ಬೆಂಗಳೂರು: ರಾಜ್ಯದಲ್ಲಿ ಹೊಸ ಬೀಟ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಂದು ಪ್ರದೇಶಕ್ಕಷ್ಟೇ ಸೀಮಿತಗೊಳಿಸಿ ಚರ್ಚೆಗೆ ಗ್ರಾಸವಾಗಿರುವ ಪೊಲೀಸ್ ಇಲಾಖೆ, ಇದೀಗ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ತಿಂಗಳಿಗೆ ಕನಿಷ್ಠ 5 ಪ್ರಕರಣ ದಾಖಲಿಸಲೇಬೇಕೆಂಬ ಹೊಸ ನಿಯಮ ರೂಪಿಸಿರುವುದು ವಿವಾದದ ಜತೆಯಲ್ಲೇ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

ಕರ್ನಾಟಕ ಪೊಲೀಸ್ (ಕೆಪಿ) ಕಾಯ್ದೆ ಪ್ರಕಾರ ಠಾಣೆಯ ಪ್ರತಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಸಿಕ 5 ಲಘು ಪ್ರಕರಣ ದಾಖಲಿಸಬೇಕು. ಕೇಸ್​ಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಪ್ರತಿ ತಿಂಗಳು ಡಿಜಿಪಿ ಕಚೇರಿಗೆ ಕಳುಹಿಸಬೇಕು ಎಂದು ಆದೇಶಿಸಲಾಗಿದೆ. ಕೇಸ್ ದಾಖಲಿಸದ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಿಎಲ್, ಇಎಲ್ ಹಾಗೂ ಇತರ ರಜೆ ಪಡೆಯಲು ಅನುಮತಿ ನೀಡದಂತೆ ಘಟಕದ ಮುಖ್ಯಸ್ಥರಿಗೆ ಕಟ್ಟಾಜ್ಞೆ ಹೊರಡಿಸಲಾಗಿದೆ.

ಬೆಂಗಳೂರಿನಂಥ ಮಹಾನಗರಗಳಲ್ಲಿ ಪ್ರಕರಣ ದಾಖಲಿಸಬಹುದು. ಆದರೆ, ಗ್ರಾಮೀಣ ಭಾಗದ ಪೊಲೀಸ್ ಠಾಣೆಗಳಲ್ಲಿ ಇದು ಹೇಗೆ ಸಾಧ್ಯ ಎಂಬುದು ಪೊಲೀಸರ ಪ್ರಶ್ನೆ. ನಗರಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರದಂಥ ಗಂಭೀರ ಪ್ರಕರಣಗಳ ಜತೆಗೆ ಮಹಿಳೆಯರ ಚುಡಾಯಿಸುವುದು (ಈವ್ ಟೀಸಿಂಗ್), ಜಗಳ, ಧೂಮಪಾನ, ಸಂಚಾರ ನಿಯಮ ಉಲ್ಲಂಘನೆ, ಬೈಗುಳದಂಥ ಸಣ್ಣಪುಟ್ಟ ಪ್ರಕರಣಗಳು ನಡೆಯುತ್ತವೆ. ಹೀಗಾಗಿ ಸುಲಭವಾಗಿ ಪ್ರಕರಣಗಳನ್ನು ದಾಖಲಿಸಬಹುದು.

ಆದರೆ, ಗ್ರಾಮೀಣ ಭಾಗದಲ್ಲಿ ನಿಯಮ ಉಲ್ಲಂಘನೆ ಅಥವಾ ಗಂಭೀರ ಪ್ರಕರಣಗಳು ಅಪರೂಪ. ಅಕ್ಕಪಕ್ಕದ ಮನೆಯವರು, ಅಣ್ಣ-ತಮ್ಮಂದಿರು, ಭೂ ವ್ಯಾಜ್ಯಗಳಂಥ ವೈಯಕ್ತಿಕ ಗಲಾಟೆಗಳು ನಡೆಯುತ್ತವೆ. ಈ ಸಣ್ಣಪುಟ್ಟ ವ್ಯಾಜ್ಯಕ್ಕೂ ಕೇಸ್ ದಾಖಲಿಸಿದರೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಣೆ ಸಾಧ್ಯವಿಲ್ಲ ಎಂಬುದು ಪೊಲೀಸರ ಅತಂಕ.

ಸಾಂದರ್ಭಿಕ ಚಿತ್ರ

Leave a Reply