ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ,
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಯ ಮೂರು ಹಿಂದೂ ಅಭ್ಯರ್ಥಿಗಳು ಸಿಂಧ್ ಪ್ರಾಂತ್ಯದ ಮುಸ್ಲಿಂ ಬಾಹುಳ್ಯ ಪ್ರದೇಶಗಳಿಂದ ಆಯ್ಕೆಯಾಗಿ ಗೆದ್ದು ಬಂದಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಮಹೇಶ್ ಮಲಾನಿ ರವರು ತಾರ್ಪರ್ಕರ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದರೆ, ಹರಿ ರಾಮ್ ಕಿಶ್ವರಿ ಲಾಲ್ ಮತ್ತು ಗ್ಯಾನ್ ಚಂದ್ ಎಸ್ರಾನಿ ಎಂಬವರು ಇತರ ಎರಡು ಕ್ಷೇತ್ರಗಳಲ್ಲಿ ಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೂರು ಅಭ್ಯರ್ಥಿಗಳು ಗೆದ್ದು ಬಂದಿರುವುದು ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಯಾಗಿದೆ.

ತಾರ್ಪಾರ್ಕರ್ ಜಿಲ್ಲೆಯಿಂದ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಲಾನಿ, ತನ್ನ ಎದುರಾಳಿ ಆರ್ಬಾಬ್ ಜಕುಲ್ಲಾ ವಿರುದ್ಧ 106,230 ಮತಗಳನ್ನು ಪಡೆದಿದ್ದು, ಎದುರಾಳಿ ಪ್ರತಿಸ್ಪರ್ಧಿ 87,261 ಮತಗಳನ್ನು ಪಡೆದರು. ಆ ಕ್ಷೇತ್ರದಲ್ಲಿ ಹಿಂದೂ ಜನಸಂಖ್ಯೆ ಶೇಕಡಾ 49 ರಷ್ಟಿದೆ .

ಮಾಜಿ ಅಧ್ಯಕ್ಷ ಮತ್ತು ಪಿಪಿಪಿಯ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಸ್ನೇಹಿತನಾಗಿದ್ದ ಕಿರ್ಶ್ವರಿ ಲಾಲ್ ಅವರು ಮಿರ್ಪುರ್ಖಾಸ್ ಜಿಲ್ಲೆಯಿಂದ ತಮ್ಮ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ. ಇಲ್ಲಿ ಸುಮಾರು 15 ಲಕ್ಷ ಜನಸಂಖ್ಯೆ ಇದ್ದು ಅದರಲ್ಲಿ 23 ಶೇ. ಹಿಂದುಗಳಿದ್ದಾರೆ. ಅವರು ಮುತ್ತಹಿದ ಕೌಮಿ ಮೂವ್ಮೆಂಟ್ನ ಮುಜೀಬುಲ್ ಹಕ್ ರನ್ನು ಸೋಲಿಸಿದ್ದಾರೆ.

ಎಸ್ಸ್ರಾನಿ ಎಂಬವರು ಜಮ್ಶೋರೊ ಜಿಲ್ಲೆಯ ಸಿಂಧ್ ಕೊಹಿಸ್ತಾನ್ ಪ್ರದೇಶಕ್ಕೆ ಸೇರಿದವರಾಗಿದ್ದು, ಇಲ್ಲಿ ಗಣನೀಯ ಪ್ರಮಾಣದ ಹಿಂದೂ ಜನಸಂಖ್ಯೆಯಿದ್ದು ಅವರು ಮಲಿಕ್ ಚಂಗೇಝ್ ಖಾನ್ ರ ವಿರುದ್ಧ ಗೆದ್ದರು.

ಅಧಿಕೃತ ಅಂದಾಜಿನ ಪ್ರಕಾರ, ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದರೆ, ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ಆ ದೇಶದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಹಿಂದೂ ಜನಸಂಖ್ಯೆಯ ಬಹುಪಾಲು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ, ಅಲ್ಲಿ ಅವರು ತಮ್ಮ ಮುಸ್ಲಿಂ ಸಹ ಸಮುದಾಯದೊಂದಿಗೆ ಸಂಸ್ಕೃತಿ, ಸಂಪ್ರದಾಯದ ಜೊತೆ ಸೌಹಾರ್ದದಿಂದ ಬಾಳುತ್ತಿದ್ದಾರೆ.
ಹಿಂದೂ ಅಭ್ಯರ್ಥಿಗಳ ವಿಜಯವನ್ನು ಪಾಕಿಸ್ತಾನದ ಹಿಂದೂ ಸಂಘಟನೆಗಳು ಸ್ವಾಗತಿಸಿದೆ.

Leave a Reply