ಸಾಂದರ್ಭಿಕ ಚಿತ್ರ

ಹೊಸದಿಲ್ಲಿ; ವೇದಗಳು ಭಾರತದ ಭಾರತೀಯತೆಯಾಗಿದೆ. ವೇದದಲ್ಲಿ ಸಕಲ ಸೃಷ್ಟಿಗಳ ವಿಧಾನವಿದೆ. ವೇದಾಧ್ಯಯನದಿಂದ ಆತ್ಮ ಜ್ಞಾನ, ಬ್ರಹ್ಮ ಜ್ಞಾನ, ಜೀವನ ಜ್ಞಾನ ಮತ್ತು ಸರ್ವ ಜ್ಞಾನಗಳ ಅಧ್ಯಯನ ನಡೆಸಬಹುದಾಗಿದೆ. ಆದ್ದರಿಂದ ವೇದದ ಹೆಸರಿನಲ್ಲಿ ಭೇದದ ಮಾತುಗಳನ್ನಾಡುವ ಜನರನ್ನು ಬಹಿಷ್ಕರಿಸಬೇಕಾಗಿದೆ ಎಂದು ಯೋಗ ಗುರು ರಾಮದೇವ್ ಹೇಳಿದ್ದಾರೆ.

ಅವರು ಮಂಗಳವಾರ ಲೋಧಿ ರಸ್ತೆಯ ಚಿನ್ಮಯ ಮಿಶನ್ ಹಾಲ್‍ನಲ್ಲಿ ಆಯೋಜಿಸಲಾದ ಭಾರತಾತ್ಮ ಅಶೋಕ್ ಜಿ ಸಿಂಘಾಲ್ ವೈದಿಕ ಪುರಸ್ಕಾರ 2018 ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡುತ್ತಿದ್ದರು.

ಪವಿತ್ರ ಕುರ್‍ಆನ್ ಮತ್ತು ಬೈಬಲ್‍ಗಳಲ್ಲಿ ಬಹಳಷ್ಟು ಉತ್ತಮ ಮಾತುಗಳಿವೆ. ಇವುಗಳನ್ನು ಧಾರ್ಮಿಕ ಪುಸ್ತಕ ಎನ್ನಬಹುದು. ಆದರೆ ಇದನ್ನು ಧರ್ಮ ಗ್ರಂಥ ಎನ್ನಲು ಸಾಧ್ಯವಿಲ್ಲ ಎಂದು ರಾಮ್ ದೇವ್ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದವನ್ನು ಧರ್ಮದ ನೆಲೆಯಿಂದ ಮೇಲೆದ್ದು ನೋಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ವೇದಾಧಾರಿತ ಶಿಕ್ಷಣ ಪ್ರಣಾಳಿಕೆಯನ್ನು ಜಾರಿಗೊಳಿಸಬೇಕು. ಗೋಹತ್ಯೆ ತಡೆಯುವ ಕುರಿತು ನಿಶ್ಚಯ ಪ್ರಕಟಿಸಬೇಕು. ದೇಶದಲ್ಲಿ ಬೈಬಲ್ ಹೊರತಾದ ವೇದಾಧಾರಿತ ಕ್ಯಾಲಂಡರ್ ತಯಾರಿಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ವೇದವನ್ನು ಕೈಯಲ್ಲಿ ಹಿಡಿದು ಆಡಳಿತ ನಡೆಸಿದರೆ ವೇದಕ್ಕೆ ಸಂವಿಧಾನದಲ್ಲಿಯೂ ಗೌರವ ಪ್ರಾಪ್ತವಾಗುತ್ತದೆ. ನಮ್ಮ ದೇಶದಲ್ಲಿ ಮಸೀದಿಯಲ್ಲಿ ನಮಾಝ್‍ಗೆ ನೇತೃತ್ವ ನೀಡುವ ಮೌಲ್ವಿಗಳಿಗೆ ಸರಕಾರ ವೇತನ ನೀಡಬಹುದಾದರೆ, ವೈದಿಕರಿಗೆ ಯಾಕೆ ವೇತನ ನೀಡಬಾರದು ಎಂದು ಅವರು ಪ್ರಶ್ನಿಸಿದರು.

Leave a Reply