ಶ್ರೀನಗರ: ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ. ಆದ್ದರಿಂದ ಮುಸ್ಲಿಮರು ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ವೈಯಕ್ತಿಕ ಮಂಡಳಿಯ ಉಪಾಧ್ಯಕ್ಷ ಮುಫ್ತಿ ನಾಸಿರ್ ಉಲ್ ಇಸ್ಲಾಂ ಹೊಸ ವಿವಾದಾತ್ಮಕ ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಸ್ಲಿಮರು ವಿವಿಧ ಪೂರ್ವಗ್ರಹಗಳ ಹೆಸರಿನಲ್ಲಿ ಕಿರುಕಳಕ್ಕೊಳಗಾಗುತ್ತಿದ್ದಾರೆ, ಮಾತ್ರವಲ್ಲ ಭಾರತ ಅಕ್ರಮವಾಗಿ ಕಾಶ್ಮೀರವನ್ನು ಅತಿಕ್ರಮಿಸಿಕೊಂಡಿದೆ ಎಂದು ಹೇಳಿದ್ದಾರೆ.

‘ಭಾರತವು ಅಸಹಿಷ್ಣುತೆಯ ದಾರಿಯಲ್ಲಿ ಸಾಗುತ್ತಿದೆ. ಒಮ್ಮೆ ಲವ್ ಜಿಹಾದ್ ಮತ್ತೊಮ್ಮೆ ಗೋರಕ್ಷಣೆ ಮಗದೊಮ್ಮೆ ತ್ರಿವಳಿ ತಲಾಖ್ ಹೀಗೆ ನಾನಾ ಹೆಸರಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ’ ಎಂದು ನಾಸಿರ್ ಹೇಳಿದ್ದಾರೆ.

ಭಾರತದಲ್ಲಿ ಮುಸ್ಲಿಮರದ್ದು ಎರಡನೇ ಅತಿ ದೊಡ್ಡ ಸಮುದಾಯವಾಗಿದೆ. ಇವರು ದೌರ್ಜನ್ಯ ಮತ್ತು ಕಿರುಕುಳ ಎದುರಿಸುವಂತಾಗಿದೆ. 17 ಕೋಟಿ ಮುಸ್ಲಿಮರಿಗಾಗಿ ಪಾಕಿಸ್ತಾನವನ್ನು ಸೃಷ್ಟಿಸಲಾಗಿತ್ತು. ಮುಸ್ಲಿಮರ ಮೇಲಿನ ದೌರ್ಜನ್ಯ ಹೀಗೆಯೇ ಮುಂದುವರಿದಲ್ಲಿ ಅವರು ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕು ಎಂದು ನಾಸಿರ್ ಆಗ್ರಹಿಸಿದ್ದಾರೆ.

ಗ್ರ್ಯಾಂಡ್ ಮುಫ್ತಿ ಹುದ್ದೆಗೆ ಏರುವ ಮುಂಚೆಯೇ ನಾಸಿರ್ ಅವರು ವಿವಾದಾಸ್ಪದ ವ್ಯಕ್ತಿಯಾಗಿದ್ದರು. ಅವರ ತಂದೆ ಬಶೀರ್-ಉದ್-ದಿನ್, ಹಿಂದಿನ ಗ್ರ್ಯಾಂಡ್ ಮುಫ್ತಿ, ಜುಲೈ 2012 ರಲ್ಲಿ ಅವರನ್ನು ಈ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು.

Leave a Reply