ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಇಸ್ರೋ ಮಾಜಿ ವಿಜ್ಞಾನಿ ನಂಬಿನಾರಾಯಣ್‍ರಿಗೆ ಸುಪ್ರೀಂಕೋರ್ಟು ಸೂಚಿಸಿದ 50 ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ನಷ್ಟ ಪರಿಹಾರದ ಹಣವನ್ನು ಪೊಲೀಸ್ ಅಧಿಕಾರಿಗಳಿಂದ ತೆಗೆದುಕೊಳ್ಳುವ ಕುರಿತು ಕಾನೂನು ಇಲಾಖೆಯ ಪರಿಶೀಲನೆಗೆ ಒಪ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ನಂಬಿ ನಾರಾಯಣ್‍ರಿಗೆ ಅತಿ ಶೀಘ್ರದಲ್ಲಿ ನಷ್ಟಪರಿಹಾರದ ಮೊತ್ತ ಕೊಡಲಾಗುವುದು ಎಂದು ಅವರು ಹೇಳಿದರು.

ಕಳೆದ ಸೆಪ್ಟಂಬರ್ 14 ರಂದು ಇಸ್ರೋ ಬೇಹುಗಾರಿಕಾ ಪ್ರಕರಣದಲ್ಲಿ ಸುಪ್ರೀಂಕೋರ್ಟು ನಂಬಿನಾರಾಯಣ್‍ರಿಗೆ 50 ಲಕ್ಷ ನಷ್ಟಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪು ನೀಡಿತ್ತು. ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ಡಿ.ಕೆ. ಜೈನ್ ಅಧ್ಯಕ್ಷತೆಯ ಆಯೋಗವನ್ನು ನಿಯೋಜಿಸಿತ್ತು.

ಚೀಫ್ ಜಸ್ಟಿಸ್ ದೀಪಕ್ ಮಿಶ್ರ, ಜಸ್ಟಿಸ್ ಎಎಂ ಖಾನ್ವಿಲ್ಕರ್, ವೈಡಿ ಚಂದ್ರಚೂಡರಿದ್ದ ಪೀಠ ಐತಿಹಾಸಿಕ ತೀರ್ಪು ನೀಡಿತ್ತು. ಮಾಜಿ ಐಜಿ ಸಿಬಿ ಮ್ಯಾಥ್ಯೂಸ್, ಡಿವೈಎಸ್ಪಿಗಳಾದ ಕೆಕೆ ಜೋಸ್ವ, ಎಸ್ ವಿಜಯನ್ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸಧಿಕಾರಿಗಳಾಗಿದ್ದಾರೆ. 1994ರಲ್ಲಿ ನಂಬಿ ನಾರಾಯಣ್‍ರನ್ನು ಬಂಧಿಸಲಾಗಿತ್ತು. 1995ರಲ್ಲಿ ಸಿಬಿಐ ಅವರನ್ನು ಆರೋಪ ಮುಕ್ತಗೊಳಿಸಿತ್ತು.

Leave a Reply