ಗುಬ್ಬಿ.. ಗುಬ್ಬಿ.. ಚಿವ್‌ ಚಿವ್‌ ಎಂದು ಕರೆಯುವೆ ಯಾರನ್ನು… ಅನ್ನೋ ಹಾಡು ಎಲ್ಲರಿಗೂ ತಮ್ಮ ತಮ್ಮ ಬಾಲ್ಯವನ್ನು ನೆನಪಿಸುತ್ತದೆ, ಹಾಗೆಯೇ ‘ಗುಬ್ಬಚ್ಚಿ ಗೂಡಿನಲ್ಲಿ  ಕದ್ದು ಮುಚ್ಚಿ….’ ಹಾಡು ಯೌವನವನ್ನು ನೆನಪಿಸುತ್ತದೆ. ಆದರೆ ವಿಪರ್ಯಾಸವೇನೆಂದರೆ ಗುಬ್ಬಚ್ಚಿ ಇನ್ನು ನೆನಪು ಮಾತ್ರ ಆಗುವ ಹೊಸ್ತಿಲಲ್ಲಿ ಇದೆ.

ಗುಬ್ಬಚ್ಚಿ ನೋಡದವರು ಯಾರು ಇರಲಿಕ್ಕಿಲ್ಲ.  ಗುಬ್ಬಚ್ಚಿ ಎಲೆಲ್ಲೂ ಕಣ್ಣಿಗೆ ಬೀಳುವ ಒಂದು ಹಕ್ಕಿ.ಇದು ಜನರ ಮಧ್ಯೆ ವಾಸಿಸಬಯಸುತ್ತದೆ. ಗುಬ್ಬಚ್ಚಿಗಳು ಯಾವಾಗಲು ಜೋಡಿಯಾಗಿರುತ್ತದೆ.

ಅವುಗಳ ಬಣ್ಣ ಕಂದು ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ.

ಗುಬ್ಬಚ್ಚಿಯು ಧಾನ್ಯಗಳನ್ನು,ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತದೆ.ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ. ಗುಬ್ಬಿ ಕಿಟಕಿಯ ಅಡಿಭಾಗ,ಬಾಗಿಲಿನ ಮೇಲ್ಭಾಗ, ಅಲ್ಮಿರಾ, ಮನೆಯ ಮೂಲೆಗಳು ಹೀಗೆ ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ.

ಗೋಡೆಗಳಲ್ಲಿರುವ ರಂಧ್ರಗಳು,ಮಾಡುಗಳಲ್ಲಿ ಗುಬ್ಬಿ ಗೂಡು ಕಟ್ಟಿಕೊಳ್ಳುತ್ತದೆ.ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ಇಡುತ್ತದೆ.ಗುಬ್ಬಚ್ಚಿ ಒಂದು ವರುಷದಲ್ಲಿ ಅನೇಕ ಬಾರಿ ಮೊಟ್ಟೆಗಳನ್ನು ಇಟ್ಟು, ತನ್ನ ಸಂತಾನವನ್ನು ಬೆಳೆಸಿಕೊಳ್ಳುತ್ತದೆ.ಈ ಹಕ್ಕಿಯ ಕಾಲುಗಳು ತೀರ ತೆಳ್ಳಗಿರುವದರಿಂದ ಅದು ತನ್ನ ಮೈಭಾರವನ್ನು ಹೊರಲಾರದು.ಹಾಗಾಗಿ ಗುಬ್ಬಚ್ಚಿ ನಡೆಯುವುದು ವಿರಳ.

ಹತ್ತಿರದ ಗಮ್ಯವನ್ನು ಜಿಗಿಯುತ್ತ ಅಥವಾ ಹಾರುತ್ತ ಸೇರಿಕೊಳ್ಳುವುದನ್ನು ಗಮನಿಸಬಹುದಾಗಿದೆ. ರೇಷನ್ ಅಂಗಡಿಯ ಕಾಯಂ ನಿವಾಸಿಗಳು ಅಲ್ಲಿ ಅಕ್ಕಿ ತಿನ್ನುತ್ತಾ ಚಿಂವ್ ಚಿಂವ್ ಶಬ್ದ ಮಾಡುತ್ತಾ ಇರುವ ಗುಬ್ಬಚ್ಚಿಗಳನ್ನು ನೋಡುವುದೇ ಒಂದು ಆನಂದ.

ಗುಬ್ಬಚ್ಚಿಗಳು ಇತ್ತೀಚಿನ ವರದಿಗಳ ಪ್ರಕಾರ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಎಂದು ಗುರುತಿಸಲಾಗಿದೆ. ಅತ್ಯಂತ ವೇಗದಿಂದ ಕೂಡಿದ ಮಾನವನ ಜೀವನಕ್ಕೆ ಹೊಂದಿಕೊಳ್ಳಲು ಪ್ರಕೃತಿಯೊಂದಿಗೆ ಆಡುವ ಆಟಕ್ಕೆ ಹಲವು ಜೀವಿಗಳು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಅದರಲ್ಲಿ ನಮ್ಮ ಪುಟ್ಟ ಗುಬ್ಬಚ್ಚಿಯು  ಸೇರಿದೆ ಎನ್ನುವುದೇ ಬೇಸರದ ವಿಷಯ.

ಒಂದು ಅಧ್ಯಯನದ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ಎಲೆಕ್ಟ್ರಾನಿಕ್‌ ತರಂಗಗಳು, ರೇಡಿಯೋ ತರಂಗಗಳು, ವಿದ್ಯುತ್‌ಕಾಂತೀ ಅಲೆಗಳು ಗುಬ್ಬಚ್ಚಿಗಳ ಸೂಕ್ಷ್ಮ ಹೃದಯಕ್ಕೆ ಹಾಗೂ ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಹಾನಿಯುಂಟುಮಾಡುತ್ತಿವೆ. ಈಗ ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿಯೂ ಎಲೆಕ್ಟ್ರಾನಿಕ್‌ ತರಂಗಗಳು ಆವರಿಸಿರುವುದರಿಂದ ಗುಬ್ಬಚ್ಚಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ.

ಲೇಖಕರು :ಶಾಫಿ ಮುಕ್ಕಚ್ಚೇರಿ

Leave a Reply