ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಫೋಟೋವನ್ನು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದರು ಎಂಬ ಫೋಟೋ ವೈರಲ್ ಆಗಿದೆ.

ನಿಜಾಂಶ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಿಂದೆ ಮುಂದೆ ನೋಡದೆ ಇಂತಹ ಅನಾಮಧೇಯ ಫೋಟೋಗಳನ್ನು ಶೇರ್ ಮಾಡುತ್ತಾರೆ. ಮಾತ್ರವಲ್ಲದೆ, ಇಂದಿನ ದಿನಗಳಲ್ಲಿ ಫೇಕ್ ಫೋಟೋಗಳು ಮತ್ತು ಫೇಕ್ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಿದಾಡುತ್ತದೆ. ಜನ ಅದನ್ನು ಭಾವನಾತ್ಮಕವಾಗಿ ಪರಿಗಣಿಸಿ ಅವುಗಳನ್ನು ವೈರಲ್ ಮಾಡುತ್ತಾರೆ. ನಿಜವಾಗಿ ಭಾವನಾತ್ಮಕ ಫೋಟೋಗಳ ಮೂಲಕವೇ ಫೇಕ್ ಫೋಟೋಗಳು ಆಟವಾಡುತ್ತವೆ.

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಫೋಟೋವನ್ನು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದರು ಎಂಬ ವೈರಲ್ ಫೋಟೋ ಫೇಕ್ ಎಂಬುದು ತಿಳಿದು ಬಂದಿದೆ.

ಶಿವಾಜಿ ಜಯಂತಿ ಸಂದರ್ಭ ಅಖಿಲ ಭಾರತೀಯ ಶಿವರಾಜ್ಯಾಭಿಷೇಕ್ ಮಹೋತ್ಸವ್ ಸಮಿತಿ ಹೊಸ ದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಿವಾಜಿ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಇದೀಗ ಶಿವಾಜಿ ಫೋಟೋ ತಿರುಚಿ ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ಹಾಕಲಾಗಿದೆ.

ಫೇಕ್ ಫೋಟೋ ಸುದ್ದಿಗಳನ್ನು ಹೇಗೆ ಪತ್ತೆ ಹಚ್ಚಬಹುದು?

1. ಆಕರ್ಷಕ ಶೀರ್ಷಿಕೆ: ಸುಳ್ಳು ಸುದ್ದಿಗಳು ಹೆಚ್ಚಾಗಿ ಆಕರ್ಷಕ ಶೀರ್ಷಿಕೆಗಳನ್ನು ಹೊಂದಿರುತ್ತವೆ. ಈ ಸುದ್ದಿಗಳ ಶೀರ್ಷಿಕೆಗಳು ನೋಡಿದ ಕೂಡಲೇ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದ್ದು, ಒಳಗಿರುವ ಸುದ್ದಿಯಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಇರುವ ವಿಷಯಗಳು ಇರುವುದಿಲ್ಲ.

2. ಮೂಲ ಹುಡುಕಿ: ಸುದ್ದಿಯಲ್ಲಿ ಉಲ್ಲೇಖಿಸಿರುವ ಹೇಳಿಕೆ ಗಳು ಅಥವಾ ಇತರ ವಿಷಯಗಳ ಮೂಲ ಯಾವುದು ಎಂಬುದನ್ನು ಹುಡುಕಿ. ಆ ಮೂಲ ನಂಬಲರ್ಹವೇ ಎಂಬು ದನ್ನು ಪರಿಶೀಲಿಸಿ. ಅಲ್ಲಿ ಉಲ್ಲೇಖಿಸಿರುವ ಮೂಲಗಳು ಆ ಸುದ್ದಿಯನ್ನು ಪ್ರಕಟಿಸಿವೆಯೇ ಎಂಬುದನ್ನು ಗಮನಿಸಿ. ಒಂದು ವೇಳೆ ಪ್ರತ್ಯೇಕ ವೆಬ್‍ಸೈಟ್‍ವೊಂದು ಅಂಥದ್ದೇ ಸುದ್ದಿಗಳನ್ನು ಪ್ರಕಟಿಸುತ್ತಿದ್ದರೆ ಆ ವೆಬ್‍ಸೈಟ್‍ನ ಬಗ್ಗೆ ಅರಿಯುವುದು ಒಳಿತು.

3. ಯುಆರ್‌ಎಲ್ ನೋಡಿ: ಕೆಲವು ಪ್ರಮುಖ ವೆಬ್‌ಸೈಟ್‌ಗಳ ಸುದ್ದಿಗಳನ್ನು ಹೋಲುವಂಥ ಸುದ್ದಿಗಳು ಕಂಡು ಬಂದರೆ ಆ ಸುದ್ದಿಯ ಯುಆರ್‍ಎಲ್ ಗಮನಿಸಿ. ಪ್ರಮುಖ ವೆಬ್‌ಸೈಟ್‌ಗಳ ಹೆಸರಿನ ಹೋಲಿಕೆ ಇದ್ದರೂ ಅದರ ಸ್ಪೆಲಿಂಗ್‌‍ನಲ್ಲಿ ಚಿಕ್ಕ ಬದಲಾವಣೆ ಮಾಡಿರುತ್ತಾರೆ. ಯುಆರ್‍ಎಲ್ ನೋಡಿದರೆ ಈ ಸ್ಪೆಲಿಂಗ್ ದೋಷ ಪತ್ತೆ ಹಚ್ಚಿ ಸುದ್ದಿಯನ್ನು ಯಾವ ವೆಬ್‍ಸೈಟ್ ಪ್ರಕಟಿಸಿದೆ ಎಂಬುದನ್ನು ತಿಳಿಯಬಹುದು.

4. ಚಿತ್ರಗಳನ್ನು ಗಮನಿಸಿ: ಸುಳ್ಳು ಸುದ್ದಿಯಲ್ಲಿ ಬಳಸಿರುವ ಚಿತ್ರಗಳು ಅಥವಾ ವಿಡಿಯೊಗಳು ಕೂಡ ಸುಳ್ಳಾಗಿರುತ್ತವೆ. ಕೆಲವೊಂದು ಚಿತ್ರಗಳನ್ನು ತಿರುಚಲಾಗಿರುತ್ತದೆ. ಹೀಗಿರುವಾಗ ಗೂಗಲ್ ಇಮೇಜ್ ಸರ್ಚ್ ಮಾಡಿ ಆ ಚಿತ್ರ ನಿಜವೋ ಸುಳ್ಳೋ ಎಂದು ಪರೀಕ್ಷಿಸುವುದು ಮಾತ್ರವಲ್ಲದೆ ಚಿತ್ರದ ಮೂಲ ಯಾವುದು ಎಂಬುದನ್ನೂ ಪತ್ತೆ ಹಚ್ಚಬಹುದು.

5. ತಮಾಷೆ ಸುದ್ದಿಯೂ ಆಗಿರಬಹುದು: ಕೆಲವೊಂದು ವೆಬ್‍ಸೈಟ್‌ಗಳು ತಮಾಷೆಗಾಗಿ ಸುದ್ದಿಗಳನ್ನು ಪ್ರಕಟಿಸುವುದುಂಟು. ಇಂಥ ಸುದ್ದಿಗಳ ಕೆಳಗೆ ಈ ಸುದ್ದಿಗಳು ಕೇವಲ ತಮಾಷೆಗಾಗಿ ಎಂದು ಬರೆದಿರುತ್ತದೆ. ಆದರೆ ಇದನ್ನು ನಿಜ ಎಂದು ನಂಬಿ ಆ ಸುದ್ದಿಗಳೂ ಸಾಮಾಜಿಕ ತಾಣದಲ್ಲಿ ಶೇರ್ ಆಗುತ್ತವೆ. ಹಾಗಾಗಿ ಸುದ್ದಿಗಳನ್ನು ಪೂರ್ತಿಯಾಗಿ ಓದಿ, ಅವು ನಿಜವೇ ಎಂದು ದೃಢಪಡಿಸಿ.

Leave a Reply