ಮೊಮ್ಮಕ್ಕಳೊಂದಿಗೆ ಕಥೆ ಹೇಳುತ್ತಾ ಮನೆಯಲ್ಲಿರಬೇಕಾಗಿದ್ದ ಪ್ರಾಯದಲ್ಲಿ ತಾನು ಡಿಗ್ರಿ ಪಡೆದಾಗ ಮಕ್ಕಳೂ ಸೇರಿದಂತೆ ಎಲ್ಲರಿಗೂ ಆಶ್ಚರ್ಯವೆಂದು ಕಿಮ್ ಲುನ್ ಜಿನಾಕುಲ್ ಹೇಳುತ್ತಾರೆ. ಶಾಲಾ ಜೀವನದಲ್ಲಿ ತುಂಬಾ ಜಾಣೆಯಾಗಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಸೌಕರ್ಯ ಅಂದಿರಲಿಲ್ಲ. ನಂತರ ಬ್ಯಾಂಕಾಕ್‌ಗೆ ವಲಸೆ ಹೋದ ಬಳಿಕ ಕಲಿಕೆಯು ಅರ್ಧದಲ್ಲೇ ಉಳಿಯಿತು. ನಂತರ ಮದುವೆಯಾಗಿ ಮಕ್ಕಳಾದ ಬಳಿಕ ಅವರ ಶಿಕ್ಷಣದ ಕಡೆಗೆ ಗಮನಹರಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಐದು ಮಕ್ಕಳು ಮಾಸ್ಟರ್ ಡಿಗ್ರಿ ಹಾಗೂ ಓರ್ವರು ಪಿಹೆಚ್‌ಡಿ ಪಡೆದಾಗ ಸಂತೋಷ ಪಟ್ಟ ಆ ಅಮ್ಮ ತಾನು ಡಿಗ್ರಿ ಪಡೆಯಬೇಕೆಂಬ ಕನಸಿನಿಂದ ಹೊರಬರಲಿಲ್ಲ. – ಹೀಗೆ 72ನೇ ವಯಸ್ಸಿನಲ್ಲಿ ಪುನಃ ಶಿಕ್ಷಣಕ್ಕಾಗಿ ಪಠ್ಯ ಪುಸ್ತಕ ವನ್ನು ತೆರೆದರು. ಆದರೆ ಓರ್ವ ಮಗಳ ಮರಣದಿಂದ ಕಲಿಯುವ ಆಸೆಯನ್ನು ಕೈ ಬಿಟ್ಟರು.

ನಂತರ 85ನೇ ವಯಸ್ಸಿ ನಲ್ಲಿ ಪುನಃ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಹೂಮನ್ ಇಕೋನಮಿ ಎಂಬ ವಿಷಯದಲ್ಲಿ ಹಲವು ವರ್ಷಗಳ ಕಠಿಣ ಪ್ರಯತ್ನದಿಂದ ಅಜ್ಜಿಯು ಬಿರುದು ಗಳಿಸುವಾಗ 91 ವರ್ಷವೇ ಕಳೆದಿತ್ತು.
ಬಿರುದು ಗಳಿಸಿದ ಬಳಿಕ ಇನ್ನು ಮುಂದಿನ ನಿಮ್ಮ – ಯೋಜನೆಯೇನೆಂದು ಕೇಳಿದಾಗ, “ನನಗೆ ಈ ವಯಸ್ಸಿನಲ್ಲಿ ಯಾರೂ ಉದ್ಯೋಗ ನೀಡಲಾರರು’ ಎಂದು ನಗುತ್ತಾರೆ. ಮುದ್ದು ಮೊಮ್ಮಕ್ಕಳೊಂದಿಗೆ, ಮರಿ ಮಕ್ಕಳೊಂದಿಗೆ ಹಾಯಾಗಿ ಬದುಕುವುದೇ ನನ್ನ ಆಸೆ ಎನ್ನುತ್ತಾರೆ ಮುತ್ತಜ್ಜಿ. ಅಜ್ಜಿ ತನ್ನನ್ನು ಭೇಟಿಯಾಗುವವರೊಡನೆ ಹೇಳುವ ಮಾತೊಂದಿದೆ ‘ಇನ್ನೂ ಸಮಯ ಮೀರಿಲ್ಲ’

Leave a Reply