ಎದ್ದು ನಿಲ್ಲಲು ಕಾಲುಗಳಲ್ಲಿ ಶಕ್ತಿ ಇಲ್ಲ… ಮಾರಕ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ನಿತ್ರಾಣಗೊಂಡ ಆ ಮಹಿಳೆ ಆಸ್ಪತ್ರೆಯ ಆವರಣದಲ್ಲಿ ನಾಲ್ಕು ದಿನ ರೌರವ ನರಕ ಯಾತನೆ ಅನುಭವಿಸಿದ್ದಾಳೆ. ತನ್ನವರು ಯಾರೂ ಅಲ್ಲದೇ, ಮಲಗಿದಲ್ಲೇ ಮಲಮೂತ್ರ ವಿಸರ್ಜನೆ ಮಾಡಿಕೊಂಡು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಆರು ವರ್ಷದ ಮಟ್ಟ ಹೆಣ್ಣು ಮಗು ತನ್ನ ತಾಯಿಯನ್ನು ಜೋಪಾನ ಮಾಡುತ್ತಿರುವುದು.
ಬಿದ್ದು ಹೊರಳಾಡಿದರೂ, ಮೂಗು ಮುಚ್ಚಿಕೊಂಡು ಮುಂದೆ ಹೋಗುವ ವೈದ್ಯರ ತಂಡ, ಆ ನಿರ್ಗತಿಕ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದೇ ಹೊರ ಹಾಕಿದ ಅಮಾನವೀಯ ಘಟನೆಗೆ ಕೊಪಳ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿ ನಿಂತಿದೆ.

ವೈದ್ಯೋ ನಾರಾಯಣ ಹರಿ ಎಂದು ಎಲ್ಲರೂ ವೈದ್ಯರನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ. ಆದರೆ, ನಾಲ್ಕು ದಿನಗಳ ಕಾಲ ಕಾಲಡಿಯಲ್ಲಿಯೇ ಮಲಗಿ, ಜಾಂಡಿಸ್ ಹಾಗೂ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ಮಾನಸಿಕ ಅಸ್ವಸ್ಥ ಮಹಿಳೆಗೆ ಇಲ್ಲಿನ ವೈದ್ಯರು ಮಾನವೀಯತೆ ಮೆರೆದು ಚಿಕಿತ್ಸೆ ಕೊಟ್ಟು ಗುಣಮುಖರನ್ನಾಗಿ ಮಾಡಿದ್ದರೆ ಇಂದು ಕೊಪ್ಪಳ ಆಸ್ಪತ್ರೆಯ ಕೀರ್ತಿ ದೇಶದ ತುಂಬ ಹರಡುತ್ತಿತ್ತು. ಬದಲಾಗಿ, ಬಡ ರೋಗಿಗಳ ಬಗ್ಗೆ ಎಳ್ಳಷ್ಟೂ ಕರುಣೆ ತೋರಿಸದೇ, ಅಮಾಯಕ ಮಹಿಳೆಯ ಮೇಲೆ ಕ್ರೌರ್ಯ ಮೆರೆದ ಇಲ್ಲಿನ ವೈದ್ಯರ ತಂಡಕ್ಕೆ ಇಡೀ ಕರ್ನಾಟಕದ ಜನರು ಕಿಡಿಕಾರುವಂತಾಗಿದೆ. ಜಾಂಡಿಸ್ ಮತ್ತು ಲಿವರ್ ಕಾಯಿಲೆಗೆ ತುತ್ತಾಗಿ ಎದ್ದು ನಿಲ್ಲಲು ಸಾಧ್ಯವಾಗದ ದುರ್ಗಮ್ಮ ಎಂಬ ಮಹಿಳೆಯನ್ನು ಅವಳ ಗಂಡ ಕಳೆದ 6 ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೊರಟು ಹೋಗಿದ್ದಾನೆ. ಜೊತೆಗೆ 6 ವರ್ಷ ಭಾಗ್ಯ ಎಂಬ ಪುಟ್ಟ ಮಗಳನ್ನೂ ತಾಯಿಯ ಜೊತೆಗೆ ಬಿಟ್ಟು ಹೋಗಿ, ಅವರು ಬದುಕಿದಾರೋ? ಸತ್ತಿದ್ದಾರೋ? ಎಂದು ನೋಡುವುದಕ್ಕೂ ಮರಳಿ ಬಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು, ಎರಡು ದಿನ ಚಿಕಿತ್ಸೆ ನೀಡಿ, ಹೊರಗಡೆ ಹಾಕಿದ್ದಾರೆ. ತಾಯಿಯ ಸ್ಥಿತಿಯನ್ನು ಕಂಡು ದಿಕ್ಕು ತೋಚದಂತಾದ ಮಗು ಭಾಗ್ಯ, ಅವರಿವರ ಬಳಿ ಬೇಡಿ ತಂದು ತಾಯಿಯ ಆರೈಕೆ ಮಾಡಿದ್ದು ಮಾತ್ರ ಮನಕಲುಕುವುಂತಿತ್ತು.

ನಾಲ್ಕು ದಿನಗಳ ಕಾಲ ಒಳ ರೋಗಿಗಳ ಕೊಠಡಿಯ ಹೊರಗಡೆ ಅನಾಥ ಶವದಂತೆ ಮಲಗಿದ ದುರ್ಗಮ್ಮನ ಸ್ಥಿತಿ ನಿಜಕ್ಕೂ ಶೋಚನೀಯ. ಮಲಗಿದಲ್ಲೇ ಎಲ್ಲಾ ನಿತ್ಯ ಕರ್ಮಗಳನ್ನು ಮಾಡಿಕೊಂಡು, ಅದರಲ್ಲಿಯೇ ಬಿದ್ದು ಹೊರಳಾಡಿ, ನರಳಾಡಿದರೂ, ಅಲ್ಲಿನ ಸಿಬ್ಬಂದಿಗೆ ಅದು ಕಾಣಿಸಲಿಲ್ಲ. ಕೊನೆಗೆ ಈ ವಿಷಯ ಹೋರಾಟಗಾರರ ಗಮನಕ್ಕೆ ಬಂತು. ಅವರು ಬಂದು ಆ ಮಹಿಳೆಯನ್ನು ನೋಡಿ ದಂಗಾದರು. ಇದೇನು ಆಸ್ಪತ್ರೆಯೋ,,? ಸ್ಮಶಾನವೋ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಗ ಅವಳನ್ನು ಪುನಃ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಕೊಡಲು ವೈದ್ಯರು ಒಲ್ಲದ ಮನಸ್ಸಿನಿಂದ ಒಪ್ಪಿದರು. ಅಚ್ಚ ರಿಯ ಸಂಗತಿ ಎಂದರೆ, ಆ ಮಹಿಳೆಯನ್ನು ಎತ್ತಿ ಬೆಡ್ ಮೇಲೆ ಮಲಗಿಸಲು ಅಲ್ಲಿರುವ ಡಿ ಗ್ರೂಪ್ ನೌಕರರು ಮುಂದೆ ಬರಲಿಲ್ಲ. ಕೊನೆಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಹಿಳೆಯನ್ನು ಬೆಡ್ ಮೇಲೆ ಎತ್ತಿ ಹಾಕಿದರು.

ತಾಯಿಗೆ ತಾಯಿಯಾದ ಮಗಳು,,,,

ಅರೆಪ್ರಜ್ಞಾವಸ್ತೆಯಲ್ಲಿ ಹಾಸಿಗೆ ಮೇಲೆ ಮಲಗಿದ ತಾಯಿಯ ಆರೈಕೆಯನ್ನು ಅವಳ 6 ವರ್ಷದ ಮಗು ಭಾಗ್ಯ ಮಾಡಿದ್ದಾಳೆ. ಇನ್ನೂ ಹೊರಗಿನ ಪ್ರಪಂಚದ ಜ್ಞಾನವೇ ಇಲ್ಲ. ಆದರೂ ಆ ಪುಟ್ಟ ಬಾಲಕಿ ತನ್ನ ತಾಯಿಯನ್ನು ತನ್ನ ಮಗುವಿನಂತೆ ಜೋಪಾನ ಮಾಡಿದ್ದಾಳೆ. ತನ್ನವರು ಯಾರೂ ಇಲ್ಲದಿದ್ದರೂ, ಆಸ್ಪತ್ರೆಯಲ್ಲಿದ್ದವರಿಂದಲೇ ಬೇಡಿ ತಂದು ತಾಯಿಯ ಆರೈಕೆ ಮಾಡಿದ ಪರಿ ನಿಜಕ್ಕೂ ಈ ಮಗುವಿನ ತಾಯಿ ಹೃದಯ ಎಂಥದ್ದು ಎಂದು ಹೇಳಲು ಅಸಾಧ್ಯ.

ಮಾಧ್ಯಮಗಳ ವರದಿಗೆ ಎಚ್ಚೆತ್ತ ಜಿಲ್ಲಾಡಳಿತ…..

ಮಹಿಳೆ ಹಾಗೂ ಮಗುವಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೇ, ನಾಲ್ಕು ದಿನ ಕಾಲಡಿಯಲ್ಲಿಯೇ ಬಿದ್ದರೂ ನೋಡದ ವೈದ್ಯರ ತಂಡ ಇದೀಗ, ಆ ಮಹಿಳೆಗೆ ಒಬ್ಬ ವೈದ್ಯರನ್ನು ನೇಮಕ ಮಾಡಿದ್ದಾರೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಹಿಳೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚನೆ

ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬಾಲಕಿಯೊಬ್ಬಳು ಭಿಕ್ಷೆ ಬೇಡಿ ತಾಯಿಯನ್ನು ಪೋಷಿಸುತ್ತಿರುವ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ಮುಖ್ಯಮಂತ್ರಿಗಳು ಆ ಮಹಿಳೆ ಹಾಗೂ ಬಾಲಕಿಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಭೇಟಿ ನೀಡಿ ಮಹಿಳೆಗೆ ಸೂಕ್ತ ಚಿಕಿತ್ಸೆಯ ನಂತರ ಸ್ವಾಧಾರ ಕೇಂದ್ರಕ್ಕೆ ಸೇರಿಸಲು ಕ್ರಮ ವಹಿಸಿದ್ದಾರೆ. – ಮಹಿಳೆ ದುರುಗವಳ ಮಕ್ಕಳನ್ನು ಬಾಲಕಿಯರ ಬಾಲಮಂದಿರ, ಬಾಲಕರ ಬಾಲ ಮಂದಿರಕ್ಕೆ ದಾಖಲಿಸಿ ಶಿಕ್ಷಣ ಒದಗಿಸಲು ಕ್ರಮ ವಹಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸೋದರಿ ತಮ್ಮೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಪತ್ರಿಕೆಯಲ್ಲಿ ವರದಿ ನೋಡಿ ಕೊಪ್ಪಳಕ್ಕೆ ಆಗಮಿಸಿರುವುದಾಗಿ ಆಕೆಯ ಸೋದರ ಲಕ್ಷಣ ತಿಳಿಸಿದ್ದು ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.

Original News Source : Samyukta karnataka

Leave a Reply