ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಬಿಳಿ ಬಣ್ಣದ ಬಟ್ಟೆ ಧರಿಸಿ ಓಡಾಡಿದ್ದ ಮುಸ್ಲಿಂ ವೃದ್ಧ ವ್ಯಕ್ತಿಯ ಬಗ್ಗೆ ಮಾಧ್ಯಮಗಳು ಕಪೋಲ ಕಲ್ಪಿತ ವರದಿ ಮಾಡಿದ್ದವು. ಇದೀಗ ಆ ವೃದ್ಧ ಸ್ವತಃ ಡಿಸಿಪಿ ಕಚೇರಿಗೆ ಭೇಟಿ ನೀಡಿ ತನ್ನ ಪರಿಚಯ ಮಾಡಿಕೊಂಡಿದ್ದಾರೆ.
ಆ ವ್ಯಕ್ತಿ ಬೇರಾರೂ ಅಲ್ಲ, ನಾಯಂಡಳ್ಳಿ ನಿವಾಸಿ ರಿಯಾಜ್​​​​​ ಅಹ್ಮದ್​​. ಕಳೆದ 30 ವರ್ಷಗಳಿಂದ ಮೆಜೆಸ್ಟಿಕ್​​ನಲ್ಲಿ ವಾಚ್​​​ ರೀಪೆರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾಮಾನ್ಯ ವ್ಯಕ್ತಿ ಎಂದು ವಿಚಾರಣೆಯ ಮೂಲಕ ತಿಳಿದು ಬಂದಿದೆ. ಮಾಧ್ಯಮಗಳಲ್ಲಿ ಆತನ ಪೋಟೊ ಪ್ರಸಾರವಾಗುತ್ತಿದ್ದ ಹಿನ್ನೆಲೆ ರಿಯಾಜ್​​​ ಬೆಂಗಳೂರಿನ ಪೊಲೀಸ್​​ ಆಯುಕ್ತರಾದ ರವಿ ಡಿ. ಚೆನ್ನಣ್ಣನವರ್​​​​​​​​​ ಅವರನ್ನು ಭೇಟಿ ಮಾಡಿ ನಿಲ್ದಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಮೆಟ್ರೋ ನಿಲ್ದಾಣದ ಸಿಬ್ಬಂದಿ ನನ್ನನ್ನು ಪರಿಶೀಲನೆ ನಡೆಸುವಾಗ ಟೋಫಿ ತೆಗಿಸಿದರು. ಆದ್ದರಿಂದ ನನಗೆ ಕೊಂಚ ಇರಿಸುಮುರಿಸು ಆಯಿತು. ಅದಕ್ಕಾಗಿಯೇ ಒಳಗೆ ಹೋಗುವಾಗ ಎರಡು ಬಾರಿ ಹಿಂದೆ ತಿರುಗಿ ನೋಡಿದೆ. ಅದನ್ನು ನೋಡಿ ನನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕ್ರಮ ಜರಿಗಿಸಬೇಕು ಎಂದು ಡಿಸಿಪಿ ಎದುರು ಮನವಿ ಮಾಡಿಕೊಂಡಿದ್ದಾರೆ. ನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Leave a Reply