ಬೆಳಗ್ಗೆ ಮನೆಮನೆಗೆ ದಿನಪತ್ರಿಕೆಗಳನ್ನು ವಿತರಿಸುತ್ತ, ಅಂಗಡಿಗಳಲ್ಲಿ ಕೆಲಸ ಮಾಡುತ್ತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಿಎಂಟಿಸಿ ಬಸ್ ಬಲಿ ಪಡೆದಿದೆ.

ಮಂಗಳವಾರ ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ಯುವಕರಿಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಗುದ್ದಿ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೋರ್ವ ಗಾಯಗೊಂಡಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಸ್ತೂರಬಾ ನಗರದ ಯದುಕುಮಾರ್ (18), ಚಂದ್ರಕಾಂತ (17)ಎಂದು ಮೃತಪಟ್ಟ ವಿದ್ಯಾರ್ಥಿಗಳು, ಅಪಘಾತದಲ್ಲಿ ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿ ಬಾಪೂಜಿ ನಗರದ ರಾಜಶೇಖರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಕಾಷಾಂತದಿಂದ ಪಾರಾಗಿದ್ದಾನೆ.

ಮೈಸೂರು ರಸ್ತೆಯ ಕೆಬಿ ನಗರದ ಪಾಲಿಕೆಯ ಕಸ್ತೂರಬಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚಂದ್ರಕಾಂತ್, ದ್ವಿತೀಯ ಪಿಯುಸಿ ಓದುತ್ತಿದ್ದ ಯದುಕುಮಾರ್ ತಮ್ಮ ಸ್ನೇಹಿತ ರಾಜಶೇಖರ್ ಜತೆ ಕಾಲೇಜಿಗೆ ಹೋಗಲು ಬೆಳಿಗ್ಗೆ 8.15ರ ವೇಳೆ ಮೈಸೂರು ರಸ್ತೆಯ ಕಸ್ತೂರ ಬಾ ಕಾಲೇಜಿನ ಕ್ರಿಶ್ಚಿಯನ್ ಸ್ಮಶಾನದ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ದೊಡ್ಡ ಬಸ್ತಿಯಿಂದ ಸಿಟಿ ಮಾರ್ಕೆಟ್ ಕಡೆಗೆ ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್, ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ರಸ್ತೆಬದಿ ಕಾಂಪೌಂಡ್‌ಗೆ ಗುದ್ದಿದೆ.

ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಸಂಚಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ. ಚಂದ್ರಕಾಂತ್ ಮೂಲತಃ ಕಲಬುರಗಿ ಮೂಲದವನಾಗಿದ್ದು ತಂದೆ ನಿಧನರಾಗಿದ್ದು, ತಾಯಿ ಮನೆ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರು, ಬೆಳಗ್ಗೆ ಚಂದ್ರಕಾಂತ್‌ ಕಾಲೇಜಿಗೆ ಹೋಗಿ ಸಂಜೆ ಗೋಪಾಲನ್ ಮಾಲ್ ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ. ಯದುಕುಮಾರ್ ದಿನನಿತ್ಯ ಬೆಳಗ್ಗೆ ಪೇಪರ್ ಹಾಕಿ ನಂತರ ಕಾಲೇಜಿಗೆ ಹೋಗುತ್ತಿದ್ದ ಯದುಕುಮಾರ ಬೆಳಗ್ಗೆ ಕೂಡ ಪೇಪರ್ ಹಾಕಿ ಕಾಲೇಜಿಗೆ ಹೋಗುತ್ತಿದ್ದಾಗ ಬಸ್ ಬಲಿ ಪಡೆದುಕೊಂಡಿದೆ.

ಸಂಬಂಧಿಕರ ರೋಧನ ಮುಗಿಲುಮುಟ್ಟಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಮೃತರ ನೇತ್ರದಾನಕ್ಕೆ ಮುಂದಾಗಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ

Leave a Reply