ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಬ್ಬರನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಥಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನ ಹಳ್ಳಿ ತಾಲೂಕಿನ ಬೆಟ್ಟಳ್ಳಿಯಲ್ಲಿ ನಡೆದಿದೆ.

ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ ಕಲಿಯುತ್ತಿದ್ದ ಹರೀಶ್ ಮತ್ತು ಹೇಮಂತ್ ಎಂಬಿಬ್ಬರು ವಿದ್ಯಾರ್ಥಿಗಳು ಕಾಲೇಜು ಕಲಿಯೋದು ಬಿಟ್ಟು ಯಲಹಂಕದಿಂದ ಬೆಟ್ಟ ಹಳ್ಳಿಯತ್ತ ಬಂದು ಹುಡುಗಿಯರನ್ನು ಚುಡಾಯಿಸುತ್ತಾ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಇದರಿಂದ ತೊಂದರೆಗೆ ಒಳಗಾದ ಗ್ರಾಮಸ್ಥರು ಅವರಿಗೆ ಬುದ್ಧಿವಾದ ಹೇಳಿದ್ರು ಗ್ರಾಮಸ್ಥರ ವಿರುದ್ಧವೇ ಗ್ಯಾಂಗ್ ಕಟ್ಟಿ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.

Courtesy TV9

ಓತ್ಲಾ ವಿದ್ಯಾರ್ಥಿಗಳ ಪುಂಡಾಟಿಕೆಯನ್ನು ಪ್ರಶ್ನಿಸಿದ ಇದೇ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಹೇಮಂತ್ , ಹರೀಶ್ ಜೊತೆಗೂಡಿ ಬಂದ ಮೂವತ್ತು ಮಂದಿ ಗ್ಯಾಂಗ್‌ನವರು ಹಲ್ಲೆ ನಡೆಸಿದ್ದಾರೆ. ಅದಲ್ಲದೇ ಮಹಿಳೆಯರ ಮೇಲೂ ಅವಾಚ್ಯ ಪದಗಳನ್ನು ಬಳಸಿದ್ದಾರೆ. ‌ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಒಟ್ಟು ಸೇರಿ ಓತ್ಲಾ ಗ್ಯಾಂಗಿನ ಹೇಮಂತ್ ಹಾಗೂ ಹರೀಶ್‌ನನ್ನು ಮರಕ್ಕೆ ಕಟ್ಟಿ ಚೆನ್ನಾಗಿ ತದುಕಿದ್ದಾರೆ.

Courtesy TV9

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕಾಗಮಿಸಿದ ವಿಶ್ವನಾಥಪುರ ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಗ್ಯೂ ಪೋಲಿಸರು ಬರುವಷ್ಟರಲ್ಲಿ ಓತ್ಲಾ ಗ್ಯಾಂಗಿನವರು ಹಣ್ಣುಗಾಯಿ ನೀರುಗಾಯಿ ಆಗಿದ್ದರು.

Courtesy TV9

Leave a Reply