“ಅಮ್ಮ… ಅಮ್ಮ… ಅಪ್ಪ ಎಷ್ಟು ಹೊತ್ತಿಗೆ ಬರುತ್ತಾರಮ್ಮ?” ಎಂದು ಆರು ವರ್ಷದ ಮಗು ರೋಷನ್ ಖುಷಿಯಿಂದ ನಲಿದಾಡುತ್ತಾ ತಾಯಿಯನ್ನು ಕೇಳಿದನು. ತಾಯಿ ಶಹಾನ ಒಂದೇಡೆ ಕೂತು ಕಿಟಿಕಿಯ ಹೊರಗ್ಗಿಂದ ಬೀಸುವ ಗಾಳಿಗೆ ತಲೆಯಿಂದ ಜಾರುವ ದುಪ್ಪಟವನ್ನು ಸರಿಪಡಿಸುತ್ತಿದ್ದಳು. ಮಗುವನ್ನು ಕಂಡವಳೆ, ತಬ್ಬಿಕೊಂಡು ನಿಮ್ಮಪ್ಪ ಸಂಜೆ ಆರು ಗಂಟೆಗೆ ಬರುತ್ತಾರೆ ಮಗ” ಎಂದು ತಲೆ ಸವರಿದಳು.

ಹೈದರ್ ದುಬಾಯಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಹೋಗಿದ್ದೆ ಮದುವೆಯಾಗಿ ಒಂದೆರಡು ವರ್ಷ ಊರಿನಲ್ಲಿದ್ದು ನಂತರ ಹೆಚ್ಚಿನ ಸಂಪಾದನೆಗಾಗಿ ಹಿಡಿದ ದಾರಿ ದುಬಾಯ್ ಯಾತ್ರೆ. ಹೌಸ್ ಡ್ರೈವರಾಗಿ ಹೋದವನಿಗೆ ಯಾವುದೇ ಕಾರಣಕ್ಕೂ ಊರಿಗೆ ವಾಪಸ್ಸು ಬರುವ ಅವಕಾಶ ದೊರಕಲಿಲ್ಲ. ದುಬಾಯ್‌ಗೆ ಹೋದ ಪ್ರಾರಂಭದಿಂದಲೇ ಸಾಕಷ್ಟು ಯಾತನೆಗಳನ್ನು ಅನುಭವಿಸಿದ್ದಾತ.

ಮಡದಿಗೆ ಫೋನ್ ಕರೆ ಮಾಡಲು ಕೂಡಾ ಅವಕಾಶ ಸಿಗುತ್ತಿರಲಿಲ್ಲ. ಊರಿನಿಂದ ಗೆಳೆಯನೊಬ್ಬ ಕಳುಹಿಸಿದ ವಿಸಾದ ಮುಖಾಂತರ ದುಬಾಯ್ ಸೇರಿದ ಅವನು ನಂತರ ಅವನು ಕಣ್ಣಿಗೆ ಕಾಣಿಸಲೇ ಇಲ್ಲ. ಅರಬ್ಬಿಯೊಬ್ಬ ಫ್ರಿಯಾಗಿ ಕೊಟ್ಟ‌ ವಿಸಾಕ್ಕೆ ಇಬ್ಬರು ಏಜೆಂಟುಗಳಾಗಿ ಹೈದರ್ ತನ್ನ ಮಡದಿಯ ಕಿವಿ ಓಲೆ ಮತ್ತು ಒಂದು ಸರವನ್ನು ಬ್ಯಾಂಕಿನಲ್ಲಿ ಇಟ್ಟು ಅರವತ್ತು ಸಾವಿರ ರುಪಾಯಿ ತೆರಬೇಕಾಯಿತು.

ನಾಲ್ಕು ವರ್ಷಗಳಿಂದ ತನ್ನ ಪ್ರೀತಿಯ ಪತಿಗಾಗಿ ಕಾಯುತ್ತಿದ್ದ ಪತ್ನಿ ಶಹಾನ ಅರ್ಧ ಸತ್ತು ಹೋದಂತಿದ್ದಳು. ಯಾಕೆಂದರೆ ತನ್ನ ಪತಿ ಹೋದ ದಿನದಿಂದ ಅವಳು ಒಂದು ದಿನವು ನೆಮ್ಮದಿಯಿಂದ ಊಟ ಮಾಡಿರಲಿಲ್ಲ. ತನ್ನ ಪತಿ ಅನುಭವಿಸುತ್ತಿರುವ ಕಷ್ಟವನ್ನು ಅವಳಿಂದ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ.

ಪತಿ ಇಂದು ಬರುತ್ತಾರೆ ನಾಳೆ ಬರುತ್ತಾರೆ ಎಂದು ಕಾದವಳಿಗೆ ಕೊನೆಗೊಂದು ದಿನ ಸಂತೋಷದ ಸುದ್ದಿ ಸಿಕ್ಕೇ ಬಿಟ್ಟಿತು. ಹೈದರ್ ಇನ್ನೇನು ಗಲ್ಫ್‌ನಿಂದ ಬಂದೇ ಬಿಡುತ್ತಾರೆ ಎನ್ನುವ ಖುಷಿ ಅವಳಿಗೆ ಅರಗಿಸಿಕೊಳ್ಳಲು ಆಗದೆ ಕಣ್ಣೀರಿನ ಮಳೆಯನ್ನೇ ಸುರಿಸಿದ್ದಳು.

ಕಳೆದ ಸಂಜೆ ಫೋನ್ ಕರೆ ಮಾಡಿ ಹೈದರ್ ಊರಿಗೆ ಬರುವುದಾಗಿ ಹೇಳಿದ್ದರು. ಆದರೆ ಇಂದು ಕರೆ ಮಾಡಿಲ್ಲ. ಮುಂಚೆಯಿಂದಲೂ ದಿನಾಲು ಪೋನ್ ಕರೆ ಮಾಡಲು ಅವಕಾಶ ಇರಲಿಲ್ಲ. ಅಂಥದ್ದೆ ಸಮಸ್ಯೆ ಇರಬಹುದೆಂದು ಮಗನ ತಲೆಯನ್ನು ಸವರುತ್ತಲೇ ಕಿಟಕಿಯಿಂದ ಹೊರಗೆ ಕಣ್ಣಾಯಿಸಿ ನೋಡತೊಡಗಿದಳು.

ಮನೆಯ ಅಂಗಳದಲ್ಲಿ ನೆಟ್ಟ ಹೂವಿನ ಗಿಡದಲ್ಲಿ ಅರಳಿದ ಹೂವುಗಳೆಲ್ಲವು ಶಹಾನಳನ್ನು ನೋಡಿ ನಗುತ್ತಿದ್ದವು. ಶಹಾನ ಮದುಮಗಳಂತೆ ದುಃಖದ ನಡುವೆಯೂ ನಾಚಿಕೆಯಿಂದ ತಲೆ ತಗ್ಗಿಸಿದಳು. ಹಕ್ಕಿಗಳ ಕಲರವ ಅವಳನ್ನು ಇನ್ನಷ್ಟು ಸಂತುಷ್ಟಗೊಳಿಸಿದ್ದವು. ಶಹಾನ ಆಗಾಗ ಗಡಿಯಾರವನ್ನು ನೋಡುತ್ತಲೇ ಇದ್ದಳು. ಮಗ ತಾಯಿಯ ಮಡಿಲಲ್ಲಿ ಕೂತು ಮೌನಕ್ಕೆ ಜಾರಿದನು.

ಸಮಯ ನಾಲ್ಕುವರೆ ಆಯಿತು ಇನ್ನೇನು ಪತಿ ಬರುತ್ತಾರೆ ಎಂದುಕೊಂಡು ಮನೆಯ ಒಳಗೆ ಹೋದಾಗ ಫೋನ್ ರಿಂಗಾಗಳು ಶುರು ಮಾಡಿಕೊಂಡಿತು. ಫೋನ್ ಕಿವಿಗೆ ಇಟ್ಟವಳು ಅಲ್ಲೇ ಕರೆಂಟ್ ಬಡಿದಂತೆ ಅನುಭವವಾಗಿ ಅಲ್ಲೆ ಕುಸಿದಳು.‌ ಫೋನಿನಲ್ಲಿ ಜೋರಾಗಿ ಸದ್ದು ಹೊರಗೆ ಕೇಳಿಸುತ್ತಿತ್ತು “ಮೃತದೇಹವನ್ನು ನಾಳೆ ಕಳಿಸುತ್ತೇವೆ” ಎಂದು.

ಶಹಾನಳನ್ನು ನೋಡಿದ ಅತ್ತೆ ಮತ್ತು ಮಗ ಬಂದು ಎಬ್ಬಿಸಲು ಪ್ರಯತ್ನಪಟ್ಟರು. ನಾಲ್ಕು ವರ್ಷಗಳ ಕಾಲ ನೋವಿನಲ್ಲೇ ಕಾಲ ಕಳೆದವಳಿಗೆ ಸಿಕ್ಕಿದ ಬಹುಮಾನ ತನ್ನ ಪ್ರೀತಿಯ ಪತಿಯ ಮರಣದ ಸುದ್ದಿ

ಊರಿಗೆ ಹೋಗಲು ಖುಷಿಯಿಂದ ನಲಿದಾಡುತ್ತಿದ್ದ ಹೈದರ್ ಹೃದಯಾಘಾತದಿಂದ ಮರಣಹೊಂದಬೇಕಾಯಿತು. ನಾಲ್ಕು ವರ್ಷ ತಿಂದ ನೋವಿನಿಂದ ಹೃದಯಾಘಾತವಾಯಿತೋ, ಊರಿಗೆ ಹೋಗುವ ಖುಷಿಯಿಂದ ಆಯಿತೋ!! ಆದರೆ ಇಲ್ಲೊಂದು ಬಡ ಜೀವ ಜೀವಂತ ಶವವಾಯಿತು.
‌ ‌‌‌** ** **

ಇದನ್ನು ಹೇಗೆ ಸ್ವೀಕರಿಸುತ್ತಿರೋ ಅದು ನಿಮಗೆ ಬಿಟ್ಟದ್ದು ಆದರೆ ಇಂತಹ ಹಲವು ಪ್ರಕರಣಗಳು ನಡೆದಿದೆ. ಇದರ ಮೂಲಕ ಹೇಳ ಹೊರಟಿರುವುದೇನೆಂದರೆ ಗಲ್ಫ್ ಮಾತ್ರ ಮನುಷ್ಯನಿಗೆ ಬದುಕಲ್ಲ ಅದರ ಹೊರಗೂ ಇದೆ. ಅಂತೆಯೇ ಗಲ್ಫ್‌ನಲ್ಲಿ ದುಡಿಯುವವರಿಂದ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅವರು ಕೂಡ ನಮ್ಮಂತೆಯೇ ದುಡಿಯುವ ಶ್ರಮಜೀವಿಗಳು. ಅವರಿಗೂ ಸಾಕಷ್ಟು ಕಷ್ಟಗಳಿರುತ್ತೆ ಎಲ್ಲವನ್ನು ಅವರು ಹೇಳಿಕೊಳ್ಳುವುದಿಲ್ಲ ನಾವಾಗಿ ಅರ್ಥಮಾಡಿಕೊಳ್ಳಬೇಕು. ಅನಿವಾಸಿ ಭಾರತೀಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ.

Leave a Reply