ಗವಾಹಟಿ : ಅಸ್ಸಾಮ್‍ನಲ್ಲಿ ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್(NRC) ಹೊರಡಿಸಿದ ನಾಗರಿಕತೆ ಪಟ್ಟಿಯಲ್ಲಿ ಮೊದಲ ಕರಡು ದೊಡ್ಡ ವಿವಾದ ಸೃಷ್ಟಿಸಿದೆ. 40 ಲಕ್ಷ ಮಂದಿಯನ್ನು ಭಾರತದ ನಾಗರಿಕತೆಯಿಂದ ಹೊರಗಿಡಲಾಗಿದೆ. ಇದು ಪಾರ್ಲಿಮೆಂಟಿನಲ್ಲಿ ದೊಡ್ಡ ಪ್ರತಿಭಟನೆಗೂ ಕಾರಣವಾಗಿದೆ.

ಸುಮಾರು 30 ವರ್ಷ ಕಾಲ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಕೂಡ ಕೇಂದ್ರ ಸರಕಾರದ ನಾಗರಿಕ ಪಟ್ಟಿಯಿಂದ ಹೊರಗಿಡಲಾಗಿದೆ.

ಸೇನೆಯಲ್ಲಿ ಜೂನಿಯರ್ ಕಮಿಶನ್ ಅಧಿಕಾರಿಯಾಗಿದ್ದ ಮುಹಮ್ಮದ್ ಅಜ್ಮಲ್ ಹಕ್ ಕೊನೆಗೆ ತಾನು ಭಾರತದ ಪ್ರಜೆ ಎಂದು ಸಾಬೀತು ಪಡಿಸಲು ಅಧಿಕಾರಿಗಳ ಮುಂದೆ ಬರಬೇಕಾದ ಸ್ಥಿತಿ ನಿರ್ಮಿಸಲಾಗಿದೆ. ಮುಹಮ್ಮದ್ ಹಕ್‍ರ ಕುಟುಂಬ ಸದಸ್ಯರು ಕೂಡ ನಾಗರಿಕತೆ ಪಟ್ಟಿಯಿಂದ ಹೊರಗಿದ್ದಾರೆ.

’30 ವರ್ಷ ಭಾರತ ಸೇನೆಯ ಭಾಗವಾಗಿದ್ದೆ. NRC ಪಟ್ಟಿಯಲ್ಲಿ ಹೆಸರಿಲ್ಲ ಎಂಬುದು ದೊಡ್ಡ ಬೇಸರದ ವಿಚಾರವಾಗಿದೆ. ತುಂಬ ವಿಶ್ವಾಸದಿಂದ ದೇಶ ಸೇವೆ ಮಾಡಿದ್ದೇನೆ.
ತಂದೆ ತಾಯಿಯರಿಂದ ಸಿಕ್ಕಿರುವ ವಿಲ್ ಪತ್ರ ನನ್ನ ಬಳಿಯಿದೆ. ತನಿಖೆ ನ್ಯಾಯಯುತ ಪಾರದರ್ಶಕ ಆಗಬೇಕೆಂದು ನಾನು ಬಯಸುತ್ತೇನೆ’ ಎಂದು ಹಕ್‍ರನ್ನು ಉದ್ಧರಸಿ ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

1986 ಸೆಪ್ಟಂಬರ್‍ ನಿಂದ 2016 ವರೆಗೆ ಹಕ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸರಕಾರದ ಕಡೆಯಿಂದ ತನ್ನ ಪರವಾಗಿ ತೀರ್ಮಾನ ಬರಬಹುದು ಎಂದು ಅವರು ಮತ್ತು ಕುಟುಂಬ ಸದಸ್ಯರು ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ.

ಅಸ್ಸಾಮ್‍ನಲ್ಲಿ NRC (ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್) ಹೊರಡಿಸಿದ ನಾಗರಿಕ ಪಟ್ಟಿಯಲ್ಲಿ 40 ಲಕ್ಷ ಮಂದಿಯ ಹೆಸರನ್ನು ಕೈ ಬಿಡಲಾಗಿದೆ. ಅಸ್ಸಾಮ್‍ನ 3. 29 ಕೋಟಿ ಜನರಲ್ಲಿ 2, 89,83,677 ಮಂದಿ ಮಾತ್ರ ಭಾರತದ ನಾಗರಿಕರು ಎಂದು ಎನ್‍ಆರ್‍ಸಿ ಪಟ್ಟಿಯಲ್ಲಿ ಲೆಕ್ಕ ಮಾಡಲಾಗಿದೆ. ಪಟ್ಟಿಯಲ್ಲಿಲ್ಲದವರು ದಾಖಲೆಗಳನ್ನು ಹಾಜರು ಪಡಿಸಬೇಕು ಎಂದು ತಿಳಿಸಲಾಗಿದೆ. ಈ ದಾಖಲೆಯ ಆಧಾರದಲ್ಲಿ ಡಿಸೆಂಬರ್ 2018ಕ್ಕೆ ಅಂತಿಮ ನಾಗರಿಕತೆ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಗೃಹ ಖಾತೆ ತಿಳಿಸಿದೆ.

Leave a Reply