“ಅಮ್ಮ ನಮ್ಮನ್ನು ಯಾಕೆ ಎಲ್ಲರು ಒಂದೇ ದೃಷ್ಟಿಯಿಂದ ನೋಡುತ್ತಾರೆ? ನಾವು ಊಟಕ್ಕೆ ಕೈ ಚಾಚಿದರೆ ಯಾಕೆ ಓಡಿಸುತ್ತಾರೆ? ನಾವು ಯಾವಾಗ ಅಮ್ಮ ಆ ತರ ಮನೆಯಲ್ಲಿ ಇರೋದು? ನಮ್ಗೆ ಈ ಮರದ ಅಡಿಯಲ್ಲಿ ತುಂಬಾ ಚಳಿ ಆಗ್ತಿದೆ ನಮಗೂ ಅಂಥ ಮನೆಯನ್ನು ಕಟ್ಟಿಕೊಡು” ಎಂದು ಏನು ಅರಿಯದ ಮೂರು ವರ್ಷದ ಪುಟ್ಟ ಮಗು ತನ್ನ ಭಾಷೆಯಲ್ಲಿ ಕೇಳಿದಾಗ‌ ಅಮ್ಮನಾದರು ಎಲ್ಲಿಂದ ಕೊಡಬೇಕು?

ರಾತ್ರಿ ಇಡೀ ರಸ್ತೆಯ ಬದಿಯಲ್ಲೋ, ಮರದಡಿಯಲ್ಲೋ ವಾಸ ಹೂಡುವ ತಾಯಿ ಜೊತೆ ವಾಸ ಹೂಡುವ ಮಕ್ಕಳಿಗೆ ತಮಗೂ ಎಲ್ಲರಂತೆ ಒಂದು ದಿನವಾದರೂ ಮನೆಯೊಳಗೆ ಹಾಸಿಗೆ ಇಲ್ಲವಾದರೂ ಚಾಪೆ ಮೇಲೆ ಕಲ್ಲು ಮುಳ್ಳುಗಳು ಚುಚ್ಚದೆ ಮಲಗುವ ಆಸೆ ಇಲ್ಲವೆ?

ಎಲ್ಲ ಮಕ್ಕಳು ಅಪ್ಪ ಅಮ್ಮಂದಿರ ಜೊತೆ ಆಟವಾಡುತ್ತಾರೆ ಆದರೆ ನಾವು ಮಾತ್ರ ಅಮ್ಮ ಹೋದ ದಾರಿಯಲ್ಲಿ ನಡೆದುಕೊಂಡು ಹೋಗಬೇಕು. ಹತ್ತಾರು ಮೈಲಿ ನಡೆದು ನೂರು ರೂಪಾಯಿ ಸಂಪಾದಿಸುತ್ತಾಳೆ. ಅಪ್ಪ ಎನಿಸಿಕೊಂಡ ಪಾಪಿ ಮಕ್ಕಳನ್ನು ಮಾಡಿ ಎಲ್ಲೋ ಹಾಳಾಗಿದ್ದಾನೆ ನಮಗೆ ಯಾರು ಧಿಕ್ಕು ತಾಯಿಯ ಹೊರತು?

ನಾವು ಭಿಕ್ಷುಕರೇ? ನಮ್ಮನ್ನು ಯಾಕೆ ಭಿಕ್ಷುಕರು ಎಂದು ಕರೆದು ಚಿಲ್ಲರೆ ಕೊಟ್ಟು ಓಡಿಸುತ್ತಾರೆ? ನನ್ನ ತಾಯಿ ನಮ್ಮನ್ನು ಎಲ್ಲಿ ಬಿಟ್ಟು ದುಡಿಯೋಕೆ ಹೋಗಲು ಸಾಧ್ಯ? ಈ ರೀತಿ ಯೋಚಿಸುವ ಪುಟ್ಟ ಎರಡು ಜೀವಗಳು ಹೆತ್ತಮ್ಮನನ್ನು ನೋಡುತ್ತಿದ್ದಾಗ ಅಮ್ಮನ ಕಣ್ಣಿಂದ ಕಂಬನಿಗಳು ಜಾರಿದವು.

ಎರಡು ಪುಟ್ಟ ಮಕ್ಕಳು ಅಮ್ಮನ ಕಣ್ಣನ್ನು ಒರೆಸಿ “ಅಮ್ಮ ಬೇಜಾರಯ್ತೇನಾಮ್ಮ? ನಮಗೆ ಮನೆ ಬೇಡಮ್ಮ ಇದೇ ಮರದ ಅಡಿ ಸಾಕು. ನಾವು ಇನ್ನುಮುಂದೆ ಮನೆ ಬೇಕು ಅನ್ನಲ್ಲ. ಹಳೆಯ ಕೊಳಕು ಬಟ್ಟೆಗಳೇ ಸಾಕು ನಮಗೆ, ಹಳಸಿದ ಅನ್ನವೇ ಸಾಕು! ನೀನು ಹೇಳಿದ ಹಾಗೆ ನಿನ್ನನ್ನು ಹಿಂಬಾಲಿಸಿ ಬರುವೆವು ನೀನು ಅಳಬೇಡಮ್ಮ ಎಂದಾಗ ಆ ತಾಯಿ ಇಬ್ಬರು ಪುಟಾಣಿ ಮಕ್ಕಳನ್ನು ತಬ್ಬಿ ಹಿಡಿದು ಅತ್ತು ಹೇಳಿದಳು “ನನ್ನ ಕ್ಷಮಿಸಿ ಮಕ್ಕಳೇ ಎಲ್ಲರಂತೆ ನಾನು ನಿಮ್ಮನ್ನು ಒಂದು ದಿನಾನೂ ಮೆತ್ತನೆಯ ಹಾಸಿಗೆ ಮೇಲೆ ಮಲಗಿಸಿಲ್ಲ, ಅಂಗಡಿಯಿಂದ ಹಾಲು ತಂದು ಕುಡಿಸಿಲ್ಲ, ಬಿರಿಯಾನಿ ತಿನಿಸಿಲ್ಲ.‌

ಜಡಿ ಮಳೆ ಬರುವಾಗಲೂ ನಿಮ್ಮನ್ನು ನೆನೆಯಲು ಬಿಟ್ಟೆ, ಉರಿ ಬಿಸಿಲಿನಲ್ಲಿ ಒಣಗಲು ಬಿಟ್ಟೆ, ಆಟವಾಡಲು , ಹೊಸ ಚಪ್ಪಲಿ ಕೊಡಿಸಿಲ್ಲ, ಬರೀ ಯಾರೋ ಬಿಸಾಕಿದ ಹಳೆಯ ಬಟ್ಟೆ, ಅನ್ನವನ್ನು ಮಾತ್ರ ಕೊಡಿಸಿದೆ ಬಿಂದು ಬಿಕ್ಕಿಬಿಕ್ಕಿ ಅತ್ತಾಗ ಮಕ್ಕಳು ಅಮ್ಮನ ಅದಾಗಲೇ ಅಮ್ಮನ ಸೆರಗಿನ ಒಳಗೆ ಸೇರಿಕೊಂಡು ಬೆಚ್ಚಗೆ ನಿದ್ರಿಸಿ ಆಗಿತ್ತು!!

** ** **

ಅಮ್ಮ ಅಂದರೆ ಹಾಗೇ ಕಣ್ರಿ. ನೋವು, ಅವಮಾನವನ್ನು ಲೆಕ್ಕಿಸದೆ ಕಂಡವರ ಮುಂದೆ ಅಂಗಲಾಚಿ ಮಕ್ಕಳ ಹೊಟ್ಟೆ ತುಂಬಿಸುತ್ತಾಳೆ‌. ಯಾರು ಹುಟ್ಟು ಭಿಕ್ಷುಕರಾಗುವುದಿಲ್ಲ. ಕೆಲವೊಮ್ಮೆ ಅವರ ಪ್ರಾಮಾಣಿಕತೆ , ದೌರ್ಬಲ್ಯ ಅವರನ್ನು ಮಾಡಿಸುತ್ತೆ. ಎಲ್ಲರು ಕೆಟ್ಟವರಾಗಿರುವುದಿಲ್ಲ ಸಮಾಜ ಕೆಟ್ಟವರನ್ನಾಗಿ ಮಾಡುತ್ತೆ!! ಭಿಕ್ಷುಕ ತಾಯಂದಿರಿಗೂ ಗೌರವಿಸೋಣ ದಯವಿಟ್ಟು!

-ಸಮ್ಮಿ

Leave a Reply