ರಾಂಚಿ: ವಲಸೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲು ಖುಂತಿ ಜಿಲ್ಲೆಯ ಗ್ರಾಮಕ್ಕೆ ಭೇಟಿ ನೀಡಿದ ಐವರು ಮಹಿಳೆಯರನ್ನು ಅಪಹರಿಸಿ ಗ್ಯಾಂಗ್-ರೇಪ್ ಮಾಡಿದ ಭಯಾನಕ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಅಪಹರಿಸಲ್ಪಟ್ಟವರು ಎನ್ಜಿಓ ಕಾರ್ಯಕರ್ತರಾಗಿದ್ದು ಮರುದಿನ ಯ ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕಿಸಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬಹಿರಂಗಗೊಂಡಿದೆ.

ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಇಲ್ಲಿಯವರೆಗೆ ಈ ಘಟನೆಯ ಕುರಿತು ಯಾವುದೇ ಬಂಧನಗಳು ನಡೆದಿಲ್ಲ. ಸಂಶಯಾಸ್ಪದ ವ್ಯಕ್ತಿಗಳನ್ನು ನಾವು ಪರಿಶೀಲಿಸುತ್ತಿದಾಗಿ ಪೊಲೀಸರು ತಿಳಿಸಿದ್ದಾರೆ.ಈ ಪ್ರಕರಣದ ತನಿಖೆ ನಡೆಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ರಾಂಚಿ ವಲಯದ ಡಿಐಜಿ ಎಚ್.ವಲಿ ಹೋಮ್ಕಾರ್ ಹೇಳಿದ್ದಾರೆ.

ಅನುಮತಿಯಿಲ್ಲದೆ ಈ ಪ್ರದೇಶಕ್ಕೆ ಪ್ರವೇಶಿಸಬಾರದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಅತ್ಯಾಚಾರರಕ್ಕೊಳಗಾದವರು ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಎನ್‍ಜಿಒ ಕಾರ್ಯಕರ್ತೆಯರಾದ ಮಹಿಳೆಯರು ಖುಂತಿ ಜಿಲ್ಲೆಯ ಕೊಚಾಂಗ್ ಬ್ಲಾಕ್‍ನಲ್ಲಿರುವ ಆರ್‌ಸಿ ಮಿಷನ್ ಶಾಲೆಯ ಆವರಣದಲ್ಲಿ ಬೀದಿ ನಾಟಕ ಪ್ರದರ್ಶಿಸುತ್ತಿದ್ದಾಗ ಈ ಅಪಹರಣ ನಡೆದಿದೆ ಎಂದು ಡಿಐಜಿ ಎಚ್.ವಲಿ ಹೋಮ್ಕಾರ್ ಹೇಳಿದ್ದಾರೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕಿಂತ ಗ್ರಾಮ ಸಭೆಯೇ ಇಲ್ಲಿ ಅಧಿಕಾರ ನಡೆಸುತ್ತದೆ. ಜಾರ್ಖಂಡ್‍ನ ಹಲವಾರು ಬುಡಕಟ್ಟು ಗ್ರಾಮಗಳಲ್ಲಿ ಈ ವ್ಯವಸ್ಥೆ ಇದೆ. ಈ ಅಧಿಕಾರ ವ್ಯವಸ್ಥೆಯನ್ನು ಪಥಲ್‍ಗಡಿ ಎಂದು ಹೇಳಲಾಗುತ್ತಿದ್ದು, ಈ ಪ್ರದೇಶಕ್ಕೆ ಬರಬಾರದು ಎಂದು ಅವರಿಗೆ ಬೆದರಿಕೆ ಇತ್ತು.

ಮಹಿಳೆಯರನ್ನು ಬಲವಂತವಾಗಿ ಕಾರಿನೊಳಗೆ ನೂಕಿ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಸಿದ್ದಾರೆ. ಈ ಅಪರಾಧಿಗಳು ಪಥಲ್‍ಗಡಿ ಬೆಂಬಲಿಗರಾಗಿದ್ದು, ಮೂರು ಗಂಟೆ ನಂತರ ಯುವತಿಯರನ್ನು ಬಿಡುಗಡೆ ಮಾಡಿದ್ದಾರೆ. ಮಾತ್ರವಲ್ಲ, ಎನ್ ಜಿಓ ಕಾರ್ಯಕರ್ತರ ಜೊತೆಗೆ ಇದ್ದ ಪುರುಷರ ಮೇಲೆ ಹಲ್ಲೆ ನಡೆಸಿದ್ದು, ಅವರಿಗೆ ಅವರದೇ ಮೂತ್ರವನ್ನು ಕುಡಿಸಲಾಗಿದೆ ಎಂದು ಆರೋಪಿಸಲಾಗಿದೆ.

Leave a Reply