Image credit: Twitter source: news18

ಭಿಕ್ಷಾಟನೆ ಮಾಡುತ್ತಿದ್ದ ರಾಣು ಮಂಡಲ್ ಗಾಯಕಿಯಾಗಿ ಹೊರಹೊಮ್ಮಿದ್ದು, ಇದೀಗ ಯಾರೋ ಅಭಿಮಾನಿ ಮೈ ಮುಟ್ಟಿ ಮಾತನಾಡಿದ್ದಕ್ಕೆ ಗರಂ ಆದ ಬಗ್ಗೆ ವೀಪರೀತ ಟೀಕೆ ವ್ಯಕ್ತವಾಗುತ್ತಿದೆ.  ನಿಜ ಅವಳು ಅಷ್ಟು ಕಠಿಣವಾಗಿ ನಡೆದುಕೊಳ್ಳುವ ಅಗತ್ಯವಿರಲಿಲ್ಲ.
ಅದೇ ರೀತಿ ಅವಳ ಈ ವರ್ತನೆಗೆ ತೀರಾ ಅಸಭ್ಯ ನಿಂದನೆಗಳು, ಅವಳು ಘೋರ ಅಪರಾಧ ಮಾಡಿದ್ದಾಳೆ ಎಂದು ಬಿಂಬಿಸುವುದು ನಮ್ಮ ಸಮಾಜದ ಒಳ ಮನಸ್ಥಿತಿಯ ಸಣ್ಣ ಕ್ರೌರ್ಯವೂ ಹೌದು.

ಅವಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದವಳು. ಈಗ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ಅದಕ್ಕೆ ತಕ್ಕಂತೆ ವರ್ತಿಸುವ ಪ್ರಬುದ್ಧತೆ ಅವಳಲ್ಲಿ ಇರಲಿಕ್ಕಿಲ್ಲ. ಸಿನಿಮಾ ಸೆಲೆಬ್ರಟಿಗಳ ನಡುವೆ ಅವರಂತೆ ವರ್ತಿಸುವ ಪ್ರಭಾವಕ್ಕೂ ಒಳಗಾಗಿರಬಹುದು. ಅಲ್ಲದೇ ಯಾವುದು ಸರಿ ಯಾವುದು ತಪ್ಪು ಎಂದು ತಿಳಿ ಹೇಳುವ ಜನ ಅವಳ ಬಳಿ ಇಲ್ಲದಿರಲೂಬಹುದು. ಅವಳು ಈಗಲೂ ಅಷ್ಟೇ ಸುಂದರವಾಗಿ ಹಾಡುತ್ತ  ಭಿಕ್ಷೆ ಬೇಡುತ್ತಿದ್ದರೆ ಈ ಸೆಲ್ಪಿ ತೆಗೆದುಕೊಳ್ಳಲು ಹಾತೊರೆಯುತ್ತಿದ್ದರಾ. ಅವಳ ಮಗಳೂ ಸೇರಿ ಕೊಂಡದ್ದು ಈಗ ಅವಳ ಬಳಿ ಹಣ ಬಂದ ಮೇಲೆ!

ಅಂದ ಹಾಗೇ, ನಾವು ನಮ್ಮ ಇನ್ನೊಂದು ಮುಖವನ್ನು ನಾವೇ ಅನಾವರಣ ಮಾಡಿಕೊಳ್ಳಬೇಕಲ್ಲವೇ…

ಅವಳು ಭಿಕ್ಷೆ ಬೇಡುತ್ತ ಹಾಡಲು ಹಿಡಿದು ಕೆಲವು ವರ್ಷವೇ ಆಗಿತ್ತು. ಯಾರೋ ಪುಣ್ಯಾತ್ಮ ಅದನ್ನು ವಿಡಿಯೊ ಮಾಡಿ ಬಿಡುಗಡೆ ಮಾಡುವ ತನಕ ಲಕ್ಷಾಂತರ ಜನ ರೇಲ್ವೆ ನಿಲ್ದಾಣದಲ್ಲಿ ಅವಳನ್ನು ನಿರ್ಲಕ್ಷ್ಯ ಮಾಡಿದ್ದರಲ್ಲವೇ. ಅವಳಂತಹ_ಅನೇಕ ಭಿಕ್ಷುಕರು ಈಗಲೂ ಉತ್ತಮ_ಪ್ರತಿಭೆಗಳು ರಸ್ತೆಯಲ್ಲಿ ನಿಲ್ದಾಣಗಳಲ್ಲಿ ಸಿಗುತ್ತಾರೆ. ನಾವು ಪ್ರೀತಿಯಿಂದ ಅವರ_ಮೈದಡವಿ ಮಾತನಾಡಿಸಿ ಸೆಲ್ಪಿ ತೆಗಿತೀವಾ?

ಇಲ್ಲ ಅಲ್ವಾ.. ಅದೇ ನಮ್ಮ ಇನ್ನೊಂದು ಮುಖ. ನಮ್ಮ ಹಣೆಬಹರವೂ ಅಷ್ಟೇ. ನಮಗೆ ಸೆಲೆಬ್ರಿಟಿಯ ಪ್ರತಿಭೆ ಮಾತ್ರ ಗುರುತಿಸಿಲಿಕ್ಕಾಗುವುದು. ಹಣ,ಅಧಿಕಾರ,ಅಂತಸ್ತು ಇದ್ದವರ ಪ್ರತಿಭೆಗೆ( ಅದು ಜೊಳ್ಳಾಗಿದ್ದರೂ ಸರಿ)
ಭಾರೀ ಬೆಲೆ ಕೊಡುತ್ತೇವೆ. ನಮ್ಮ ನಿಮ್ಮ ನಡುವೆ ಇರುವ ಸರಳ ಪ್ರಾಮಾಣಿಕ ವ್ಯಕ್ತಿಗಳಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಅಂತವರನ್ನು ಮೂಲೆಗೆ ತಳ್ಳುತ್ತೇವೆ.

ಭಿಕ್ಷೆ ಬೇಡುವ ಪ್ರತಿಭೆಯನ್ನು ಹಚ್ ಹುಚ್ ಎಂದು ಓಡಿಸಿದ ಜನಕ್ಕೆ, ಅವಳ ಸಣ್ಣ ತಪ್ಪು ಇಷ್ಟೊಂದು ನೋವು ಕೊಡುವುದಾದರೆ, ಅಂತಹ ಲಕ್ಷಾಂತರ ಜನ ಬೀದಿಯಲ್ಲಿ ನಮ್ಮಿಂದ ದಿನ ನಿತ್ಯ ಛೀ ಥೂ ಅನ್ನಿಸಿಕೊಳ್ಳುವಾಗ ಅವರಿಗಾಗುವ ನೋವಿನ ಅಗಾಧತೆ ಎಷ್ಟಿದ್ದೀತು.

ಅವಳನ್ನ ಬಾಯಿಗೆ ಬಂದಂತೆ ಟ್ರೋಲ್ ಮಾಡುವ ಬದಲು ಹೋಗಿ ಬೀದಿ ಬದಿಯಲ್ಲಿನ ಇಂತಹ ಪ್ರತಿಭೆ ಸಿಕ್ಕಾಗ ಒಂದು ಸೆಲ್ಪಿ ತೆಗೆದುಕೊಳ್ಳೋಣ.

#ಎಂ ಜಿಹೆಗಡೆ

Leave a Reply