ತಿರುವನಂತಪುರಂ: ರಕ್ತದಾನ ಶ್ರೇಷ್ಠ ದಾನ ಎಂಬುದರಲ್ಲಿ ಸಂಶಯವಿಲ್ಲ, ಆದರೆ ವಿಶ್ವದಾದ್ಯಂತ ಸಾವಿರಾರು ಮಂದಿ ಸೂಕ್ತ ಸಮಯಕ್ಕೆ ರಕ್ತ ಸಿಗದೆ ಸಾವಿಗೀಡಾಗುತ್ತಾರೆ. ರಕ್ತದಾನಿಗಳ ಕೊರತೆ ಮತ್ತು ರಕ್ತದಾನದ ಬಗೆಗಿನ ಭಯ ಅಥವಾ ಅರಿವಿನ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ.

ರಕ್ತದಾನದ ಮಹತ್ವವನ್ನು ಜನರಿಗೆ ಮನಗಾಣಿಸಲು ಹಾಗೂ ರಕ್ತದಾನದ ಬಗ್ಗೆ ಜನಜಾಗೃತಿ ಮೂಡಿಸಲು 33 ವರ್ಷ ವಯಸ್ಸಿನ ಕೇರಳದ ಯುವಕ ಕಿರಣ್ ವರ್ಮಾ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಅವರು ದೇಶದಾದ್ಯಂತ 15,000 ಕಿ.ಮೀ.ಗಳಷ್ಟು ನಡೆಯಲು ನಿರ್ಧರಿಸಿದ್ದಾರೆ.

ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರು ತನ್ನ ಮಾರ್ಕೆಟಿಂಗ್ ಕೆಲಸವನ್ನು ತ್ಯಜಿಸಿದ್ದಾರೆ. ಇದೀಗ ಅವರ ರಕ್ತದಾನ ಜಾಗೃತಿ ಕಾಲ್ನಡಿಗೆ ಪ್ರಾರಂಭಗೊಂಡಿದೆ.

ಈ ವರ್ಷದ ಜನವರಿಯಲ್ಲಿ ಅವರು ಪ್ರಯಾಣ ಆರಂಭಿಸಿದ್ದು, ಈಗಾಗಲೇ ದೇಶಾದ್ಯಂತ 10 ರಾಜ್ಯಗಳ ಪ್ರಯಾಣ ಕೈಗೊಂಡಿದ್ದಾರೆ. ಈಗಾಗಲೇ ಸರಿಸುಮಾರು 6000 ಕಿ.ಮೀ. ಕ್ರಮಿಸಿದ್ದಾರೆ.

ಕಿರಣ್ ಅವರ ಅಮ್ಮ ಕ್ಯಾನ್ಸರ್ ರೋಗದಿಂದ ಮರಣಹೊಂದಿದ್ದರು. ಆ ಬಳಿಕ ಕಿರಣ್ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು “ಸಿಂಪ್ಲಿ ಬ್ಲಡ್” ಎಂಬ ಹೆಸರಿನ ಆ್ಯಪ್ ತಯಾರಿಸಿ ಅದರಲ್ಲಿ ವರ್ಚ್ಯುವಲ್ ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದರು. ಈ ಆ್ಯಪ್ ಬಗ್ಗೆಯೂ ಜನರಿಗೆ ಮಾಹಿತಿ ನೀಡುತ್ತಾ ಕಿರಣ್ ದೇಶದಾದ್ಯಂತ ಸಂಚರಿಸಿದ್ದಾರೆ.

ಹೀಗೆ ಸಂಚರಿಸುವಾಗ ತಮ್ಮ ಅನುಭವಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. 6000 ಕಿ.ಮೀ ಸಂಚಾರದಲ್ಲಿ 2400 ಕಿ.ಮೀ. ಕಾಲ್ನಡಿಗೆ ಮತ್ತು ಇತರ ಪ್ರಯಾಣವನ್ನು ವಿವಿಧ ಸಂಚಾರಗಳ ಮೂಲಕ ಕೈಗೊಂಡಿದ್ದೇನೆ ಎಂದಿದ್ದಾರೆ.

Leave a Reply