ಬೆಳಿಗ್ಗೆ ಬೇಗನೇ ಎದ್ದು ನಿದ್ದೆಗಣ್ಣಿನಲ್ಲೇ ಬ್ರಶ್‍ಗೆ ಪೇಸ್ಟ್ ಹಾಕುತ್ತಿರುವಾಗ ಕೈ ತಪ್ಪಿ ಪೇಸ್ಟ್ ಕೆಳಗೆ ಬಿತ್ತು. ಬಗ್ಗಿ ಎತ್ತಿಕೊಳ್ಳುತ್ತೇನೆಂದರೆ ಬಗ್ಗಿಸಿದ ಸೊಂಟ ಎತ್ತಲಾಗುತ್ತಿಲ್ಲ… ಇಲ್ಲ… ಇಲ್ಲ… ಸಾಧ್ಯವೇ ಇಲ್ಲ, ಎಂತಹ ನೋವು. ಡ್ಯೂಟಿಗೆ ಹೋಗಲೂ ಲೇಟಾಗುತ್ತದೆ. ಆದರೆ ಅಲ್ಲಾಡಲಾಗುತ್ತಿಲ್ಲ. ಅಂದು ಮಲಗಿದವಳು 2 ದಿನ ಹಾಸಿಗೆಯಲ್ಲೇ ಇರಬೇಕಾಯ್ತು. ಮಲಗಿದಲ್ಲಿಂದಲೇ ಊರಿನಲ್ಲಿರುವ ತಂದೆ-ತಾಯಿಗೆ ತಿಳಿಸಿದಾಗ ಊರಿಗೆ ಬರುವಂತೆ ಇಲ್ಲೇ ಆಸ್ಪತ್ರೆಗೆ ತೋರಿಸುವಂತೆ ಹೇಳಿದಾಗ ದುಬಾೈಯಿಂದ ವಿಮಾನದಲ್ಲಿ ಇಳಿಯುವಾಗಲೂ ಸ್ಟ್ರೆಚರ್ ವ್ಯವಸ್ಥೆ ಮಾಡಲಾಗಿತ್ತು. ನಂತರ ಊರಿಗೆ ಬಂದು ಮರುದಿನವೇ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರ ಚಿಕಿತ್ಸೆಯೂ ಮುಗಿದಿತ್ತು. ಮುಂದೆ ಒಂದು ತಿಂಗಳ ರೆಸ್ಟ್ ಪಡೆದು ಮರಳಿ ದುಬಾೈಗೆ ಹಾರಿಯಾಗಿತ್ತು…

ಅಂಗಡಿ ತೆರೆಯುತ್ತಿದ್ದಂತೆಯೇ ಸೇಲ್ಸ್‍ಮ್ಯಾನ್(ಅಂಗಡಿ ಹುಡುಗ) ಬರುವಾಗ ಲೇಟ್ ಆಗುತ್ತದೆಂದು ಆತನನ್ನು ಕಾದರೆ ಆಗಲಿಕ್ಕಿಲ್ಲವೆಂದು ಧೂಳು ಹೊಡೆದು, ಕಸ ಹೊರ ಹಾಕಿ, ಬಾಗಿಲ ಒಳ ಬದಿಯಲ್ಲಿಟ್ಟ ದೊಡ್ಡ 30-35 ಕೆ.ಜಿ. ಭಾರದ ಪೆಟ್ಟಿಗೆ(ಕಟ್ಟು)ಯನ್ನು ಹೊರಗಿಡಲು ಎತ್ತುತ್ತಿದ್ದಂತೆ ಬೆನ್ನು ಹುರಿಯಲ್ಲಿ ಚಳಕು. ಕಟ್ಟು ಎತ್ತುವುದು ಬಿಡಿ, ಕಾಲು ಎತ್ತಿಡಲೂ ಸಾಧ್ಯವಾಗುತ್ತಿಲ್ಲ. ಅಂದು ಆಸ್ಪತ್ರೆ ಸೇರಿದ ಅಂಗಡಿ ಮಾಲಕರು ಒಂದು ತಿಂಗಳು ಹಾಸಿಗೆಯಲ್ಲೇ…!

ಮನೆಕೆಲಸದಲ್ಲಿ ತೊಡಗಿರುತ್ತಿದ್ದ ಮಹಿಳೆಯರಿಗೆ, ವಾಹನ ಚಲಾಯಿಸು ತ್ತಿದ್ದ ಚಾಲಕರಿಗೆ, ಮುದ್ದು ಮಾಡುತ್ತಾ ತೊಟ್ಟಿಲಿನಿಂದ ಹಸು ಗೂಸುಗಳನ್ನು ಎತ್ತುವ ಹಿರಿಯರಿಗೆ ಒಮ್ಮೆಲೇ ಕಾಡುವ ಬೆನ್ನುನೋವು.. ಬಾಳ ಸಂಜೆಯಲ್ಲಿರುವ ಹಲವರಿಗೆ ಇದು ಬೆನ್ನು ಬಿಡದ ಯಾತನೆ… ಕೆಲವೊಮ್ಮೆ ನರಕಯಾತನೆ. ಬೆನ್ನಿನ, ಸೊಂಟದ ನೋವುಗಳು. ಆದರೆ ಇಂದಿಗೂ ಈ ನೋವಿಗೆ ಕಾರಣ ಕಂಡು ಹಿಡಿಯಲಾಗಿಲ್ಲ.

ಆದರೂ… ಕೆಲವು ಟಿಪ್ಸ್, ಶಿಸ್ತು ಬದ್ಧ ರೂಢಿಗಳಿಂದ ಬೆನ್ನು ನೋವನ್ನು ದೂರ ಇಡಲು ಸಾಧ್ಯವಾಗುವುದು:

* ಬೆಳಿಗ್ಗೆ ಬೇಗನೆ ಎದ್ದು ವೇಗವಾಗಿ ಹಾಗೂ ನಿಯಮಿತವಾಗಿ ನಡೆಯಬೇಕು.
* ನಡೆಯುವ, ಕುಳಿತುಕೊಳ್ಳುವ ಭಂಗಿ ನೇರವಾಗಿರಬೇಕು.
* ಮಕ್ಕಳೊಂದಿಗೆ ಸೇರಿ ಆಡು ವುದರೊಂದಿಗೆ ಆಯಾಸಗೊಳ್ಳುವಂತಹ ಆಟಗಳನ್ನೂ ನಿಯಮಿತವಾಗಿ ಆಡುತ್ತಿರಬೇಕು.
* ಎದ್ದು ಬಗ್ಗಿ ಮಾಡುವಂತಹ ಕೆಲಸಗಳಾದ ಗುಡಿಸಿ ಒರೆಸುವುದು, ಬಟ್ಟೆ ಒಗೆಯುವುದು, ತೋಟಗಾರಿಕೆ.. ಮುಂತಾದ ಅಭ್ಯಾಸಗಳೂ ಇರಬೇಕು.
* ವಾಹನವನ್ನು ನೇರವಾಗಿ ಕುಳಿತು ಚಲಾಯಿಸಬೇಕು.
* ಕಂಪ್ಯೂಟರ್ ಮುಂದೆ ಕೆಲಸ ಮಾಡುವವರು, ಬರಹಗಾರರು ಸ್ವಾಗತಕಾರಿಣಿಯರು ಕುಳಿತಿರುವಲ್ಲೇ ಗಂಟೆಗಟ್ಟಲೆ ಕುಳಿತಿರದೆ ಆಗಾಗ ಎದ್ದು ನಡೆದಾಡಬೇಕು.
ಇದರಿಂದಲೂ ಬೆನ್ನು ನೋವು ಬಂದರೆ, ಎಡೆಬಿಡದೆ ಸತಾಯಿಸು ತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

Leave a Reply