ಮಂಗಳೂರು: ಸುಮಾರು 6,37,500 ರೂಪಾಯಿ ಸಾಲದ ಉರುಳಲ್ಲಿ ಸಿಲುಕಿ ಮಾನಸಿಕವಾಗಿ ನೊಂದು ಹೋಗಿದ್ದ ಮಂಗಳೂರು ತಾಲೂಕಿನ ಬಜಾಲ್‌ ನಂತೂರಿನ ಬಡ ಕುಟುಂಬವೊಂದನ್ನು ಮಂಗಳೂರಿನ ಸಮಾಜಸೇವಾ ಘಟಕವೊಂದು ಸಾಲದಿಂದ ವಿಮೋಚಿಸಿದೆ.

ದಾನಿಗಳು ಸಕಾಲಕ್ಕೆ ನೀಡಿದ ಸಹಾಯ-ಸಹಕಾರದಿಂದ ಸುಮಾರು 6,37,500 ರೂಪಾಯಿಯನ್ನು 32 ಮಂದಿಗೆ ನೇರವಾಗಿ ಸಾಲ ಹಿಂತಿರುಗಿಸಲಾಯಿತು. ಐದು ಹೆಣ್ಣು, ಮೂರು ಗಂಡು ಮಕ್ಕಳಿರುವ ಈ ಕುಟುಂಬದ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ದೃಷ್ಟಿ ನಷ್ಟಪಟ್ಟಿದೆ. ಸಾಲದ ಸಿಕ್ಕುಗಳಿಂದ ಹೊರಬಂದ ಖುಷಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮನೆಯ ಯಜಮಾನ ಮತ್ತು ಮನೆಯವರ ಸಂತೋಷಕ್ಕೆ ಪಾರವೇ ಇಲ್ಲ.

ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ಇದರ ಅಂಗ ಸಂಸ್ಥೆಯಾಗಿದ್ದು ಜಾತಿ ಮತ ಧರ್ಮ ಬೇಧವೆನ್ನದೆ ಸೇವಾ ಕಾರ್ಯಗಳನ್ನು ಮಾಡುತ್ತಾ ಇದೆ ಎಂದು ಸಮಾಜ ಸೇವಕ ಸಿದ್ದೀಕ್ ಜೆಕ್ರಿಬೆಟ್ಟು ಹೇಳಿದ್ದಾರೆ.

Leave a Reply