ಚೆನ್ನೈ: ಶಾಲೆಯಿಂದ ವರ್ಗಾವಣೆಯಾಗಿ ಶಾಲೆಗೆ ವಿದಾಯ ಹೇಳುತ್ತಿದ್ದ ಶಿಕ್ಷಕನನ್ನು ವಿದ್ಯಾರ್ಥಿಗಳೆಲ್ಲರೂ ಸುತ್ತುವರಿದು “ಸರ್, ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಣ್ಣೀರಿಡುವ ವಿಡಿಯೋ ಸುದ್ದಿ ವೈರಲ್ ಆಗಿದೆ.

ಇಂಗ್ಲಿಷ್ ಶಿಕ್ಷಕರನ್ನು ಶಿಕ್ಷಣ ಇಲಾಖೆಯು ವರ್ಗಾಯಿಸಿದ ನಂತರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಜಿ. ಭಗವಾನ್ ಎಂಬ 28ರ ಹರೆಯದ ಇಂಗ್ಲಿಷ್ ಅಧ್ಯಾಪಕರನ್ನು ಬಿಟ್ಟು ಕೊಡಲು ವಿದ್ಯಾರ್ಥಿಗಳು ತಯಾರಿರಲಿಲ್ಲ. ಕಣ್ಣೀರಿಡುವ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಭಾವನಾತ್ಮಕ ಸಂಬಂಧವನ್ನು ಇದು ಸೂಚಿಸುತ್ತದೆ.

 

ಜಿ. ಭಗವಾನ್ ಅವರಿಗೆ ತಿರುತ್ತಾಣಿ ಬಳಿಯ ಆರುಂಗುಲಮ್ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದೆ.
ಆದರೆ ಸದ್ಯ ಈ ಆದೇಶವನ್ನು 10 ದಿನದಳ ಕಾಲ ತಡೆಹಿಡಿಯಲಾಗಿದೆ.

2014ರಲ್ಲಿ ನಾನು ಈ ಹೈಸ್ಕೂಲ್ಗೆ ಶಿಕ್ಷಕನಾಗಿ ಬಂದಿದ್ದೆ. ಇಲ್ಲಿನ ವಿದ್ಯಾರ್ಥಿ-ಶಿಕ್ಷಕರ ಅನುಪಾತ ನೋಡಿದರೆ ನಾನು ಹೆಚ್ಚುವರಿ ಅಧ್ಯಾಪಕನಾಗಿದ್ದೆ. ಹಾಗಾಗಿ ಶಿಕ್ಷಕರ ಕೊರತೆ ಇರುವ ಶಾಲೆಗೆ ನನ್ನನ್ನು ವರ್ಗ ಮಾಡಲು ತೀರ್ಮಾನಿಸಿದ್ದು, ತಿರುತ್ತಾಣಿ ಶಾಲೆಗೆ ವರ್ಗಾವಣೆ ಆದೇಶ ಸಿಕ್ಕಿತ್ತು ಎಂದು ಶಿಕ್ಷಕ ಭಗವಾನ್ ತಿಳಿಸುತ್ತಾರೆ.

ಭಗವಾನ್ ಅವರು 6ನೇ ತರಗತಿಯಿಂದ 10ನೇ ತರಗತಿವರೆಗೆ ಇಂಗ್ಲಿಷ್ ಬೋಧಿಸುತ್ತಿದ್ದರು. ಜೂನ್ 12 ರಿಂದ 21ರವರೆಗೆ ನಡೆದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‍ಗೆ ಭಗವಾನ್ ಹಾಜರಾಗಿದ್ದರು. ಅರುಂಗುಲಮ್ ಎಂಬ ಊರಿಗೆ ಆದ್ಯತೆ ನೀಡಿದ್ದರು.

“ನಮ್ಮಲ್ಲಿ ಹಲವರಿಗೆ ಇಂಗ್ಲಿಷ್ ಕಷ್ಟವಾಗುತ್ತಿತ್ತು. ಆದರೆ ಅವರು ನಮಗೆ ಪ್ರೋತ್ಸಾಹ ನೀಡಿ ಧೈರ್ಯ ತುಂಬುತ್ತಿದ್ದರು. ದಿನದ ಯಾವುದೇ ಸಮಯದಲ್ಲಿ ಯಾವುದೇ ಸಂದೇಹ ಕೇಳಿದರೆ ತಕ್ಷಣ ಉತ್ತರ ಕೊಡುತ್ತಿದ್ದರು. ಎಲ್ಲಾ ಸಮಯದಲ್ಲೂ ಲಭ್ಯವಿರುತ್ತಿದ್ದರು. ಸಂಜೆ ವಿಶೇಷ ಇಂಗ್ಲಿಷ್ ತರಗತಿಗಳನ್ನು ಮಾಡುತ್ತಿದ್ದರು. ಅವರು ಓರ್ವ ಶಿಕ್ಷಕರಿಗಿಂತ ಓರ್ವ ಅತ್ಯುತ್ತಮ ಸ್ನೇಹಿತನಂತೆ ವ್ಯವಹರಿಸುತ್ತಿದ್ದರು. ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಇಲ್ಲಿಯವರೆಗೆ ಹಲವಾರು ಅಧ್ಯಾಪಕರು ಇಲ್ಲಿ ಬಂದು ವರ್ಗವಾಗಿ ಹೋಗಿದ್ದಾರೆ. ಆದರೆ ಅವರು ಹೋಗುವಾಗ ನಮಗೆ ಬೇಸರವಾಗಿರಲಿಲ್ಲ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳಿದ್ದಾರೆ.

Leave a Reply