ವಾಷಿಂಗ್ಟನ್: ಕುಪ್ರಸಿದ್ಧ ಗ್ವಾಂಟನಾಮೊ ಜೈಲು ಪುನರಾರಂಭಗೊಳ್ಳುತ್ತಿದೆ. ಅಮೆರಿಕದ ಅಧೀನದ ಗ್ವಾಂಟನಾಮೊ ಜೈಲು ಪುನರಾರಂಭಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆಂದು ವರದಿಯಾಗಿದೆ.

ಅಮೆರಿಕದ ಸೈನಿಕ ಬಂಧನ ನೀತಿಯ ಮರು ಪರಿಶೀಲನೆಗೆ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಾಟ್ಟಿಸ್‍ಗೆ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆ. ಇದರ ಭಾಗವಾಗಿ ಗ್ವಾಂಟನಾಮೊ ಮಿಲಿಟರಿ ಜೈಲು ಪುನಃ ತೆರೆದು, ಯುದ್ಧದಲ್ಲಿ ಸೆರೆ ಹಿಡಿದ ಭಯೋತ್ಪಾದಕರನ್ನು ಬಂಧಿಸಿಡಲು ಸರಕಾರ ಬಯಸುತ್ತಿದೆ ಎಂದು ಮಾಟಿಸ್ ತಿಳಿಸಿದ್ದಾರೆ.

ಬರಾಕ್ ಒಬಾಮ ಆಡಳಿತದ ಕಾಲದಲ್ಲಿ ಗ್ವಾಂಟನಾಮೊ ಕೈದಿಗಳನ್ನು ಬಿಡುಗಡೆಗೊಳಿಸಿ ಜೈಲನ್ನು ಮುಚ್ಚಲಾಗಿತ್ತು. ಆದರೆ ಗ್ವಾಂಟನಾಮೊ ಜೈಲು ಮುಚ್ಚುವ ಮೂಲಕ ಅಮೆರಿಕ ಭಯೋತ್ಪಾದನೆಯೊಂದಿಗೆ ಮೃದು ನಿಲುವು ಹೊಂದಿದೆ ಎನ್ನುವ ಆರೋಪಕ್ಕೆ ತುತ್ತಾಗಿತ್ತು. ಸಾಮಾನ್ಯ ಪ್ರಜೆಗಳನ್ನು ಕೊಂದು, ಆಸ್ಪತ್ರೆಗಳಿಗೆ ಬಾಂಬು ಹಾಕುವವರು ಪಿಶಾಚಿಗಳು. ಅವರನ್ನು ನಿಗ್ರಹಿಸುವುದಲ್ಲದೆ ಅನ್ಯ ದಾರಿಯಿಲ್ಲ. ಭಯೋತ್ಪಾದಕರು ಬರೇ ಕ್ರಿಮಿನಲ್‍ಗಳು ಮಾತ್ರವಲ್ಲ ಕಾನೂನು ವಿರುದ್ಧ ವರ್ತಿಸುವ ಶತ್ರುಗಳು.

ಹಳೆಯ ಸರಕಾರ ಬಿಡುಗಡೆಗೊಳಿಸಿದ ನೂರಾರು ಭಯೋತ್ಪಾದಕರು, ಐಎಸ್ ನಾಯಕ ಅಲ್ ಬಗ್ದಾದಿ ಮೊದಲಾದವರು ಪುನಃ ಯುದ್ಧ ಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅಮೆರಿಕದ ಸೈನಿಕ ನೀತಿಯ ಮರು ಪರಿಶೀಲನೆಗೆ ಅಗತ್ಯವಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಕಾಂಗ್ರೆಸ್‍ನ ಸ್ಟೇಟ್ ಆಫ್ ಯೂನಿಯನ್‍ನಲ್ಲಿ ಭಯೋತ್ಪಾದಕರ ವಿರುದ್ಧ ಅವರು ಮಾತಾಡುತ್ತಿದ್ದರು.

Leave a Reply