ಮೊನ್ನೆ ಝೈಬುನ್ನೀಸಾ ಎಂಬ ಹುಡುಗಿ ಮೃತಪಟ್ಟ ಸುದ್ದಿಯ ಗಾಯ ಮಾಗುವ ಮುನ್ನವೇ ,ಮತ್ತೊಬ್ಬ ಹೇಡಿ ಮತ್ತು ಪರಮಹೇಡಿ, ಪ್ರೀತಿ ಒಪ್ಪದ ನೆಪವೊಡ್ಡಿ ಇನ್ನೂ ಕಾಲೇಜು ಕಲಿಯುವ ಹೆಣ್ಣು ಮಗುವೊಂದರ ಕತ್ತು ಕುಯ್ದಿದ್ದ. ಆ ಮಗುವಿನ ಯುನಿಫಾರ್ಮ್ ಮೇಲೆ ಚೆಲ್ಲಿದ ರಕ್ತ ,ರಕ್ತನಾಳಗಳು ತುಂಡರಿಸುವಾಗ ಒಸರಿದ್ದಿರಬೇಕು, ಮನುಷ್ಯತ್ವದ ಪ್ರಜ್ಞೆ ನಾಚಿಕೆಪಟ್ಟು ಬ್ಲಾಂಕ್ ಆಗಿಬಿಟ್ಟಿದ್ದೆ ನಾನು. ನನಗೆ ರಕ್ತನಾಳಗಳು ಚಿಲ್ ಎನ್ನುವಾಗ ಆ ಮಗು ಯಾವ ಮೊದಲ ಸಂಬಳದ ಆಸೆಯನ್ನು ನೆನೆಸಿಕೊಂಡೊತ್ತೋ ಎಂಬುದನ್ನು ಊಹಿಸಿ, ಹೆಣ್ಣು ಮಕ್ಕಳ ಕನಸುಗಳನ್ನು ರಕ್ಷಿಸಲಾಗದ ಈ ಧೂರ್ತ ಸಮಾಜಕ್ಕೆ ನಾನೂ ಒಂದು ಭಾಗವಾಗಿರುವುದಕ್ಕೆ ಮತ್ತು ಕತ್ತು ಕುಯ್ಯುವಾಗ ಇಸ್ಲಾಮಿನ ಆದರ್ಶಗಳನ್ನು ಒಪ್ಪಿಕೊಂಡ ಹೆಸರು ಹಾಕಿಕೊಂಡ ಆ ವಂಚಕನ ದೌರ್ಬಾಗ್ಯ ನೆನೆದು ಅತೀವ ಹಿಂಸೆಯೆನ್ನಿಸಿತ್ತು. ಎಲ್ಲಿಯವರೆಗೆ ಅಂದರೆ ಆ ದುರುಳನ ಹೆಸರೂ ಗೊತ್ತಿಲ್ಲ ನನಗೆ.

ಆದರೆ, ಕಾವ್ಯಾ, ದಾನಮ್ಮ, ಝೈಬುನ್ನೀಸಾ, ಮತ್ತೆ ಮೊನ್ನೆ ಆ ನೀಚನ ಕೈಗೆ ಸಿಕ್ಕ ಆ ಹೆಣ್ಣು ಮಗು ಇವೆಲ್ಲಾ ಒಂದರ ಹಿಂದೊಂದರಂತೆ ತೀವೃವಾಗಿ ನೋಯಿಸಿದ ನನ್ನ ಕದಡಿದ ಮನಸ್ಸಿಗೆ ಒಂದಿಷ್ಟು ಸಮಾಧಾನ ಕೊಡುವುದು ನಾನು ತುಂಬಾ ಅಭಿಮಾನದಿಂದ ನೋಡುವ ಸೋಷಿಯಲ್ ಮಿಡೀಯಾದ ಸಣ್ಣ ಸಣ್ಣ ವಯಸ್ಸಿನ ಆದರೂ ಸಮಾಜವೆಂದರೆ ತುಡಿದು ಬೀಳುವ ಹುಡುಗರು. ಮಾರಿಕೊಂಡ ಅಸಹಾಯಕ ಮಿಡೀಯಾಗಳು ಮುಕ್ಕಿ ತಿನ್ನುವಾಗ ಅವರು ಮಾತ್ರ ಸದಾ ಸತ್ಯದ ಎಲ್ಲೆಗಳನ್ನು ಮುಟ್ಟುವಂತೆ ಸಮಾಜದ ಆಗುಹೋಗುಗಳಿಗೆ ಪ್ರಾಮಾಣಿಕ ಹೃದಯದಿಂದ ಸಶಕ್ತವಾಗಿ ಸ್ಪಂದಿಸುತ್ತಾರೆ. ಹಾಗೆಯೇ ಮೊನ್ನೆ ಕೆಲವು ಹುಡುಗರು ಕೊಂದವನು ಮುಸ್ಲಿಂ ನಾಮಧಾರಿಯಾದರೂ , ಆತನನ್ನು ತಲೆ ಕಡಿಯಬೇಕು, ಶರಿಯಾ ಕಾನೂನಿನಂತೆ ಅತ್ಯಾಚಾರಕ್ಕೆ ಶಿಕ್ಷೆ ಕೊಡಬೇಕು ಭಾರತದಲ್ಲೂ ಅಂತ ನಿರ್ಭೀತವಾಗಿ ಬರೆದಿದ್ದರು. ಅವರ ಪ್ರಾಮಾಣಿಕತೆಗಳಿಗೆ ನೊಂದವರ ಬಡವರ ದುವಾಗಳಿರಲಿ.

ಆದರೆ, ನನಗೆ ಶರಿಯಾ ಕಾನೂನು ಜಾರಿಗೆ ತರಬೇಕು ಎಂದ ಆ ಹುಡುಗರಿಗೆಲ್ಲ ಕರೆದು ಹೇಳಬೇಕು ಅನ್ನಿಸಿತ್ತು. ನೋಡಿ ಮೊದಲೇ ಈ ಸಮಾಜವನ್ನು ಇದ್ದ ಬದ್ದ ಅರಬ್ಬೀ ಶಬ್ಧಕ್ಕೆಲ್ಲ ಇಂಗ್ಲಿಷ್ ಶಬ್ದ ಸೇರಿಸಿ ಲವ್ ಜಿಹಾದ್ ಲ್ಯಾಂಡ್ ಜಿಹಾದ್ ಅಂತೆಲ್ಲ ಅಪನಂಬಿಕೆ ಅನುಮಾನಗಳಲ್ಲಿ ತುಂಡರಿಸಿದ್ದಾರೆ. ನೀವು ಅಂತಹದ್ದರಲ್ಲಿ ನಿಮ್ಮ ಆಕ್ರೋಶಗಳನ್ನು ಹೊರಹಾಕುವ ಭರದಲ್ಲಿ ಶರಿಯಾ ಕಾನೂನು ಅಂತ ಬರೆದು ಸುಮ್ಮನೇ ಯಾಕೆ ಇಲ್ಲದ ಉಸಾಬರಿ ಮೈಗೆಳೆದುಕೊಳ್ಳುತ್ತೀರಿ ಅಂತ ಬುದ್ಧಿ ಹೇಳಬೇಕು ಅನ್ನಿಸಿತ್ತು.

ಆದರೆ ಭಾರತದ ಪ್ರಜಾಪ್ರಭುತ್ವ ಮತ್ತು ಇಸ್ಲಾಮಿನ ಪ್ರಜಾಪ್ರಭುತ್ವದಲ್ಲಿ (ಈಗಿನ ಅರಬ್ ದೊರೆಗಳ ಇಸ್ಲಾಂ ಅಲ್ಲ, ಅದು ಖಲೀಫಾ ಉಮರ್ ರಂತಹ ಪ್ರಜಾಪ್ರಭುತ್ವ) ಸದಾ ಸಾಮ್ಯತೆಗಳನ್ನು ಹುಡುಕುವ , ಪ್ರಾಕ್ಟಿಕಲಿ ಇಸ್ಲಾಂ ಯಾವ ತರ ಇಲ್ಲಿನ ಸಂಸ್ಕ್ರತಿಯೊಂದಿಗೆ ಸಿಂಕ್ರನೈಸ್ ಆಗಬೇಕು ಎಂಬುದರ ಬಗ್ಗೆ ಬೇರೆ ಬೇರೆ ದೃಷ್ಟಿಕೋನದಿಂದ ನನ್ನಷ್ಟಕ್ಕೆ ಅವಲೋಕಿಸುವ ನಾನು, ಆ ಹುಡುಗರ ಅತ್ಯಾಚಾರಿಗೆ ಗಲ್ಲು ಒದಗಿಸುವ ಬೇಡಿಕೆ ಮತ್ತು ಅತ್ಯಾಚಾರಿಗಳ ಕುರಿತು ಭಾರತೀಯ ಮಹಿಳೆಯರ ಒಕ್ಕೊರಲಿನ ಒತ್ತಾಯಗಳ ನಡುವೆ ಕಂಡ ಸಾಮ್ಯತೆಗಳನ್ನು ತುಂಬಾ ಸೂಕ್ಷ್ಮವಾಗಿ ಗೃಹಿಸಬೇಕೆಂದುಕೊಂಡೇ ಅಂತಹ ಪೋಸ್ಟ್ ಗಳ ಕಮೆಂಟ್ ಗಳನ್ನು ಸ್ಕ್ರಾಲ್ ಮಾಡುತ್ತಾ ಹೋಗಿದ್ದೆ. ನನಗೆ ಸಿಕ್ಕ ಉತ್ತರಗಳನ್ನು ನೀವೇ ಗೃಹಿಸಿಕೊಂಡಿರಬಹುದು.

ಆದರೂ ಅತ್ಯಾಚಾರಿಯೊಂದಿಗಿನ ಶರಿಯತ್ ನ ಮುಲಾಜಿಲ್ಲದ ನಡೆ ಭಾರತದ ಮಣ್ಣಿಗೆ ಪ್ರಾಕ್ಟಿಕಲ್ ಆಗಿ ಸರಿಹೊಂದುವುದಿಲ್ಲ ಎಂಬುವುದನ್ನು ಅತ್ಯಾಚಾರಿಯ ವಿರುದ್ಧ ಪ್ರಾಮಾಣಿಕ ಆಕ್ರೋಶವನ್ನು ಹೊರಹಾಕಿ ಸಮಾಜದ ನೈತಿಕ ಪ್ರಜ್ಞೆಯನ್ನು ಹಿಡಿದೆತ್ತಿದ ಆ ಎಲ್ಲಾ ಹುಡುಗರೊಂದಿಗೆ ನನಗೆ ಹೇಳಬೇಕಿದೆ. ಅದು ಇಸ್ಲಾಂ ನ ಕಾನೂನಾತ್ಮಕ ಸಂಬಂಧಿಗಳಲ್ಲದ ಗಂಡು ಮತ್ತು ಹೆಣ್ಣು ಬೆರೆಯದಿರುವ, ಭಾರತದ ಅಥವಾ ಮುಂದುವರಿದ ರಾಷ್ಟ್ರಗಳ ಬಹುತೇಕರು ಒಪ್ಪಲು ಸಾಧ್ಯವೇ ಇಲ್ಲದ ಒಂದು ಸಮಾಜವನ್ನು ಮೊದಲು ತಾಕೀತು ಮಾಡಿ , ಅಂತಹ ಸಮಾಜದಲ್ಲೂ ಹೆಣ್ಣನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಬಳಸುವ ಧೈರ್ಯ ತೋರಿಸುವವರನ್ನಷ್ಟೇ ನಿರ್ದಯವಾಗಿ ನೇಣುಗಂಬಕ್ಕೇರಿಸುತ್ತದೆ. ಅದು ಭಾರತಕ್ಕೆ ಅಳವಡಿಸಲ್ಪಟ್ಟರೆ ಶರಿಯತ್ ಬೇಕು ಎಂದವರಿಗೂ ನೂರು ಚಡಿಯೇಟು ಬಿಗಿಯುವ ಸನ್ನಿವೇಶ ನಿರ್ಮಾಣವಾಗಲೂಬಹುದು. ಅಥವಾ ಈ ಬರೆಯುವ ನಾನೂ ಹೆಣ್ಣನ್ನು ಕಣ್ಣಿನಲ್ಲೂ ಅತ್ಯಾಚಾರ ಮಾಡದ ಪರಮ ಸಾಚಾ ಅಂದರೆ ಕಾಪಟ್ಯದ ತುತ್ತ ತುದಿಯಾದೀತಷ್ಟೇ. ಬಟ್ ಭಾರತಕ್ಕೆ ಭಾರತವನ್ನೇ ಬಡಿದೆಬ್ಬಿಸಿದ ನಿರ್ಭಯಾಳ ತ್ಯಾಗದ ನಂತರವೂ ನಿದ್ರೆಹೋಗಿರುವ ಭಾರತಕ್ಕೊಂದು ಸಂಘಟಿತ ಮತ್ತು ಸಶಕ್ತ ಅತ್ಯಾಚಾರ ತಡೆ ಕಾನೂನು ಜರೂರು ಬೇಕೇ ಬೇಕಿದೆ.

ಕಾನೂನು ಅಥವಾ ಕಟ್ಟಳೆ ಆ ಸಮಾಜದ ಜನರ ಜೀವನ ಮೌಲ್ಯಗಳ ಪ್ರತಿಬಿಂಬವಷ್ಟೇ. ಎಲ್ಲಾ ಧರ್ಮಗಳ ಆಗರವಾಗಿರುವ ಭಾರತದಲ್ಲಿ ಮುಸ್ಲಿಮನು ಹೇಳಿದ ಎಂದ ಕಾರಣಕ್ಕೆ ಶರಿಯಾ ಶಿಕ್ಷೆಯನ್ನು ಕೋಮುವಾದ ಕಣ್ಣಿನಿಂದ ನೋಡುವುದೋ, ಉದಾರವಾದಿ ಹೇಳಿದ ಅಂತ ಹೆಣ್ಣು ಮಕ್ಕಳ ಮೇಲಿನ ಸಾಫ್ಟ್ ಫೇಸ್ ಡ್ ಅತ್ಯಾಚಾರಕ್ಕೆ ಆಧುನೀಕತೆಯ ಮುಖವಾಡ ಧರಿಸಿ ಬೆಂಬಲಕ್ಕೆ ನಿಲ್ಲುವುದೋ, ಇಲ್ಲಾ ಹಿಂದೂ ಹೇಳಿದ ಅಂತ , ಓಹ್ ಮನುವಿನ ಪುರಾತನ ಕಾಲದ ಅಂಧ ಕಾನೂನು ಅಂತ ತಾತ್ಸಾರ ಹೀಯಾಳಿಕೆಯ ಮಾತನಾಡುವುದೋ ಮಾಡುತ್ತಾ ಸಂಘಟಿತಾಗದೇ ಕೂತರೆ ಅತ್ಯಾಚಾರವೆಂಬುದು ಕೊನೆಮೊದಲಿಲ್ಲದ ನಾಚಿಕೆಯಾಗಿ ಈ ಸಮಾಜದ ಮೇಲೆ ಸದಾ ಉಳಿಯಲಿದೆ. ಅವನವನು ಅವನವನ ಧರ್ಮ ಸಿದ್ಧಾಂತದ ಧೃಡ ನಂಬಿಕೆಗಳ ಆಧಾರದಲ್ಲಿ ಕೊಡುವ ಸಲಹೆ ಸೂಚನೆಗಳ ಸಂಪೂರ್ಣ ಮೊತ್ತ ಮತ್ತು ಅಂಬೇಡ್ಕರರ ಸಂವಿಧಾನದ ಕಠಿಣ ಕಲಮುಗಳನ್ನೆಲ್ಲ ಮತ್ತಷ್ಟು ಹರಿತಗೊಳಿಸಿ, ಹೆಣ್ಣು ಮಕ್ಕಳ ಅಪ್ಪನಾಗಬಯಸುವ ನವವಿವಾಹಿತರೂ, ಮೊಮ್ಮಕ್ಕಳ ಮೈನೆರೆಯುವಿಕೆ ಎದುರು ನೋಡುವ ಮುದುಕಿಯೂ ಎಲ್ಲರೂ ಒಳಗೊಂಡು, ಭಾರತದಾದ್ಯಂತ ಅತ್ಯಾಚಾರಿಗಳ ವಿರುದ್ಧ ಹರಿತ ಕತ್ತಿಯೊಂದನ್ನು ಸಿಧ್ಧಪಡಿಸಲೇಬೇಕಿದೆ. ಅದು ಬಿಟ್ಟು ಸನಾತನ ಪುರಾತನ ನವೀನ ಅನ್ನುವ ಚರ್ಚೆಗಳೇ ಮೇಲು ಎಂದಾದರೆ, ಮನುವಿನ ಕಾಲದ ಹೆಣ್ಣಿನ ಅದೇ ನೋವು ದಾನಮ್ಮಳ ಉಸಿರು ಕೊನೆಯಾಗುವಾಗ ಇದ್ದಿದ್ದು, ಮಹಮ್ಮದರ ,ಈಸಾಯಿಯ ಕಾಲದ ಹೆಣ್ಣಿನ ಅದೇ ಆರ್ತನಾದ ಮೊನ್ನೆ ಕತ್ತು ಕುಯ್ಯಿಸಿಕೊಂಡ ಹೆಣ್ಣಿನದ್ದು ಎಂಬ ಸತ್ಯದಲ್ಲಿ ಸಂಶಯಿಸಿ ಯಾರು ಹೆತ್ತ ಹೆಣ್ಣುಮಕ್ಕಳನ್ನೂ ಅವಮಾನಿಸಬೇಡಿ ಅಷ್ಟೇ.

ಲೇಖಕರು : ಜಸ್ಟ್ ಶಾಫಿ

Leave a Reply