ರೋಮ್ : ಜಗತ್ತಿನಲ್ಲಿ ಹಸಿಯುವವರ ಸಂಖ್ಯೆ ನಿರಂತರ ಮೂರನೆ ವರ್ಷವೂ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಜಗತ್ತಿನಾದ್ಯಂತ ಹಸಿಯುತ್ತಿರುವವರ ಸಂಖ್ಯೆ 821 ಮಿಲಿಯನ್ ಆಗಿದೆ ಎಂದು ಕಳೆದ ದಿವಸ ವಿಶ್ವಸಂಸ್ಥೆ ಹೊರಡಿಸಿದ ವರದಿಯಲ್ಲಿ ವಿವರಿಸಲಾಗಿದೆ.

ಜಗತ್ತಿನಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯಗಳು ಹಸಿವು ಹೆಚ್ಚಳಕ್ಕೆ ಪ್ರಬಲ ಕಾರಣವೆಂದು ವರದಿ ತಿಳಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಕೃಷ್ಯುತ್ಪಾದನೆ ಕಡಿಮೆಯಾಗಿದ್ದು ಆಹಾರ ಕ್ಷಾಮ ಹೆಚ್ಚಳಕ್ಕೆ ಕಾರಣವಾಗಿದೆ.

2016ರಲ್ಲಿ 804 ಮಿಲಿಯನ್ ಜನರು ಹಸಿದಿದ್ದರೆ 2017ರಲ್ಲಿ ಅದು ಹೆಚ್ಚಳಗೊಂಡು 821 ಮಿಲಿಯನ್‍ಗೆ ತಲುಪಿತು. ದಕ್ಷಿಣ ಅಮೆರಿಕದಲ್ಲಿ ಮತ್ತು ಆಫ್ರಿಕದಲ್ಲಿ ಹಸಿವವರ ಸಂಖ್ಯೆ ಅತ್ಯಧಿಕಗೊಂಡಿದೆ. .

ಈ ವರದಿ ಇಂದು ಜಗತ್ತಿನಲ್ಲಿ ಭೀತಿ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಆಹಾರ ಸುರಕ್ಷೆ ವಿಷಯಗಳ ಮುಖ್ಯಸ್ಥ ಡೆವಿಡ್ ಬೆಸ್ಲಿ ಹೇಳಿದರು. ಹವಾಮಾನ ವೈಪರೀತ್ಯ ಈಗಲೂ ಜಗತ್ತಿನ ಹಲವು ಕಡೆಗಳಲ್ಲಿ ಆಗುತ್ತಲೇ ಇವೆ. ಜತೆಗೆ ಹಲವು ಕಡೆ ಜಗತ್ತಿನಲ್ಲಿ ಯುದ್ಧ ನಡೆಯುತ್ತಿದೆ. ಇವೆಲ್ಲ ಬಡತನ, ಹಸಿವು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.

ತೀಕ್ಷ್ಣ ಬರ ಪರಿಸ್ಥಿತಿ ಮತ್ತು ಅತಿವೃಷ್ಟಿಯಿಂದಾಗಿ ಗೋಧಿ, ಭತ್ತ, ಜೋಳ ಬೆಳೆಗಳು ನಾಶವಾಗಿವೆ. ತಾಪಮಾನವೂ ಹೆಚ್ಚಿದ್ದು ಕೃಷಿಗೆ ಇದು ಕೆಟ್ಟಪರಿಣಾಮವುಂಟು ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹಸಿವು ಮಕ್ಕಳು, ಎಳೆ ಶಿಶುಗಳು ಹಾಗೂ ಹದಿಹರೆಯದ ಹೆಣ್ಣು ಮಕ್ಕಳಲ್ಲಿ, ಮಹಿಳೆಯರಲ್ಲಿ ಪೋಷಕಾಹಾರ ಕೊರತೆಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಹವಮಾನದ ಬದಲಾವಣೆ ಕುರಿತು ಮತ್ತು ಹವಮಾನದ ವೈಪರೀತ್ಯ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಜಾಗತಿಕ ರಾಷ್ಟ್ರಗಳು ಹೆಚ್ಚು ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

Leave a Reply