ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ದಟ್ಟ ನಿರ್ಧಾರ ತೆಗೆದುಕೊಂಡು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಉಪಕಾರ ಮಾಡಿದ ಅವರಿಗೆ ಉಪಕಾರ ಮಾಡಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಮಾಜದವರಿಗೆ ತಿಳಿಸಿದರು.

ಇಲ್ಲಿನ ಗೋಕಾ ರಸ್ತೆಯಲ್ಲಿ ನಿರ್ಮಿಸಿರುವ ಬಸವ ಮಂಟಪದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಈ ಐತಿಹಾಸಿಕ ನಿರ್ಣಯವನ್ನು ನೀವು ತೆಗೆದುಕೊಳ್ಳಿ, ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆವು. ಅದರಂತೆ ಅವರು ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿಸುವಂತೆ ಹೇಳಿದ್ದಕ್ಕೆ ಕೆಲವರು ಕೋಪ ಮಾಡಿಕೊಂಡಿದ್ದಾರೆ. ಮುಚ್ಚು ಮರೆ ಏಕೆ? ಬೆಂಬಲಿಸುತ್ತೇನೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಹಿಂದೊಂದು, ಮುಂದೊಂದು ಹೇಳುವುದು ನಮಗೆ ಗೊತ್ತಿಲ್ಲ ಎಂದರು.
ಜಾತಿ ಎಂದರೆ ಕತ್ತಲು, ಧರ್ಮವೆಂದರೆ ಬೆಳಕು ಎನ್ನುವುದನ್ನು ಮರೆಯಬಾರದು ಎಂದರು.

ಲಿಂಗಾಯತ ಜಾತಿಯಲ್ಲ ಅದು ಧರ್ಮ ಎನ್ನುವುದನ್ನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಹಿಂದೂ ಲಿಂಗಾಯತ ಎಂದು ಹೇಳುವುದು ಮಹಾಅಪರಾಧ ಎಂದರು.

ನಮ್ಮ ವ್ಯಾಪಕ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಧಾರ್ಮಿಕ ಅಲ್ಪಸಂಖ್ಯಾತರು ಎನ್ನುವ ಮಾನ್ಯತೆಯನ್ನೂ ಕೊಡಬೇಕು ಎಂದು ಕೋರಲಾಗಿದೆ. 900 ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯ ನಡೆದಿದೆ. ಒಳ ಹಾಗೂ ಹೊರಗಿನ ವಿರೋಧಗಳನ್ನು ಲೆಕ್ಕಿಸದೇ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ಭಿನ್ನಮತೀಯರದ್ದು ಕ್ಷೀಣ ಧ್ವನಿ ಎಂದು ತಿಳಿಸಿದರು.

ವೀರಶೈವವಾದಿಗಳಿಗೂ ನಮಗೂ ಬಹಳ ವ್ಯತ್ಯಾಸಗಳಿವೆ. ಆದರೂ ಬಸವಣ್ಣನೇ ನಮ್ಮ ಧರ್ಮಗುರು ಹಾಗೂ ವಚನ ಸಾಹಿತ್ಯ ನಮ್ಮ ಸಂವಿಧಾನ ಎಂದು ಒಪ್ಪಿಕೊಂಡು ಬರುವವರಿಗೆ ನಮ್ಮ ಸ್ವಾಗತವಿದೆ ಎಂದು ಹೇಳಿದರು.

ಕೆಲ ವಿರಕ್ತರು ಪಂಚ ಪೀಠದವರ ಜೊತೆ ಸೇರಿಕೊಂಡು ಸಮಾಜ ಹಾಗೂ ಗುರುವಿಗೆ ದ್ರೋಹ ಮಾಡುತ್ತಿದ್ದಾರೆ. ವಿರಕ್ತರಾದವರು ಬಸವಣ್ಣನೇ ಗುರು ಎನ್ನುವುದನ್ನು ಒಪ್ಪಬೇಕು ಎಂದು ನುಡಿದರು.

News Courtesy : prajavani

Leave a Reply