ಕರ್ನಾಟಕ ರಾಜ್ಯದ ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಿರುವ ಮ್ಯಾನೇಜ್‍ಮೆಂಟ್ ಸೀಟುಗಳ ಕ್ಲೈಮ್‍ಗೆ ಅರ್ಹರಾಗಿರುವ ಹಲವು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾಫ್ಟ್‌ವೇರ್ ಅವಾಂತರ ಮತ್ತು ನೀಟ್ ದಾಖಲೆಗಳ ಪರಿಶೀಲನೆಯ ಗೊಂದಲದಿಂದಾಗಿ ಅವಕಾಶ ವಂಚಿತರಾಗಿರುವ ಪ್ರಕರಣ ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಕಂಗಾಲಾಗಿರುವ ವಿದ್ಯಾರ್ಥಿಗಳು ಮತ್ತು ಪಾಲಕರು ಹೆಲ್ಪ್ ಲೈನ್ ಸೆಂಟರ್‍ಗಳಲ್ಲಿ ಎಷ್ಟೇ ಗೋಳಿಡುತ್ತಿದ್ದರೂ, ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಪ್ರಾಧಿಕಾರವೇ ಮಾಹಿತಿ ಕೈಪಿಡಿಯಲ್ಲಿ ಹೇಳಿಕೊಂಡಂತೆ ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಲ್ಲಿ ಸೀಟು ಪಡೆಯಬೇಕಾದರೆ ಅಭ್ಯರ್ಥಿಗಳು ಮುಸ್ಲಿಮ್ ಅಥವಾ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಾಲೂಕು ತಹಶೀಲ್ದಾರರಿಂದ ಧಾರ್ಮಿಕ ಅಲ್ಪಸಂಖ್ಯಾತ ದೃಡೀಕರಣ ಪತ್ರ ಹೊಂದಿದ್ದರೆ ಸಾಕು. ಆದರೆ, ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಟ 10 ವರ್ಷ ಕರ್ನಾಟಕದಲ್ಲೇ ವ್ಯಾಸಾಂಗ ಮಾಡಿರಬೇಕು ಹಾಗೂ ಶಾಲಾ ದಾಖಲೆಗಳಲ್ಲಿ ಅವರ ಮಾತೃ ಭಾಷೆ ತುಳು/ಕೊಡವ/ತೆಲುಗು/ತಮಿಳು ಎಂಬುದಾಗಿ ನಮೂದಿತವಾಗಿರಬೇಕು. ವ್ಯಾಸಾಂಗ ಪ್ರಮಾಣ ಪತ್ರದ ಜೊತೆಗೆ ತಹಶೀಲ್ದಾರರಿಂದ ದೃಡೀಕರಣ ಪತ್ರ ಮತ್ತು ನಿಗದಿತ ನಮೂನೆಯಲ್ಲಿ ಅಫಿದಾವಿತ್‍ನ್ನು ಅವರು ಹಾಜರುಪಡಿಸಬೇಕು. ಈ ನಿಯಮ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನ್ವಯವಾಗದಿದ್ದರೂ ಕರ್ನಾಟಕದಲ್ಲಿ 10 ವರ್ಷ ವ್ಯಾಸಾಂಗ ಮಾಡಿಲ್ಲ ಎಂಬ ಕಾರಣ ನೀಡಿ, ಅನೇಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಅಲ್ಪಸಂಖ್ಯಾತ ಕೋಟಾದ ಅವಕಾಶವನ್ನು ನಿರಾಕರಿಸಲಾಗಿದೆ. ಸ್ಪಷ್ಟ ಮಾಹಿತಿಗಳ ಕೊರತೆಯಿಂದಾಗಿ ಕೆಲವು ಅಭ್ಯರ್ಥಿಗಳು ಆನ್‍ಲೈನ್ ನೀಟ್ ನೋಂದಣಿ ಸಂದರ್ಭದಲ್ಲಿ ಮಾಡಿರುವ ಎಡವಟ್ಟುಗಳೂ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಸಂಜೆ ಬನ್ನಿ, ನಾಳೆ ಬನ್ನಿ, ಸರಿಯಾಗಬಹುದು ಎಂಬುದಾಗಿ ಕೆಲವು ನೋಡಲ್ ಅಧಿಕಾರಿಗಳು ಸಮಜಾಯಿಸಿಕೆ ನೀಡುತ್ತಿದ್ದರೆ, ಇನ್ನು ಕೆಲವು ಹೆಲ್ಪ್‍ಲೈನ್ ಸೆಂಟರ್‍ನ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಸಂಬಂಧ ಮನವಿ ನೀಡಿದ್ದರೂ, ಇನ್ನೂ ಪರಿಹಾರ ದೊರೆತಿಲ್ಲ. ಪ್ರಾಧಿಕಾರವು ಈ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿದಂತೆ ತುರ್ತುಕ್ರಮ ಕೈಗೊಂಡು, ಅವಕಾಶ ವಂಚಿತ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್‍ನ ಸ್ಥಾಪಕಾಧ್ಯಕ್ಷ ಉಮರ್ ಯು. ಹೆಚ್. ಒತ್ತಾಯಿಸಿದ್ದಾರೆ.

Leave a Reply