-ಸಾಂದರ್ಭಿಕ ಚಿತ್ರ-

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದೆ. ವಿವಿಧ ಶ್ರೇಣಿಗಳಲ್ಲಿ ಪಾಸಾದ ಹಾಗೂ ಕೆಲವು ವಿಷಯಗಳಲ್ಲಿ ಫೇಲಾದ ಎಲ್ಲ ಮಕ್ಕಳಿಗೂ ಅಭಿನಂದನೆಗಳು. ಪರೀಕ್ಷೆಯಲ್ಲಿ ಪಡೆದ ಅಂಕಗಳು ಮಾತ್ರ ನಿಮ್ಮ ಭವಿಷ್ಯವನ್ನು ರೂಪಿಸುವುದಲ್ಲ. ಆದ್ದರಿಂದ ಅಂಕಗಳು ಕಡಿಮೆ ಬಂದಿರುವುದಕ್ಕೆ ಕೊರಗಬೇಡಿ. ಎಸ್‍ಎಸ್‍ಎಲ್‍ಸಿಯಲ್ಲಿ ಫೇಲಾದರೂ/ಕಡಿಮೆ ಅಂಕ ಪಡೆದರೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಕೀರ್ತಿ ಮತ್ತು ದುಡ್ಡು ಸಂಪಾದನೆ ಮಾಡಿರುವ, ಬದುಕು ಕಟ್ಟಿಕೊಂಡಿರುವ ಅನೇಕ ಮಂದಿ ನಮ್ಮ ಕುಟುಂಬ ಮತ್ತು ಸುತ್ತು ಮುತ್ತಲ ಸಮಾಜದಲ್ಲಿದ್ದಾರೆ. ಎದೆಗುಂದಬೇಡಿ, ಖುಷಿಯಾಗಿರಿ.

ಪರೀಕ್ಷೆಯಲ್ಲಿ ನೀವೇನು ಬರೆದಿದ್ದೀರೋ ಅದಕ್ಕೆ ತಕ್ಕ ಅಂಕ ದೊರೆತಿದೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದಾದರೆ ಉತ್ತರ ಪತ್ರಿಕೆಯ ಪ್ರತಿಗಳನ್ನು ತರಿಸಿಕೊಳ್ಳಿ. ರೀ ಟೋಟಲಿಂಗ್ ಅಥವಾ ರೀ ವ್ಯಾಲ್ಯುವೇಶನ್‍ಗೆ ಅರ್ಜಿ ಹಾಕಿ. ಫೇಲಾದ ವಿಷಯಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸಾಗುವುದಾದರೆ ಪ್ರಯತ್ನಿಸಿ, ಈ ಶೈಕ್ಷಣಿಕ ವರ್ಷದಲ್ಲೇ ಎಸ್‍ಎಸ್‍ಎಲ್‍ಸಿ ಪೂರ್ತಿಗೊಳಿಸಿ. ಅಸಾಧ್ಯವಾದರೆ ಬಿಟ್ಟು ಬಿಡಿ. ಮುಂದೇನು? ಎಂಬ ಗೊಂದಲ, ಆತಂಕಗಳಿಂದ ಹೊರಬನ್ನಿ. ಉತ್ತಮ ಕರಿಯರ್ ಪ್ಲಾನಿಂಗ್ ಮಾಡಿ. ಎಸ್‍ಎಸ್‍ಎಲ್‍ಸಿ ಫೇಲಾದವರೂ ಕಲಿಯಬಹುದಾದ ಅನೇಕ ಕೋರ್ಸ್‍ಗಳಿವೆ. ಅವುಗಳ ಪೈಕಿ ಯಾವುದಾದರೂ ಕೋರ್ಸ್ ನ್ನು ನಿಮ್ಮ ಕರಿಯರ್ ಪ್ಲಾನಿಂಗ್‍ನಂತೆ ಆಯ್ಕೆ ಮಾಡಿ ಕಲಿಯಿರಿ. ಎಸ್‍ಎಸ್‍ಎಲ್‍ಸಿ ಪೂರ್ತಿಗೊಳಿಸಲೇಬೇಕು ಎಂಬ ಹಠವಿದ್ದರೆ ಬರುವ ವರ್ಷ ಪರೀಕ್ಷೆ ಬರೆದು ಪಾಸಾಗಿ.

ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಪಾಲಕರು, ಕುಟುಂಬದ ಹಿರಿಯರು ಅವರಲ್ಲಿ ಧೈರ್ಯ ತುಂಬಿರಿ. ಮನೆಯಲ್ಲೊಂದು ಬೈಟಕ್ ನಡೆಸಿರಿ. ಫಲಿತಾಂಶ ಬಂದಿದೆ ಮುಂದೇನು? ಎಂಬುದು ಚರ್ಚೆಯ ಕೇಂದ್ರ ವಿಷಯವಾಗಿರಲಿ. ಕಲಿಯುವುದು ಯಾಕೆ?, ಎಷ್ಟು ವರ್ಷ ಕಲಿಯಬೇಕು? ಅದಕ್ಕೆಷ್ಟು ದುಡ್ಡು ಬೇಕು? ಅದನ್ನ ಎಲ್ಲಿಂದ ಹೊಂದಿಸ್ತೀವಿ? ವೃತ್ತಿಯನ್ನು ಕಂಡುಕೊಳ್ಳುವುದು ಯಾವಾಗ ಮತ್ತು ಹೇಗೆ? ಎಂಬಿತ್ಯಾದಿ ವಿಷಯಗಳ ಸುತ್ತ ಚರ್ಚೆ ನಡೆದು, ತೀರ್ಮಾನ ಕೈಗೊಳ್ಳಲು ಪ್ರಯತ್ನಿಸಿರಿ. ಸ್ವಯಂ ಅವಲೋಕನ (ನಾನು ಮತ್ತು ನನ್ನ ಕನಸು), ಸಾಮಥ್ರ್ಯ ಮತ್ತು ಆಸಕ್ತಿ, ವೃತ್ತಿ ಪ್ರಪಂಚದ ತಿಳುವಳಿಕೆ, ಕ್ಷೇತ್ರ ನಿರ್ಧಾರ ಮತ್ತು ವೃತ್ತಿಯ ಆಯ್ಕೆ ಹಾಗೂ ಕೋರ್ಸ್ ಮತ್ತು ವಿದ್ಯಾಸಂಸ್ಥೆಯ ಆಯ್ಕೆ. ಇವು ಕರಿಯರ್ ಪ್ಲಾನಿಂಗ್‍ನ ಐದು ಹಂತಗಳು. ಎಲ್ಲ ರೀತಿಯ ಅಂಕ ಪಡೆದವರೂ ಈ ವಿಧಾನಗಳ ಮೂಲಕ ಅತ್ತ್ಯುತ್ತಮ ಕರಿಯರ್ ರೂಪಿಸಲು ಪ್ರಯತ್ನಿಸಬಹುದು. ಸಾಧ್ಯವಾದರೆ ತಮ್ಮ ಪರಿಸರದಲ್ಲಿರುವ ಕರಿಯರ್ ಕೌನ್ಸಿಲರ್/ಗೈಡ್‍ಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಿರಿ.

ಎಸ್‍ಎಸ್‍ಎಲ್‍ಸಿ ಬಳಿಕ ಪಿಯುಸಿ ಕಲಿಯುವುದಾದಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಿದ್ದು ಅವುಗಳಲ್ಲೂ ಅನೇಕ ಕಾಂಬಿನೇಶನ್/ಉಪ ವಿಭಾಗಳಿವೆ. ಕರಿಯರ್ ಪ್ಲಾನಿಂಗ್‍ನಂತೆ ಮುಂದಿನ ಕಲಿಕೆಗೆ ಪೂರಕವಾದ ವಿಭಾಗ/ಉಪ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಿ. ಅವಾಸ್ತವ ಭ್ರಮೆ, ಆಕರ್ಷಣೆ, ಒತ್ತಡಗಳಿಗೆ ಬಲಿಯಾಗಬೇಡಿರಿ. ಪಿಯುಸಿಯ ಜೊತೆಗೆ ಕಲಿಯಬಹುದಾದ ಕೆಲವು ವೃತ್ತಿಪರ ಕೋರ್ಸ್‍ಗಳಿವೆ. ಎನ್‍ಐಒಎಸ್‍ನಲ್ಲೂ ಓದುಬರಹ ಬಲ್ಲವರು, 5ನೇ ತರಗತಿ, 8ನೇ ತರಗತಿ ಕಲಿತವರು ಮತ್ತು ಎಸ್‍ಎಸ್‍ಎಲ್‍ಸಿಯಲ್ಲಿ ಪಾಸ್/ಫೇಲ್ ಆದವರು ಕಲಿಯಬಹುದಾದ ಅನೇಕ ವೃತ್ತಿಪರ ಕೋರ್ಸ್ ಗಳಿವೆ.

ಪಿಯುಸಿ ಹೊರತುಪಡಿಸಿದರೆ ಐಟಿಐ, ಡಿಪ್ಲೊಮಾ ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಡಿಪ್ಲೊಮಾ, ಟೂಲ್ ಆಂಡ್ ಡೈ ಮೇಕಿಂಗ್, ಇಂಟೀರಿಯರ್ ಡಿಸೈನಿಂಗ್, ಫ್ಯಾಶನ್ ಡಿಸೈನಿಂಗ್, ಫೈರ್ ಟೆಕ್ನಾಲಜಿ, ಪ್ಲಾಸ್ಟಿಕ್ ಟೆಕ್ನಾಲಜಿ, ಹೋಟೆಲ್ ಮ್ಯಾನೇಜ್‍ಮೆಂಟ್, ಫೂಟ್‍ವೇರ್/ಲೆದರ್ ಟೆಕ್ನಾಲಜಿ, ಫಾರ್ಮಾಸಿ ಮತ್ತಿತರ ವಿಭಾಗಗಳಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯ ಕೋರ್ಸ್‍ಗಳಿವೆ. ಬಾಲಕಿಯರ ಐಟಿಐ ಮತ್ತು ಸರಕಾರಿ ಪಾಲಿಟೆಕ್ನಿಕ್‍ನಲ್ಲಿರುವ ಸಿಸಿಟಿಇಕೆ (ಸೆಂಟರ್ ಫಾರ್ ಕಂಟಿನ್ಯೂವಿಂಗ್ ಟೆಕ್ನಿಕಲ್ ಎಜ್ಯುಕೇಶನ್ ಕರ್ನಾಟಕ) ವಿಭಾಗದಲ್ಲಿ ಎಸ್‍ಎಸ್‍ಎಲ್‍ಸಿ ಪಾಸಾದ/ಫೇಲಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಲಿಯಬಹುದಾದ ಹಲವು ವೃತ್ತಿಪರ ಕೋರ್ಸ್ ಗಳಿವೆ. ಈ ಎಲ್ಲಾ ಕೋರ್ಸ್ ಗಳು ಮಕ್ಕಳ ಕರಿಯರ್ ಪ್ಲಾನಿಂಗ್‍ಗೆ, ಮುಂದಿನ ಕಲಿಕೆಗೆ ಸಹಕಾರಿಯಾಗಲಿ ಎಂಬ ಆಶಯ ನನ್ನದು. ಮತ್ತೊಮ್ಮೆ ಶುಭಾಶಯಗಳು. ಎಲ್ಲರಿಗೂ ಒಳಿತಾಗಲಿ.

ಕೃಪೆ: ಪ್ರಜಾವಾಣಿ (ಸಹಪಾಠಿ)

*ಉಮರ್ ಯು. ಹೆಚ್.*
ಸ್ಥಾಪಕಾಧ್ಯಕ್ಷ, ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್, ಮಂಗಳೂರು
ಮೊ. ಸಂ. 9845054191

Leave a Reply