ಕಾಸರಗೋಡು: ಮಂಗಳೂರಿನಿಂದ 30 ಕಿ.ಮಿ ದೂರದಲ್ಲಿರುವ ಕುಂಬಳೆ, ಚೌಕಿ ಎಂಬಲ್ಲಿ‌ ಹೆಣ್ಣು ಮಕ್ಕಳಿಬ್ಬರ ಅಪಹರಣ ನಡೆದಿದೆ ಎಂದು ವದಂತಿಯೊಂದು ವಾಟ್ಸ್‌ಆ್ಯಪ್ ಮೂಲಕ‌ ಹರಿದಾಡಿದೆ. ಪರಿಣಾಮ ಜನ ಭಯಭೀತರಾಗಿದ್ದು, ಇದೀಗ ಮಕ್ಕಳು ಮನೆಯಲ್ಲಿ ಶೂ ರ‌್ಯಾಕ್ ಅಡಿಯಲ್ಲಿ ಆಟವಾಡುತ್ತಾ ನಿದ್ರೆಗೆ ಜಾರಿದ್ದು ಬಳಿಕ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಸಂಜೆ ವೇಳೆಯಲ್ಲಿ ಒಂದೇ ಮನೆಯ ಇಬ್ಬರು ಹೆಣ್ಣುಮಕ್ಕಳು ಕಾಣೆಯಾಗಿದ್ದು, ಮನೆಯವರು ಎಲ್ಲೆಡೆ ಹುಡುಕಾಡಿದ್ದಾರೆ.‌ ಮಕ್ಕಳ ಸುಳಿವು ಲಭಿಸದ ಕಾರಣ ವದಂತಿಗಳು ವ್ಯಾಪಕವಾಗಿ ವಾಟ್ಸ್‌ಆ್ಯಪ್ ಮುಖಾಂತರ ಹರಿದಾಡಿದೆ.

ಕಳೆದ ಒಂದು ವಾರದಿಂದ ಕಾಸರಗೋಡಿನಾದ್ಯಂತ ಮಕ್ಕಳ ಅಪಹರಣದ ಬಗ್ಗೆ ವದಂತಿಗಳು ಹರಿದಾಡಿದ್ದು ಜನರು ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದರು. ನಿನ್ನೆ ಅಪರಿಚಿತ ವ್ಯಕ್ತಿಗಳು ಗ್ರಾಮದಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ವೇಳೆ ಹಿಡಿದು ತನಿಖೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಆದಾಗ್ಯೂ ಕೆಲ ಭಿಕ್ಷುಕರನ್ನು ಇದೇ ರೀತಿ ಹಿಡಿದು ಮಕ್ಕಳ ಅಪಹರಣಕಾರರೆಂದು ಪೋಲಿಸರಿಗೆ ಒಪ್ಪಿಸಿದ ಘಟನೆಯೂ ಕೂಡ ಇತ್ತೀಚಿಗೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.

ಮಕ್ಕಳು ಕಾಣೆಯಾದ ಆಡಿಯೋ ಸಂದೇಶದ ವದಂತಿಗಳು ಈಗಾಗಲೇ ವೈರಲ್ ಆಗಿದ್ದು ಜನರು ಇನ್ನೂ ಆತಂಕದಲ್ಲೇ ಇದ್ದಾರೆ ಎಂದು ವರದಿಯಾಗಿದೆ. ಭಿಕ್ಷುಕರ ವೇಷದಲ್ಲಿ ಬಂದು ಮಕ್ಕಳನ್ನು ಅಪಹರಿಸುವ ಜಾಲದ ಬಗ್ಗೆ ಎಚ್ಚರ ವಹಿಸಬೇಕು.

Leave a Reply