ನವದೆಹಲಿ: ಮಹಿಳೆ ಗಂಡಿನ ಸೊತ್ತಲ್ಲ ಎಂದಿರುವ ಸುಪ್ರೀಂ ಕೋರ್ಟ್, ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾಯ್ದೆ ಅಸಂವಿಧಾನಿಕವಾಗಿದ್ದು ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಗುರುವಾರ ಹೇಳಿದೆ.

ವೈವಾಹಿಕ ಸಂಬಂಧದ ಪಾವಿತ್ರ್ಯ ಕಾಪಾಡಲು ಹಾದರಕ್ಕೆ ಶಿಕ್ಷೆ ವಿಧಿಸುವ ಕಾನೂನು ಅಗತ್ಯ ಎಂಬ ಕೇಂದ್ರ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಪೀಠ, ಇದು ಅಷ್ಟೊಂದು ಸಮರ್ಪಕ ವಾದ ಅಲ್ಲ ಎಂದಿದೆ.

ವಿವಾಹಿತ ಪುರುಷನೊಬ್ಬ ಅವಿವಾಹಿತ ಮಹಿಳೆಯ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಅದರಲ್ಲಿ ಅಪರಾಧವೇನೂ ಇಲ್ಲ. ಆದರೆ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ನಿಯಮವು ಗಂಡು ಮತ್ತು ಹೆಣ್ಣನ್ನು ತಾರತಮ್ಯದಿಂದ ನೋಡಿದಂತಾಗುತ್ತದೆ. ಹಾಗಾಗಿ ಇದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಪೀಠ ಅಭಿಪ್ರಾಯಪಟ್ಟಿದೆ.

ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಅನ್ನು ಪ್ರಶ್ನಿಸಿ ಜೋಸೆಫ್ ಶೈನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಬೇರೆ ವ್ಯಕ್ತಿಯ ಜತೆಗೆ ಹೆಂಡತಿಯ ಲೈಂಗಿಕ ಸಂಬಂಧದ ಸ್ವರೂಪ ಏನು ಎಂಬುದು ಗಂಡ ಒಪ್ಪಿಗೆ ಕೊಟ್ಟಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಅವಲಂಬಿಸಿದೆ. ಹೀಗಾಗಿ ಈ ಸೆಕ್ಷನ್ ಮಹಿಳೆಯನ್ನು ಗಂಡಿನ ಸೊತ್ತು ಎಂದು ಪರಿಗಣಿಸತ್ತದೆ ಎಂದಿದೆ.

ವಿವಾಹೇತರ ಸಂಬಂಧವೇ ಮದುವೆ ಮುರಿದು ಬಿದ್ದಿದೆ ಎಂಬುದರ ಸೂಚನೆಯಾಗಿದ್ದು, ಮಹಿಳೆಗೆ ಲೈಂಗಿಕ ಸಂಪರ್ಕ ಬೇಡ ಎನ್ನುವುದರ ಜೊತೆಗೆ ಲೈಂಗಿಕ ಸ್ವಾಯತ್ತೆಯೂ ಇದೆ. ಮದುವೆಯ ಕಾರಣಕ್ಕೆ ಮಹಿಳೆಯ ಲೈಂಗಿಕ ಹಕ್ಕನ್ನು ಮೊಟಕುಗೊಳಿಸಲಾಗದು ಎಂದು ಕೋರ್ಟ್ ಹೇಳಿದೆ.

Leave a Reply