ನಾನು ಆಯೋಗದಲ್ಲಿದ್ದಾಗಿಂದಲೂ ನನ್ನೊಂದಿಗೆ ಸಂಪರ್ಕದಲ್ಲಿರುವ ಸೌಮ್ಯ ಎಂಬ ಈಕೆ ತನ್ನನ್ನು ಮಂಗಳಮುಖಿ, ಟ್ರಾನ್ಸ್ ಜೆಂಡರ್ ಎಂತಲೇ ಗುರುತಿಸಿಕೊಳ್ಳುತ್ತಾಳೆ. “ಪಯಣ” ಎಂಬ ಟ್ರಾನ್ಸಜೆಂಡರ್ ಗಳ ಸಂಘಟನೆ ಕಟ್ಟಿಕೊಂಡು ತಮ್ಮ ಹಕ್ಕುಗಳಿಗಾಗಿ ಅನೇಕ ವರ್ಷಗಳಿಂದ ಹೋರಾಡುತಿದ್ದಾಳೆ.

ಇಂದು ನನ್ನ ಕಛೇರಿಗೆ ಬಂದು ಆ ಸಮುದಾಯ ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಮಾತಾನಾಡುತ್ತಾ “ನಮಗೆ ನೀವು ಒಂದು ಐಡೆಂಟಿಟಿ ಕೊಟ್ಟಿರಿ ಸಾರ್ ಆದರೆ ಯಾವ ಸರ್ಕಾರಗಳೂ ನಿಮ್ಮ ವರದಿಯನ್ನು ತಿರುವಿ ಕೂಡ ಹಾಕಲಿಲ್ಲ..! ಈಗಿನ ಸರ್ಕಾರದಿಂದ ನಮಗೆ ಮೂರು ಕಾಸಿನ ಸವಲತ್ತು ಕೂಡ ಸಿಗಲಿಲ್ಲ..? ಕಾರ್ಪೋರೇಷನ್ ನಲ್ಲಿ ನಮಗಾಗಿ ನಾಲ್ಕು ಕೋಟಿ ಇಟ್ಟಿದ್ದಾರೆಂದರು ಆದರೆ ನಮಗಾಗಿ ನಾಲ್ಕು ರೂಪಾಯಿ ಕೂಡ ವಿನಿಯೋಗಿಸಲಿಲ್ಲ..! ಈಗ ಚುನಾವಣೆ ಬಂದಿದೆ ನಾವೇನು ಮಾಡಬೇಕು ಸರ್..?” ಎಂದಳು.

ಟ್ರಾನ್ಸ್ ಜೆಂಡರ್, ಮಂಗಳಮುಖಿ ಎಂದು ಕರೆಯಲಾಗುವ ಈ ಸಮುದಾಯವನ್ನು ಪ್ರತಿನಿಧಿಸುವವರು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಯಾರೂ ಇಲ್ಲ.. ಇನ್ನು ಈ ದುರ್ಬಲ ಸಮುದಾಯ ಚುನಾವಣೆಗೆ ನಿಂತು ಗೆಲ್ಲುವುದು ಸಾದ್ಯವೇ ಇಲ್ಲದ ಮಾತು.. ಅಂಗ್ಲೋ ಇಂಡಿಯನ್ ಸಮುದಾಯದವರನ್ನು ವಿಧಾನ ಪರಿಷದ್ ಗೆ ನಾಮಕರಣ ಮಾಡುವಂತೆ ಈ ಟ್ರಾನ್ಸ್ ಜೆಂಡರ್ ಸಮುದಾಯದವರನ್ನೂ ಮಾಡಬೇಕಿದೆ, ಆದರೆ ಈ ಬಡ, ನತದೃಷ್ಟ ಸಮುದಾಯದ ಪರವಾಗಿ ಲಾಬಿ ಮಾಡವವರ್ಯಾರು..?

ಕಳೆದ ಸಲ ಸೌಮ್ಯಗೆ ಬಿ.ಎಸ್.ಪಿ ಯಿಂದ ಟಿಕೆಟ್ ಕೊಡಿಸಿದ್ದೆ, ಈಕೆ ಪರ ಪ್ರಚಾರವನ್ನೂ ಮಾಡಿದ್ದೆ, ಈಕೆ ಗೆಲ್ಲಲ್ಲ ಎಂಬುದು ಕೂಡ ಗೊತ್ತಿತ್ತು, ಆದರೆ ಇಂತಹ ಸಮುದಾಯವೊಂದು ಬಾಬಾಸಾಹೇಬರು ಅವಕಾಶ ಕಲ್ಪಿಸಿದ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವುದು ನನ್ನ ಉದ್ದೇಶವಾಗಿತ್ತು.

ಈಗ ಎಮ್.ಇ.ಪಿ ಎಂಬ ಹೊಸ ಪಕ್ಷದಿಂದ ಈಕೆಗೆ ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸುತಿದ್ದಾರಂತೆ, ಈ ಬಗ್ಗೆ ನನ್ನ ಅಭಿಪ್ರಾಯ ಕೇಳಲು ಬಂದಿದ್ದಳು. “ಯಾವ ಪಕ್ಷದಿಂದ ನಿಮಗೆ ಅವಕಾಶ ಸಿಕ್ಕರೂ ಸ್ಪರ್ದಿಸಿ.. ಕನಿಷ್ಟ ನಿಮಗೊಂದು ಪೊಲಿಟಿಕಲ್ ಐಡೆಂಟಿಟಿ ಸಿಗುತ್ತೆ..” ಎಂದೆ. ನನ್ನ ಮಾತು ಆಕೆಗೆ ಮನವರಿಕೆಯಾದಂತಿತ್ತು. ನಾನು ಚುನಾವಣಾ ಪ್ರಚಾರಕ್ಕೂ ಬರುತ್ತೇನೆಂದೆ. ಸೌಮ್ಯ ಮತ್ತಾಕೆಯೊಂದಿಗೆ ಬಂದಿದ್ದ ಎಲ್ಲಾ ಟ್ರಾನ್ಸ್‌‌ ಜೆಂಡರ್ ಗಳೂ ಖುಷಿಯಿಂದ ಹೊರಟರು.

ಈ ಸಮುದಾಯದ ಒಬ್ಬ ಪ್ರತಿನಿಧಿ ವಿಧಾನಸೌದ ಮತ್ತು ಪಾರ್ಲಿಮೆಂಟ್ ಮೆಟ್ಟಲು ಹತ್ತಿದಾಗ.. ಇಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಒಂದು ಘನತೆ, ಗೌರವ ಬರುತ್ತೆ ಎಂದು ನಾನು ನಂಬಿದ್ದೇನೆ..
– ಸಿ.ಎಸ್.ದ್ವಾರಕಾನಾಥ್

Leave a Reply