ದೆಹಲಿ: ತೀವ್ರ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಸಂವಹನ ಜಾಲ(ಎಸ್‌ಎಮ್‌ಸಿಎಚ್) ಸ್ಥಾಪನೆ ವಿಚಾರದಲ್ಲಿ ಕೇಂದ್ರ ಸರಕಾರ ಯೂಟರ್ನ್ ಹೊಡೆದಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮ ಸಂವಹನ ಜಾಲವನ್ನು ಸ್ಥಾಪಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಶಾಸಕಿ ಮೊಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸರಕಾರ ಸಾಮಾಜಿಕ ಮಾಧ್ಯಮ ಸಂವಹನ ಜಾಲ ಸ್ಥಾಪಿಸಲು ಕೇಂದ್ರ ನಿರ್ಧರಿಸಿತ್ತು. ಶುಕ್ರವಾರ ನಡೆದ ವಿಚಾರಣೆ ವೇಳೆ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸರಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಕೇಂದ್ರ ಸರಕಾರ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಪರಾಮರ್ಶಿಸಲು ಜಾಲತಾಣ ಕೇಂದ್ರದ ಸ್ಥಾಪನೆ ನಿರ್ಧಾರವನ್ನು ಸರಕಾರ ಕೈಬಿಟ್ಟಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಈ ನಿರ್ಧಾರದಿಂದ ಸಾಮಾಜಿಕ ಜಾಲತಾಣಗಳನ್ನು ಎಲ್ಲ ಆಯಾಮಗಳಿಂದಲೂ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದು, ಇದೊಂದು ಗಂಭೀರ ವಿಚಾರ ಎಂದು ಮೊಹುವಾ ಆರೋಪಿಸಿ, ಈ ನಿರ್ಧಾರ ಸಂವಿಧಾನದಲ್ಲಿ ಒದಗಿಸಲಾಗಿರುವ ಖಾಸಗಿ ಹಕ್ಕಿನ ಉಲ್ಲಂಘನೆಗೆ ಕಾರಣವಾಗಲಿದೆ ಎಂದು ಮಂಡಿಸಿದ್ದರು.

ಈ ಹಿಂದೆ ನಡೆದ ವಿಚಾರಣೆಯಲ್ಲಿ ಕೇಂದ್ರ ಸರಕಾರ ಕಣ್ಗಾವಲು ರಾಷ್ಟ್ರ ನಿರ್ಮಾಣ ಮಾಡಲು ಹೊರಟಿದೆಯೇ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

Leave a Reply