ಎಲ್ಲರೂ ಹುಚ್ಚ ಹುಚ್ಚ ಎಂದರು, ಆದರೆ ಸರಕಾರ ಈ 82ರ ವೃದ್ಧನಿಗೆ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತು

ಮೌಂಟೇನ್ ಮ್ಯಾನ್” ಪ್ರಸಿದ್ಧ ದಶರಥ ಮಾಂಜಿಯ ಹೆಸರನ್ನು ಎಲ್ಲರೂ ಕೇಳಿದ್ದೇವೆ, ಆದರೆ ನಾವು ‘ಮ್ಯಾಡ್ ಮ್ಯಾನ್’ರ ಬಗ್ಗೆ ಎಷ್ಟು ಕೇಳಿದ್ದೇವೆ?

ಕಾಮೇಗೌಡ ಎಂಬ 82 ರ ಹರೆಯದ ವೃದ್ಧ ಕರ್ನಾಟಕದ ಈ ಹಳ್ಳಿಯಲ್ಲಿ 14 ಕೊಳಗಳನ್ನು ನಿರ್ಮಿಸಿದರು. ಅದಕ್ಕೆ ಅವರು ತ್ಯಾಗ ಮಾಡಿದ ವರ್ಷಗಳು ಎಷ್ಟು ಗೊತ್ತೇ? ಬರೋಬ್ಬರಿ 40 ವರ್ಷಗಳ ಕಾಲ.

ಕಾಮೇಗೌಡ ಎಂಬ ಹಳ್ಳಿಯ ಕೃಷಿಕ ಗೊಲ್ಲ ಇಂದು ಲಕ್ಷಾಂತರ ಜನರಿಗೆ ಪ್ರೇರಣೆ ಸ್ಪೂರ್ತಿಯಾಗಿದ್ದಾರೆ. ಕುಂದನಿ ಪರ್ವತದ ಮೇಲೆ ಇವರು ಕಟ್ಟಿರುವ ಕಟ್ಟೆ– ಕಾಲುವೆಗಳು ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನ ಜಾನುವಾರುಗಳಿಗೆ ಇದು ಸಂಜೀವಿನಿಯಾಗಿವೆ.

ಸುಮಾರು 40 ವರ್ಷಗಳ ಹಿಂದೆ, ತನ್ನ ಗ್ರಾಮದ ಹಿಂಭಾಗದಲ್ಲಿರುವ ಕುಂದನಿ ಬೆಟ್ಟದಲ್ಲಿ ಹಸಿರು ತುಂಬಾ ಕಡಿಮೆಯಾಗಿರುವುದನ್ನು ಅವರು ಮನಗಂಡರು. ಮಾತ್ರವಲ್ಲ, ನೀರಿನ ಪ್ರಮಾಣವೂ ಅಲ್ಲಿ ಗಣನೀಯ ಇಳಿಕೆಯಾಗಿತ್ತು. ಇದರಿಂದಾಗಿ ಸುತ್ತಮುತ್ತಲಿನ ಜನ, ಪ್ರಾಣಿ ಪಕ್ಷಿಗಳಿಗೆ ಸಂಕಷ್ಟ ಎದುರಾಗುತ್ತದೆ ಎಂದು ಅವರು ಈ ಕೈಂಕರ್ಯಕ್ಕೆ ಇಳಿದರು.

  • ನೀರು ಶೇಖರಣೆ ಗೊಳ್ಳುತ್ತಿರಲಿಲ್ಲ

ಈ ವಿಷಯದ ಕುರಿತು ಅವರು ಗಂಭೀರವಾಗಿ ಚಿಂತಿಸ ತೊಡಗಿದರು. ಈ ಬೆಟ್ಟದ ಮೇಲೆ ಮಳೆ ನೀರು ಶೇಖರಣೆ ಗೊಳ್ಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಕಟ್ಟೆ ಕಾಲುವೆಗಳಿರಲಿಲ್ಲ. ಆದ್ದರಿಂದ ಅವರು ಕೊಳ ಕಾಲುವೆಗಳನ್ನು ನಿರ್ಮಿಸುವ ದೃಢ ನಿರ್ಧಾರ ತೆಗೆದುಕೊಂಡರು.

ಶಾಲೆಯ ಮೆಟ್ಟಿಲನ್ನೇ ಕಾಣದ ಕಾಮೇಗೌಡರು ಸರ್ವ ಋತುಗಳಲ್ಲೂ ನೀರು ಆರದಂತಹ ಕಟ್ಟೆ ಕಟ್ಟಿದ್ದಾರೆ. ಬೆಟ್ಟದ ಮಧ್ಯ ಭಾಗದಿಂದ ದಾಸನದೊಡ್ಡಿ ಗ್ರಾಮದ ತಪ್ಪಲಿನವರೆಗೆ ಐದು ಕಟ್ಟೆ ಕಟ್ಟಿದ್ದಾರೆ. ಒಂದು ಕಟ್ಟೆ ತುಂಬಿದರೆ ಸಾಕು, ಎಲ್ಲ ಕಟ್ಟೆಗಳಲ್ಲಿ ನೀರು ಬಸಿದುಕೊಳ್ಳುತ್ತದೆ. ಎತ್ತರದ ಜಾಗದಿಂದ ಇಳಿಜಾರಿನವರೆಗಿನ ಎಲ್ಲ ಕಟ್ಟೆಗಳನ್ನು ಸೇರಿಸಿ ಸಂಪರ್ಕ ಕಾಲುವೆ ನಿರ್ಮಿಸಿದ್ದಾರೆ. ಜಿಲ್ಲೆ ಬರದಿಂದ ತತ್ತರಿಸಿದರೂ ಈ ಕುಂದೂರು ಬೆಟ್ಟದ ತಪ್ಪಲಿನ ಗ್ರಾಮಗಳ ಜನ–ಜಾನುವಾರುಗಳಿಗೆ ಎಂದೂ ಕುಡಿಯುವ ನೀರು ಕಡಿಮೆಯಾಗುವುದಿಲ್ಲ.

  • 15 ಲಕ್ಷ ಖರ್ಚು ಮಾಡಿದರು – ಸಾಕಿದ ಕುರಿ ಮಾರಿದರು!

ಕಾಮೇಗೌಡರಿಗೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ‌. ಕರ್ನಾಟಕ ಸರ್ಕಾರ ನೀಡುವ
ಬಸವಶ್ರೀ ಅಥವಾ ಬಸವೇಶ್ವರ ಪ್ರಶಸ್ತಿಯನ್ನು 2017 ರಲ್ಲಿ ಅವರಿಗೆ ನೀಡಲಾಯಿತು. ಅನೇಕ ಬಾರಿ ಹಣವನ್ನು ಅವರಿಗೆ ಬಹುಮಾನವಾಗಿ ನೀಡಲಾಯಿತು. ಆ ಹಣವನ್ನು ತನ್ನ ಯೋಜನೆಗಳಿಗೆ ಖರ್ಚು ಮಾಡಿದರು. ಈ 14 ಕೊಳಗಳನ್ನು ನಿರ್ಮಿಸಲು ಅವರು ಈಗಾಗಲೇ 10-15 ಲಕ್ಷ ರೂ. ಖರ್ಚು ಮಾಡಿದ್ದಾರೆ. ಒಮ್ಮೆ ಕಟ್ಟೆ ಕಟ್ಟಲು ಕೈ ಹಾಕಿದರೆ ಮನೆಯ ವಸ್ತುಗಳನ್ನೂ ಮಾರಿ ಕೆಲಸ ಮುಗಿಸುವ ಹಟ ಅವರದ್ದು. ಮನೆಯವರ ವಿರೋಧವನ್ನೂ ಲೆಕ್ಕಿಸದೆ, ತಾನು ಸಾಕಿದ ಕುರಿಗಳನ್ನು ಮಾರಿ ಐದು ಕಟ್ಟೆ ಕಟ್ಟಿದ್ದಾರೆ.

  • ಕೃಷ್ಣ ಎಂಬ ವಿಶೇಷ ಕೊಳ

ಅವರ ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ₹ 20 ಸಾವಿರ ಕೂಡಿಟ್ಟಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಸಹಜವಾಗಿ ಹೆರಿಗೆಯಾಯಿತು. ಒಂದು ರೂಪಾಯಿಯೂ ಖರ್ಚಾಗಲಿಲ್ಲ. ಹಣ ಉಳಿಸಿದ ಮೊಮ್ಮಗನಿಗೆ ಕೃಷ್ಣ ಎಂದು ಹೆಸರಿಟ್ಟು, ಮೊಮ್ಮಗ ಕೃಷ್ಟನ ಹೆಸರಲ್ಲಿ ಒಂದು ಕಟ್ಟೆ ಕಟ್ಟಿಸಿದ್ದಾರೆ

ಕಾಮೇಗೌಡ ಕಟ್ಟಿದ 14 ಕೊಳಗಳಿಂದಾಗಿ ಈ ಸ್ಥಳವು ಈಗ ಹಸಿರು ಮತ್ತು ನೀರಿನಿಂದ ತುಂಬಿದೆ. ಒಂದು ಕಾಲದಲ್ಲಿ ಬಂಜರಿನಂತೆ ಕಾಣುತ್ತಿದ್ದ ಈ ಪರ್ವತವು ಇಂದು ಸ್ವರ್ಗದಂತೆ ಸುಂದರವಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಿಂದ 10 ಕಿ.ಮೀ ದೂರದಲ್ಲಿದೆ ಕುಂದೂರು ಬೆಟ್ಟ. ಬೆಟ್ಟದ ತಪ್ಪಲಲ್ಲಿ ದಾಸನದೊಡ್ಡಿ, ಪಂಡಿತಹಳ್ಳಿ, ಹೊಸದೊಡ್ಡಿ, ತಿರುಮಳ್ಳಿ, ಪಣತಹಳ್ಳಿ ಸೇರಿ ಹತ್ತೂರುಗಳಿವೆ. ಕಳೆದ 40 ವರ್ಷಗಳಿಂದ ಇಲ್ಲಿ ಕಾವಲುಗಾರನಂತಿರುವ ದಾಸನದೊಡ್ಡಿಯ ಕಾಮೇಗೌಡ, ಬೆಟ್ಟದ ಮೇಲೆ ಕಟ್ಟೆ, ಕಾಲುವೆ, ರಸ್ತೆ ನಿರ್ಮಿಸಿ ಸಾವಿರಾರು ಗಿಡ ನೆಟ್ಟು ಬೆಳೆಸಿದ್ದಾರೆ.

  • ಮ್ಯಾಡ್ ಮ್ಯಾನ್ ಎಂಬ ಹೆಸರು ಬಂತು!

ಒಮ್ಮೆ ಕಾಮೇಗೌಡರಿಗೆ ಕಣ್ಣಿನ ಸಮಸ್ಯೆಯಿಂದ ಕಣ್ಣು ಆಪರೇಶನ್ ಮಾಡಲು ಡಾಕ್ಟರ್ ಹೇಳಿದರು. ಡಾಕ್ಟರ್ ಅವರನ್ನು ಹೊರಗೆ ಹೋಗದಂತೆ ಸೂಚಿಸಿದರು. ಅದಕ್ಕೆ ಕಾಮೇಗೌಡ ಹೇಳಿದರು, ತನಗೆ ಹೊರಗೆ ಹೋಗಲು ಎರಡು ಕಣ್ಣುಗಳ ಅವಶ್ಯಕತೆ ಇಲ್ಲ. ಕಣ್ಣು ಕಾಣದಿದ್ದರೂ ಎಲ್ಲಿ ಏನಿದೆ ಎಂದು ತಾನು ಗುರುತಿಸುವುದಾಗಿ ಹೇಳಿದರು.

ಕಾಮೇಗೌಡರ ಇಂತಹ ಹಲವಾರು ಉದಾಹರಣೆಗಳನ್ನು , ಬೆಟ್ಟದ ಮೇಲಿನ ಅವರ ಪ್ರೀತಿಯ ಹುಚ್ಚುತನವನ್ನು ಕಂಡು ಗ್ರಾಮಸ್ಥರು, ಸಂಬಂಧುಕರು ಅವರನ್ನು ಮ್ಯಾಡ್ ಮ್ಯಾನ್ ಎಂದು ಕರೆದರು.

  • ಮರ, ಮರಳು ಕಳ್ಳರ ಕಾಟ

ಕಾಮೇಗೌಡರು ಕಟ್ಟಿರುವ ಕಟ್ಟೆ ಹಾಗೂ ಕಾಲುವೆಯಲ್ಲಿ ಮರಳು ಸಂಗ್ರಹವಾಗುತ್ತಿದೆ. ಮರಳು ಕದಿಯಲು ಬೆಟ್ಟಕ್ಕೆ ಬರುವ ಕಳ್ಳರು ಕಾಮೇಗೌಡರಿಗೆ ನಿತ್ಯ ಕಿರುಕುಳ ಕೊಡುತ್ತಿದ್ದಾರೆ. ಹಲವರು ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ. ಅಲ್ಲದೆ, ಬೆಳೆದು ನಿಂತಿರುವ ಮರಗಳನ್ನೂ ಕಳವು ಮಾಡುತ್ತಿದ್ದಾರೆ. ಕಳ್ಳರ ವಿರುದ್ಧ ಕಾಮೇಗೌಡರು ಹಲವು ಬಾರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

‘ನನಗೆ ಪ್ರಾಣ ಭಯವಿಲ್ಲ. ನನ್ನನ್ನು ಕೊಂದು ಹಾಕಿದರೂ ಈ ಬೆಟ್ಟ ಬಿಟ್ಟು ಕದಲುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ನನಗೆ ಕಳ್ಳಕಾಕರ ಭಯ ಇರುತ್ತಿರಲಿಲ್ಲ. ಈ ಜೀವ ಇರುವತಕನ ಈ ಬೆಟ್ಟದಜೀವವಾಗಿ ಹೋರಾಡುತ್ತೇನೆ’ ಎಂದು ಕಾಮೇಗೌಡರು ತಿಳಿಸಿದರು.

(ಇದು ನಮ್ಮ ಊರು – ಬದುಕು ವಿಶೇಷ ಸ್ಟೋರಿ
ಆಕರ: ದುನಿಯಾ ಡೈಜೆಸ್ಟ್ ಮತ್ತು ಪ್ರಜಾವಾಣಿ ಲೇಖನ)

Leave a Reply