ಟೆಲ್‍ಅವೀವ್: ಫೆಲೆಸ್ತೀನಿನ ಕವಿಯಿತ್ರಿ ದಾರಿನ್ ಟಾಟೂರ್‍ಗೆ ಇಸ್ರೇಲಿನ ಕೋರ್ಟು ಐದು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಭಯೋತ್ಪಾದನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ದಾರಿನ್ ವಿರುದ್ಧ ಆರೋಪ ಹೊರಿಸಲಾಗಿತ್ತು. ದಾರಿನ್ 36 ವರ್ಷದ ಫೆಲಸ್ತೀನ್ ಕವಿಯಾಗಿದ್ದು ನಝಾರತ್ ಜಿಲ್ಲಾ ಕೋರ್ಟು ಐದು ತಿಂಗಳ ಜೈಲು ಶಿಕ್ಷೆ ತೀರ್ಪು ನೀಡಿದೆ. ಮೂರು ತಿಂಗಳ ಗೃಹ ಬಂಧನದ ಬಳಿಕ ದಾರಿನ್‍ಗೆ ಕೋರ್ಟು ನಿನ್ನೆ ಶಿಕ್ಷೆ ಪ್ರಕಟಿಸಿತು.

2015 ಅಕ್ಟೋಬರ್‍ನಲ್ಲಿ ದಾರಿನ್‍ರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದರು. ಪ್ರತಿರೋಧಿಸಿರಿ, ಜನರೇ ಪ್ರತಿರೋಧಿಸಿರಿ ಎಂದು ಸ್ವರಚಿತ ಕವಿತೆಯನ್ನು ಯುಟ್ಯೂಬ್‍ನಲ್ಲಿ ಹಾಕಿದ್ದರು. ಈ ಕವಿತೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಇಸ್ರೇಲಿನ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ನಂತರ ಅವರು ಗೃಹಬಂಧನಕ್ಕೊಳಗಾದರು. ಈ ಸಮಯದಲ್ಲಿ ಇಂಟರ್‍ನೆಟ್ ಅವರಿಗೆ ನಿಷೇಧ ಹೇರಿತ್ತು.

ಕೋರ್ಟು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ದಾರಿನ್ ವಕೀಲರು ಸಿದ್ಧತೆ ನಡೆಸಿದ್ದಾರೆ. ಯಾವುದೇ ಸರಕಾರದ ವಿರುದ್ಧ ಕವಿತೆ ಬರೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಏನನ್ನೂ ದಾರಿನ್ ಮಾಡಿಲ್ಲ ಎಂದು ವಕೀಲರು ಹೇಳಿದರು. ಅಹಿಂಸಾತ್ಮಕ ಹೋರಾಟಕ್ಕೆ ತಾನು ಕವಿತೆಯ ಮೂಲಕ ಜನರಿಗೆ ಕರೆ ನೀಡಿದ್ದೇನೆ ಎಂದು ಕವಿಯಿತ್ರಿ ದಾರಿನ್ ತಿಳಿಸಿದ್ದಾರೆ.

Leave a Reply