಮ್ಮೆ ಸೆಳೆದಿದೆ. ಅಸಂಖ್ಯ ಮಂದಿಯ ಕಣ್ಣನ್ನು ಒದ್ದೆಯಾಗಿಸಿದೆ.

ಸಿರಿಯಾದ ಆಂತರಿಕ ಘರ್ಷಣೆಯಿಂದಾಗಿ ತನ್ನೂರು ಅಲೆಪ್ಪೋದಿಂದ ಈ ಕುಟುಂಬ ಇದ್ಲಿಬ್ ನ ನಿರಾಶ್ರಿತ ಶಿಬಿರ ಸೇರಿಕೊಂಡಿದೆ.

Leave a Reply