ಬೆಂಗಳೂರು: ಮುಂದಿನ ಮೂರು ದಿನಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಇಡೀ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ತಮ್ಮ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಿನ ನೂರು ಸಾಧನೆ ನೂರಾರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಆರಂಭದ 100 ದಿನ ನೆರೆ ಸಂಕಷ್ಟದಲ್ಲಿ ಕಳೆಯಿತು. ಆದರೆ ಮುಂದಿನ ನೂರು ದಿನ ರಾಜ್ಯದ ಬಗೆಗಿನ ನಮ್ಮ ಅಭಿವೃದ್ಧಿ ಕುರಿತಾಗಿನ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುತ್ತೇನೆ. ಕೃಷಿ ನೀರಾವರಿ ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ ಎಂದು ಹೇಳಿದರು.

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ. ನಾನಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ 4000 ಸೇರಿಸಿ ಮೊದಲ ಕಂತು ಬಿಡುಗಡೆ ಮಾಡಿದ್ದು, 25ಲಕ್ಷ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಅತಿವೃಷ್ಟಿ ಸಂತ್ರಸ್ತರಿಗೆ ಎಂ ಡಿ ಆರ್ ಎಫ್ ನಿಯಮ ಮೀರಿ ನೆರವು ನೀಡಿದ್ದೇವೆ. ರಾಜ್ಯದ ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ತೆರಿಗೆ ಸಂಗ್ರಹ ಸುಧಾರಿಸಿದೆ ಎಂದು ವಿವರಿಸಿದರು.

Leave a Reply