ಇದು ನಮ್ಮ ಊರು: ನಮ್ಮ ದೃಷ್ಟಿಯು ಗುರಿಯ ಕಡೆಗೆ ಕೇಂದ್ರೀಕೃತವಾಗಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಲ್ಲನು ಎಂಬುದನ್ನು ಕೇರಳದ ಎರ್ನಾಕುಲಂ ಜಿಲ್ಲೆಯ ಕೋಥಮಂಗಲಂನ ನಿವಾಸಿ ಸುಮೇಶ್ ಅವರು ಸಾಧಿಸಿ ತೋರಿಸಿದ್ದಾರೆ. ಬಡತನ ಕಾರಣದಿಂದಾಗಿ ಪ್ಲಸ್ ಟೂ ಗೆ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸಿ ತಂದೆಯ ಕ್ಷೌರಿಕ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ ಸುಮೇಶ್ ಇದೀಗ ಲಾಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದಾರೆ. ತಂದೆಯ ಅಂಗಡಿಯಲ್ಲಿ ಸಹಾಯಕರಾಗಿದ್ದ ಸುಮೇಶ್, ತಂದೆಯ ಆರೋಗ್ಯ ಕೆಟ್ಟು ಅವರು ಮನೆಯಲ್ಲೇ ಆದ ಬಳಿಕ ಅಂಗಡಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿ ಬಂತು.

ಸಾಧನೆಗೆ ಅಡ್ಡ ಬರಲಿಲ್ಲ ವೃತ್ತಿ ಜೀವನ

ಈತನ್ಮಧ್ಯೆ ಸುಮೇಶ್ ತಮ್ಮ 24 ನೇ ವಯಸ್ಸಿನಲ್ಲಿ ಖಾಸಗಿ ನೋಂದಣಿ ಮೂಲಕ ಬಿಎ ಎಕನಾಮಿಕ್ಸ್ ಅನ್ನು ಪೂರ್ಣಗೊಳಿಸಿದರು. ಆ ಬಳಿಕ ತಮ್ಮ ಮೂವತ್ತನೇ ವಯಸ್ಸಿಗೆ ಎಲ್ ಎಲ್ ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಷ್ಟದ ದಿನಚರಿಯ ಮಧ್ಯೆ ಮುಂದುವರಿದ ಶಿಕ್ಷಣ

ತಮ್ಮ ಕಲಿಕೆಯ ಸಮಯದಲ್ಲಿ ಸುಮೇಶ್ ಬೆಳಗಿನ ಸಮಯವನ್ನು ಕಾಲೇಜಿನಲ್ಲಿ ಕಳೆದರೆ, ಸಂಜೆ ಕಾಲೇಜಿನಿಂದ ಮರಳುತ್ತಲೇ 4.30 ರಿಂದ ರಾತ್ರಿ 10.00 ರವರೆಗೆ ಕ್ಷೌರಿಕ ಕೆಲಸ ಮಾಡಿ ಆ ಬಳಿಕ ಮನೆಗೆ ಮರಳಿ ಸುಮಾರು ಬೆಳಗಿನ ಜಾವ 1.30 ರ ವರೆಗೆ ಓದುತ್ತಾ ಇದ್ದರಂತೆ. ಪುನಃ ಮುಂಜಾನೆ 5.30 ಕ್ಕೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಕಾಲೇಜಿಗೆ ತೆರಳುತ್ತಿದ್ದರು. ಜುಲೈ ನಲ್ಲಿ ಎಲ್ ಎಲ್ ಬಿ ಫಲಿತಾಂಶ ಪ್ರಕಟವಾದಾಗ ಸುಮೇಶ್ ಖುಷಿಗೆ ಪಾರವೇ ಇರಲಿಲ್ಲ.

Leave a Reply